Mysore
21
broken clouds

Social Media

ಗುರುವಾರ, 26 ಡಿಸೆಂಬರ್ 2024
Light
Dark

ಮಹಾಪೌರರ ಮೀಸಲಾತಿ ಮತ್ತಷ್ಟು ವಿಳಂಬ ಸಲ್ಲದು

ಭಾರತ ಸರ್ಕಾರದ ಸಂರಚನೆಗೆ ಒಕ್ಕೂಟ ವ್ಯವಸ್ಥೆಯೇ ತಳಪಾಯ. ಅಧಿಕಾರ ವಿಕೇಂದ್ರೀಕರಣದಿಂದ ಜನಸಾಮಾನ್ಯರ ಆಗುಹೋಗುಗಳು, ನಿರೀಕ್ಷೆಗಳ ಆಳ ಅರಿಯುವಿಕೆ, ಸರ್ಕಾರದ ಸವಲತ್ತು ತಲುಪಿಸುವಿಕೆಗೆ ಮುಖ್ಯ ಭೂಮಿಕೆಯಾಗಿದೆ. ಇದು ಸಂವಿಧಾನದಲ್ಲೂ ಅಡಕವಾಗಿದೆ. ಸಂವಿಧಾನದತ್ತವಾಗಿ ಹಕ್ಕುಬಾಧ್ಯತೆಗಳನ್ನು ಪಡೆದುಕೊಂಡ ನಗರಾಡಳಿತ ಕೂಡ ಇಂತಿಷ್ಟು ಕಾಲಮಿತಿಯೊಳಗೆ ನಗರವಾಸಿಗಳಿಗೆ ನೀಡಬಹುದಾದ ಆಡಳಿತವನ್ನು ಕಿಂಚಿತ್ತೂ ವಿಳಂಬ ಮಾಡದೆ, ಜನಾಧಿಕಾರ ಬಳಸಿಯೇ ನೀಡಬೇಕಾಗಿರುವುದು ನೈತಿಕವಾಗಿಯೂ ಸರಿಯಾದ ಕ್ರಮ.

ರಾಜ್ಯದ ಆರು ನಗರಪಾಲಿಕೆಗಳಲ್ಲಿ ಮೈಸೂರು ಮಹಾನಗರಪಾಲಿಕೆ ಕೂಡ ದೀರ್ಘ ಇತಿಹಾಸವುಳ್ಳ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಬಳಿಕ ಎರಡನೇ ಸ್ಥಾನದಲ್ಲಿರುವ ಸ್ಥಳೀಯ ಸಂಸ್ಥೆಯಾಗಿದೆ. ಈ ಹಿಂದೆ ಮೈಸೂರು ಸಂಸ್ಥಾನವನ್ನು ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ಮಾದರಿಯನ್ನು ಇಂದಿಗೂ ಅನುಸರಿಸಿಕೊಂಡು ಬಂದಿರುವ ಆಡಳಿತ ಕೇಂದ್ರವಾಗಿದೆ. ಕಳೆದ ೨೦೨೧-೨೨ನೇ ಸಾಲಿನ ಮೇಯರ್- ಉಪಮೇಯರ್ ಹುದ್ದೆಗಳನ್ನು ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಪಕ್ಷವಾದ ಬಿಜೆಪಿ ಮತ್ತು ವಿಪಕ್ಷಗಳಲ್ಲಿ ಒಂದಾದ ಜಾ.ದಳ ಹೊಂದಾಣಿಕೆಯಾಗಿ ಹಂಚಿಕೊಂಡವು. ಆ ಹುದ್ದೆಗಳ ಅವಧಿ ಮುಗಿದು ಐದು ತಿಂಗಳು ಕಳೆದಿದ್ದರೂ ರಾಜ್ಯವಾಳುವ ಸರ್ಕಾರ ಮಾತ್ರ ಗಂಭೀರವಾಗಿ ಪರಿಗಣಿಸದೆ ಕ್ಷುಲ್ಲಕ ಕಾರಣಗಳನ್ನೊಡ್ಡಿ ಮುಂದೂಡುತ್ತ ಬಂದಿದೆ.

ಇತ್ತೀಚೆಗೆ ಮೈಸೂರಿಗೆ ಬಂದಿದ್ದ ಜಿಲ್ಲಾ ಉಸ್ತುವರಿ ಸಚಿವರಾದ ಎಸ್.ಟಿ.ಸೋಮಶೇಖರ್ ಒಂದೆರಡು ದಿನಗಳಲ್ಲಿ ಮೀಸಲಾತಿ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಮೈಸೂರಿಗೆ ಬಂದಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರೂ ಇದೇ ತರಹದ ಮಾತುಗಳನ್ನಾಡಿ ಹೋದರು. ಆದರೆ, ಮಹಾಪೌರ- ಉಪಮಹಾಪೌರರ ಅಧಿಕಾರಾವಧಿ ಮುಗಿದು ಐದು ತಿಂಗಳು ಕಳೆದರೂ ಮೀಸಲಾತಿ ಪ್ರಕಟಿಸಲು ರಾಜ್ಯಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದಿ ಸರಿಯಲ್ಲ. ದಸರಾ ಮಹೋತ್ಸವ ಮುಗಿಯುವ ತನಕ ಮೀಸಲಾತಿ ಪ್ರಕಟಿಸದಂತೆ ಕೆಲ ಕಾಣದ ಕೈಗಳು ತಡೆಯೊಡ್ಡಿವೆ ಎಂಬ ಮಾತುಗಳು ರಾಜಕೀಯ ಪಡಸಾಲೆಯ ಹರಿದಾಡುತ್ತಿದೆ. ಮಹಾಪೌರರ ಚುನಾವಣೆ ನಡೆಸಲು ಮೀಸಲಾತಿ ಪಟ್ಟಿ ಸಿದ್ಧಪಡಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಂಕಿತಕ್ಕೆ ಕಳುಹಿಸಿದ್ದರೂ ಈ ಕಾಣದ ಕೈಗಳು ತಡೆಯೊಡ್ಡಿರುವುದು ಪ್ರಜಾಪ್ರಭುತ್ವದ ಕುಹಕವಾಗಿದೆ.

ಮಹಾಪೌರರ ಚುನಾವಣೆ ನಡೆಸಲು ಈತನಕ ಮೀಸಲಾತಿ ಪ್ರಕಟಿಸದೇ ಹಾಲಿ ಮಹಾಪೌರರಾದ ಸುನಂದ ಪಾಲನೇತ್ರ ಅವರನ್ನೇ ಮುಂದುವರಿಸಲು ಅವಕಾಶ ಮಾಡಿಕೊಡುತ್ತಿರುವ ಬಗ್ಗೆ ಜಾ.ದಳ ಆಕ್ಷೇಪ ವ್ಯಕ್ತಪಡಿಸಿದೆ. ಬಿಜೆಪಿ ವಲಯದಲ್ಲೂ ಒಳಗೊಳಗೆ ಅಸಮಾಧಾನ ಕೂಡ ಮೂಡಿದೆ. ಇದರಿಂದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲೇ ಮೀಸಲಾತಿ ಪ್ರಕಟಿಸುವಂತೆ ಮನವೊಲಿಸಿದ್ದಾರೆ ಎನ್ನಲಾಗಿದೆ. ಮಹಾಪೌರರಾದ ಸುನಂದಾ ಪಾಲನೇತ್ರ, ಉಪಮಹಾಪೌರ ಅನ್ವರ್ ಬೇಗ್ ಅವಧಿಯು ಫೆಬ್ರವರಿ ತಿಂಗಳು ೨೪ಕ್ಕೆ ಮುಕ್ತಾಯವಾಗಿದ್ದರಿಂದ ಮೀಸಲಾತಿ ಪ್ರಕಟಿಸಿ ಚುನಾವಣೆ ನಡೆಸಬೇಕಿತ್ತು. ಆದರೆ, ಸರ್ಕಾರ ಸುಪ್ರೀಂಕೋರ್ಟ್ ವಿಚಾರವನ್ನು ಮುಂದಿಟ್ಟುಕೊಂಡು ಮೀಸಲಾತಿ ಪ್ರಕಟಿಸಿರಲಿಲ್ಲ.

ನೂತನ ಮಹಾಪೌರರು ಆಯ್ಕೆಯಾಗುವ ತನಕ ಯಾವುದೇ ಸಭೆ ನಡೆಸುವುದು, ಪ್ರಮುಖ ನಿರ್ಣಯಗಳನ್ನು ಕೈಗೊಳ್ಳದೇ ಹಂಗಾಮಿ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ಇದ್ದ ಕಾರಣ ಸುನಂದಾ ಪಾಲನೇತ್ರರ ಆಡಳಿತ ನಿರಾಂತಕವಾಗಿ ಮುಂದುವರಿದಿತ್ತು. ಇದರ ನಡುವೆ ಏಪ್ರಿಲ್ ತಿಂಗಳಲ್ಲಿ ಬಜೆಟ್ ಮಂಡಿಸಿ ೨೦೨೨-೨೩ನೇ ಸಾಲಿನ ಆಯವ್ಯಯಕ್ಕೆ ಒಪ್ಪಿಗೆ ಪಡೆಯಬೇಕಿದ್ದ ಕಾರಣ ಸಿಎಂ ಅವರಿಂದ ಒಪ್ಪಿಗೆ ಪಡೆದು ಬಜೆಟ್ ಮಂಡಿಸಲಾಗಿತ್ತು. ಮೇ ತಿಂಗಳಲ್ಲಿ ಮಹಾಪೌರ ಸ್ಥಾನವು ಪರಿಶಿಷ್ಟ ಪಂಗಡ ಅಥವಾ ಸಾಮಾನ್ಯ ವರ್ಗಕ್ಕೆ ಮೀಸಲಾಗಿ ಪ್ರಕಟಿಸಲಾಗುತ್ತದೆ ಎನ್ನುವ ಮಾತು ಹೊರ ಬರುತ್ತಿದ್ದಂತೆ ಚಟುವಟಿಕೆಗಳು ಜೋರಾಗಿ, ಮತ್ತೆ ಕೆಲವೇ ದಿನಗಳಲ್ಲಿ ಮರೆಯಾದವು. ಅದೇ ರೀತಿ ಮೈಸೂರು ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಪ್ರಕಟಿಸುತ್ತೇವೆಂದು ಹೇಳಿ ಹೋದರೂ ಈವರೆಗೂ ಪ್ರಕಟವಾಗಿಲ್ಲ. ಶನಿವಾರವಷ್ಟೇ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಇನ್ನೆರಡು-ಮೂರು ದಿನಗಳಲ್ಲಿ ಮೀಸಲಾತಿ ಪ್ರಕಟಿಸುತ್ತೇವೆಂದು ಹೇಳುವ ಮೂಲಕ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಲು ನಾಂದಿಯಾಡಿದ್ದಾರೆ. ಆದರೆ, ಸಚಿವರ ಮಾತು ಹೊರ ಬೀಳುತ್ತಿದ್ದಂತೆ ಸದ್ದಿಲ್ಲದೆ ನಡೆದ ರಾಜಕೀಯ ಬೆಳವಣಿಗೆಗಳು ಮೀಸಲಾತಿ ಪ್ರಕಟಕ್ಕೆ ತಡೆಯೊಡ್ಡಲಾಗಿದೆ ಎಂಬುದು ಯಾರೂ ಒಪ್ಪುವಂತಹದ್ದಲ್ಲ. ವಿಶ್ವವಿಖ್ಯಾತ ನಾಡಹಬ್ಬ ದಸರಾ ಬಂತಂದರೆ ನಗರಾದ್ಯಂತ ಕೋಟ್ಯಂತರ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಚಟುವಟಿಕೆಗಳು ಆರಂಭವಾಗುತ್ತವೆ. ಸುಣ್ಣ ಬಣ್ಣ ಬಳಿಯುವ ಕಾರ್ಯವೂ ನಡೆಯಬೇಕಿದೆ. ಇದೆಲ್ಲದರ ಉಸ್ತುವಾರಿಯನ್ನು ನಗರಪಾಲಿಕೆಯೇ ನಿರ್ವಹಿಸಬೇಕಾದ್ದರಿಂದ ಆದಷ್ಟು ಶೀಘ್ರವಾಗಿ ಶಾಸನಬದ್ಧ ಅಧಿಕಾರ ಚಲಾಯಿಸುವಂತಹ ಹುದ್ದೆಗಳನ್ನು ಆಯ್ಕೆ ಮಾಡಬೇಕಾದ ತುರ್ತು ಸರ್ಕಾರದ ಮೇಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ