ವಿನುತ ಪುರುಷೋತ್ತಮ್
ಹಳೆಯ ಹಾಡು ಹಾಡು ಮತ್ತೆ
ಇಂದಿಗೆ ಹೊಸತು ನಾಳೆಗೆ ಹಳತು. ಆದರೆ ಅದು ನಿತ್ಯ ನೂತನವಾಗಬೇಕಾದರೆ ಅದರೊಳಗೊಂದು ಶಕ್ತಿ ಇರಬೇಕು, ಸ್ವಾದ ಬೇಕೇ ಬೇಕು.
ಹೀಗೊಂದು ಸ್ವಾದವನ್ನು ಬದುಕಿನ ಹಲವು ಘಟ್ಟಗಳಲ್ಲಿ ಹೀರಿಕೊಂಡಿರುತ್ತೇವೆ. ಆದರೆ ಮತ್ತೆ ಅದೇ ಸ್ವಾದ ಬೇಕು ಎಂದರೆ ಸಿಕ್ಕದು. ಸಿಕ್ಕಿದರೂ ಮೊದಲ ತೀವ್ರತೆ ಇರುವುದೇ ಎಂಬುದಕ್ಕೆ ನಿಖರ ಉತ್ತರ ಕಷ್ಟ.
ಗೆಳೆಯ, ಗೆಳತಿಯ ಕೈ ಹಿಡಿದು ಕಾಡಿನ ನಡುವಲ್ಲಿನ ಬೆಟ್ಟದ ಮೆಟ್ಟಿಲನ್ನು ಏರಿದ್ದ ಮೊದಲ ಫೀಲ್, ತಂದೆಯೊಟ್ಟಿಗೆ ಸುತ್ತಾಡಿದ ಪೇಟೆ ಬೀದಿಯ ನೆನಪು, ತಾಯಿ ಮಾಡಿಸುತ್ತಿದ್ದ ಮಜ್ಜನ, ಅಜ್ಜಿಯ ಬೆಚ್ಚಗಿನ ಪ್ರೀತಿ, ಅಚ್ಚನ ನೆನಪುಗಳೆಲ್ಲವೂ ಈಗಲೂ ಇದ್ದರೂ, ಅವೆಲ್ಲವೂ ಮತ್ತೆ ಪುನರಾವರ್ತನೆಯಾದರೂ ಮೊದ ಮೊದಲು ಸಿಕ್ಕ ಒಟ್ಟಂದ ಮತ್ತೆ ದೊರಕದು. ಅದಕ್ಕಾಗಿಯೇ ಅಲ್ಲವೇ ‘ಮೈ ಆಟೋಗ್ರಾಫ್’ ಚಿತ್ರದ ಸವಿ ಸವಿ ನೆನಪು ಸಾವಿರ ನೆನಪು ಹಾಡು ಅಷ್ಟೊಂದು ಹಿಟ್ ಆಗಿದ್ದು, ಎಲ್ಲರೂ ಗುನುಗಿ ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದು.
ಇದಕ್ಕಾಗಿಯೇ ಮೊದಲ ಅನುಭವಗಳ ಹಿತವಾದ ಸೆಳೆತ ಎಲ್ಲರ ಬಾಳಲ್ಲೂ ಇದ್ದೇ ಇರುತ್ತದೆ. ಅವುಗಳ ಹಂಗಿನಲ್ಲಿಯೇ ಹೊಸ ಸಂತೋಷಗಳನ್ನು ಮನುಷ್ಯ ಹುಡುಕಿ ಹೊರಡುತ್ತಾನೆ. ಇವುಗಳಿಂದಲೇ ಹೊಸ ಜೀವ ಸೆಲೆ ಸದಾ ಹರಿಯುವುದು. ಅದಕ್ಕಾಗಿಯೇ ಕವಿ ಜಿ.ಎಸ್.ಶಿವರುದ್ರಪ್ಪ ‘ಹಳೆಯ ಹಾಡು ಹಾಡು ಮತ್ತೆ ಅದನೇ ಕೇಳಿ ತಣಿಯುವೆ, ಹಳೆಯ ಹಾಡಿನಿಂದ ಹೊಸತು ಜೀವನವ ಕಟ್ಟುವೆ’ ಎಂದಿರುವುದು.