ಬೆಂಗಳೂರು: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ದೀಪಾವಳಿ ಹಬ್ಬದ ಪ್ರಯುಕ್ತ 2,600 ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಿದೆ.
ನ.8 ರಂದು ನರಕಚತುರ್ದಶಿ, ನ.10 ರಂದು ಬಲಿಪಾಡ್ಯಮಿ ಇದ್ದು, ನ.7 ಮತ್ತು 8 ರಂದು ವಾರಾಂತ್ಯದ ದಿನಗಳಾಗಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ನ.6 ರಿಂದ ನ.8 ರವರೆಗೆ ನಗರದಿಂದ ರಾಜ್ಯ ಹಾಗೂ ಅಂತರಾಜ್ಯದ ವಿವಿಧ ಸ್ಥಳಗಳಿಗೆ 2,600 ಹೆಚ್ಚುವರಿ ವಿಶೇಷ ಬಸ್‌ಗಳ ಸೇವೆಯನ್ನು ಒದಗಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.
ರಾಜ್ಯ ಹಾಗೂ ಅಂತರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ನ.10 ಮತ್ತು ನ. 11 ರಂದು ವಿಶೇಷ ಬಸ್‌ಗಳ ಸೇವೆಯನ್ನು ಒದಗಿಸಲಾಗುತ್ತದೆ. ಈ ಬಸ್‌ಗಳ ಸೇವೆಯು ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ, ಶಾಂತಿನಗರ ಟಿಟಿಎಂಸಿ ನಿಲ್ದಾಣಗಳಿಂದ ಒದಗಿಸಲಾಗುತ್ತದೆ. ಮುಂಗಡ ಕಾಯ್ದಿರಿಸಿದ ಹೆಚ್ಚುವರಿ ವಾಹನಗಳನ್ನು ಬಿಎಂಟಿಸಿಯ ಶಾಂತಿನಗರ, ವಿಜಯನಗರ, ಯಶವಂತಪುರ ಟಿಟಿಎಂಸಿಗಳಲ್ಲಿ ಹಾಗೂ ಮಲ್ಲೇಶ್ವರಂ 18ನೇ ಕ್ರಾಸ್‌ನ ಬಸ್ ನಿಲ್ದಾಣ, ಬಸವೇಶ್ವರನಗರ ಬಸ್ ನಿಲ್ದಾಣ, ಎಲೆಕ್ಟ್ರಾನಿಕ್‌ಸಿಟಿ, ಅತ್ತಿಬೆಲೆ, ಟಿನ್ ಫ್ಯಾಕ್ಟರಿ ಮೊದಲಾದ ಸ್ಥಳಗಳಿಂದ ಒದಗಿಸಲಾಗುವುದು.
ಕೆಂಪೇಗೌಡ ಬಸ್ ನಿಲ್ದಾಣದಿಂದ ಉಡುಪಿ, ಕುಂದಾಪುರ, ಪುತ್ತೂರು, ಮಂಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಹಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ದಾವಣಗೆರೆ, ಗೋಕರ್ಣ, ಹಾಸನ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್‌ಗಳಿಗೆ ಬಸ್ ಸೇವೆ ಇರಲಿದೆ. ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಕೇರಿ ಮಾರ್ಗದ ಕಡೆ ಬಸ್ ಸೇವೆ ಒದಗಿಸಲಾಗುವುದು.




