ಮಡಿಕೇರಿ: ಕೊಡಗಿನ ಕೈಲ್ ಪೋಳ್ದ್ ಹಬ್ಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಗಣ್ಯರು ಶುಭ ಕೋರಿದ್ದಾರೆ. ಸಮಸ್ತ ಕೊಡವ ಬಾಂಧವರಿಗೆ ಕೈಲ್ ಪೋಳ್ದ್ ಹಬ್ಬದ ಹಾರ್ದಿಕ ಶುಭಾಶಯಗಳು. ಕೊಡಗಿನ ರೈತಾಪಿ ವರ್ಗ ತಾನು ದಿನನಿತ್ಯ ಬಳಸುವ ಆಯುಧಗಳಿಗೆ ಪೂಜೆ ಸಲ್ಲಿಸುವ ಮೂಲಕ ಕೃತಜ್ಞತಾ ಭಾವವನ್ನು ಸಂಭ್ರಮ, ಸಡಗರದಿಂದ ಆಚರಿಸುವ ಹಬ್ಬ ಇದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಶುಭ ಕೋರಿದ್ದು, ನಾಡಿನ ಸಮಸ್ತ ಜನತೆಗೆ ಕೈಲ್ ಪೋದ್ ಹಬ್ಬದ ಶುಭಾಶಯಗಳು. ಈ ಹಬ್ಬವುಎಲ್ಲರ ಬಾಳಲ್ಲಿ ಸುಖ ಹಾಗೂ ಸಮೃದ್ಧಿ ತರಲಿ ಎಂದು ಪ್ರಾರ್ಥಿಸುತ್ತೇವೆ ಎಂಬುವುದಾಗಿ ಟ್ವೀಟ್ ಮಾಡಿದ್ದಾರೆ.
ಸಚಿವ ಡಾ. ಸುಧಾಕರ್ ಕೂಡ ಆಯುಧ ಪೂಜೆಯ ಚಿತ್ರವನ್ನು ಟ್ವೀಟ್ ಮಾಡುವುದರೊಂದಿಗೆ ಕೊಡಗಿನ ಕೈಲ್ ಮುಹೂರ್ತ ಹಬ್ಬಕ್ಕೆ ಶುಭ ಕೋರಿದ್ದಾರೆ. ಹಲವು ಗಣ್ಯರು ಕೂಡ ಶುಭ ಕೋರಿದ್ದಾರೆ.
ಸಾಂಪ್ರದಾಯಿಕ ಆಯುಧಗಳಿಗೆ ವಿಶೇಷ ಪೂಜೆ :
ಪ್ರಾಕೃತಿಕ ವಿಕೋಪ, ಪ್ರವಾಹ, ಕೋವಿಡ್ ಸಂಕಷ್ಟ ಹೀಗೆ ೪ ವರ್ಷದ ನಂತರ ಜಿಲ್ಲೆಯಾಧ್ಯಂತ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಯಿತು. ಕೃಷಿ ಚಟುವಟಿಕೆಯಲ್ಲಿ ತೊಡಗಿ ನಾಟಿಕಾರ್ಯ ಮುಗಿಸಿದ್ದ ರೈತರು, ಕೃಷಿ ಪರಿಕರ ಮತ್ತು ಕೊಡಗಿನ ಸಾಂಪ್ರದಾಯಿಕ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕೈಲ್ ಮುಹೂರ್ತ ಹಬ್ಬದಲ್ಲಿ ಕೋವಿ ಪೂಜಿಸಲು ’ತೋಕುಪೂ’ ಬಳಸುವುದು ವಿಶೇಷವಾಗಿದೆ. ತೋಕು ಎಂದರೆ ಕೋವಿ, ಪೂ ಎಂದರೆ ಹೂವು ಎಂದರ್ಥ. ಕಾಡುಗಳಲ್ಲಿ ಬೆಳೆಯುವ ಸುಂದರವಾದ ಈ ಹೂವು ಕೈಲು ಮುಹೂರ್ತ ಹಬ್ಬದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಈ ಹೂವನ್ನು ಕಾಡಿನಿಂದ ತಂದು ಕೋವಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕೈಲ್ ಮುಹೂರ್ತ ಹಬ್ಬದ ನಂತರ ಕತ್ತಿ, ಕೋವಿಗಳು ಬಳಕೆಯಾದರೆ ಅಲ್ಲಿಯವರೆಗೆ ವ್ಯವಸಾಯದಲ್ಲಿ ಬಳಕೆಯಾದ ನೇಗಿಲು, ನೊಗ ಇತ್ಯಾದಿ ಉಪಕರಣಗಳಿಗೆ ವಿರಾಮ ದೊರೆಯುತ್ತದೆ. ಈ ಎಲ್ಲಾ ಉಪಕರಣ ತೊಳೆದು ಪೂಜೆ ಸಲ್ಲಿಸಲಾಯಿತು. ಉಳುಮೆ ಮಾಡಿದ ಎತ್ತುಗಳ ಮೈ ತೊಳೆದು ಅವುಗಳಿಗೆ ಕುಂಕುಮ, ಗಂಧ ಹಚ್ಚಿ ಅಲಂಕರಿಸಲಾಗಿತ್ತು. ಕೈಲು ಮುಹೂರ್ತ ಹಬ್ಬದ ವಿಶೇಷವಾಗಿರುವ ಕಡಂಬಿಟ್ಟು ಹಾಗೂ ಹಂದಿ ಮಾಂಸದ ಊಟ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇವಿಸಿದರು.
ವಿಶೇಷ ಖಾದ್ಯದ ಊಟದ ಬಳಿಕ ಎಲ್ಲರೂ ಊರ್ ಮಂದ್‌ನಲ್ಲಿ ಸೇರಿ ಅಲ್ಲಿ ಕೋವಿಯ ಮೂಲಕ ತೆಂಗಿನ ಕಾಯಿಗೆ ಗುಂಡು ಹಾರಿಸಿ ಹಬ್ಬ ಆಚರಿಸಲಾಯಿತು. ಮರದ ತುದಿಗೆ ತೆಂಗಿನಕಾಯಿ ಕಟ್ಟಿ ಅದಕ್ಕೆ ಗುಂಡು ಹೊಡೆಯುವುದು ವಾಡಿಕೆ ಮತ್ತು ಇದು ಜನಪದೀಯ ಕ್ರೀಡೆಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಹಬ್ಬದ ಬಹುತೇಕ ಆಚರಣೆಗಳು ಮರೆಯಾಗಿವೆಯಾದರೂ ಹಿರಿಯರು ಯುವ ಸಮೂಹದಲ್ಲಿ ಕೊಡಗಿನ ಹಬ್ಬ, ಸಂಸ್ಕೃತಿಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.
ಮಾಂಸ ಖರೀದಿ: ಹಬ್ಬಕ್ಕೆ ಮುಖ್ಯ ಖಾದ್ಯವಾಗಿರುವ ಹಂದಿ ಮಾಂಸಕ್ಕಾಗಿ ಸಾರ್ವಜನಿಕರು ನಗರದ ಮಳಿಗೆಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸಿದರು. ಬಿಸಿಲಿನ ವಾತಾವರಣ ಇದ್ದ ಹಿನ್ನೆಲೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಮಾಂಸ, ಮದ್ಯ ಖರೀದಿಸಿ ಮನೆಯತ್ತ ಸಾಗಿದರು.