ಮೈಸೂರು: ಮೈಸೂರು ಅರಮನೆ ಕುರಿತ ಹೇಳಿಕೆಯನ್ನು ಯತೀಂದ್ರ ಸಿದ್ದರಾಮಯ್ಯ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮಹಾರಾಜರು ಅರಮನೆ ಕಟ್ಟಿಸಿದ್ದು ಜನರ ತೆರಿಗೆಯ ಹಣದಿಂದಲೇ. ಹೀಗಾಗಿ ಎಲ್ಲವೂ ಜನರಿಗೇ ಸೇರಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಅರಮನೆ ಖಾಸಗಿ ಸ್ವತ್ತು, ಅದನ್ನು ಸರ್ಕಾರ ಕಟ್ಟಿಸಿಲ್ಲ ಎಂಬ ಪ್ರಮೋದಾ ದೇವಿ ಒಡೆಯರ್ ಅವರ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ.
“ಸಿಂಹಾಸನ, ಅಂಬಾರಿ ಸರ್ಕಾರದ್ದು ಎಂದು ನಾನು ಎಲ್ಲಿಯೂ ಹೇಳಿಲ್ಲ. ನಾವು ಬಾಡಿಗೆ ಕೊಡುತ್ತೇವೆ ಎಂದು ಹೇಳಿದ್ದೆ. ಅವರು ಅದನ್ನು ಗೌರವಧನ ಎಂದಿದ್ದಾರೆ. ಇದರಲ್ಲಿ ಅಂತಹ ವ್ಯತ್ಯಾಸವಿಲ್ಲ” ಎಂದು ಯತೀಂದ್ರ ಹೇಳಿದ್ದಾರೆ.
“ಅರಮನೆ ಕಟ್ಟಿಸಿದ್ದು ಮಹಾರಾಜರೇ ಎಂಬುದನ್ನು ನಾನು ನಿರಾಕರಿಸಿಲ್ಲ. ಆದರೆ ಅದಕ್ಕೆ ಬಳಕೆಯಾಗಿದ್ದು ಜನರ ತೆರಿಗೆಯ ಹಣ” ಎಂದು ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ.




