ಮೈಸೂರು: ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರಕ್ಕೆ ಬರೆದಿರುವ ಪತ್ರಕ್ಕೆ ಅಧಿಕೃತವಾಗಿ ಉತ್ತರ ನೀಡಲಾಗುವುದು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮಾತನಾಡಿದ ಅವರು, ದಸರಾವನ್ನು ಏಳು ದಿನಗಳಿಗೆ ಸೀಮಿತಗೊಳಿಸುವುದು ಹಾಗೂ ಎರಡು ದಿನ ಅರಮನೆಯನ್ನು ಮುಕ್ತವಾಗಿಡುವ ವಿಚಾರಗಳ ಕುರಿತು ಸದ್ಯ ಏನನ್ನೂ ಹೇಳಲು ಬಯಸುವುದಿಲ್ಲ ಎಂದರು.
ಪ್ರಮೋದಾದೇವಿ ಒಡೆಯರ್ ಅವರೊಂದಿಗೆ ಮಾತುಕತೆಗೆ ಸಿದ್ಧರಿದ್ದೇವೆ. ಅವರು ಕರೆದರೆ ಹೋಗಿ ಮಾತನಾಡುತ್ತೇವೆ. ಪ್ರತಿ ವರ್ಷವೂ ಇಂತಹ ತೊಂದರೆಗಳು ಉಂಟಾಗುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದಾಗ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಿದರು.
ಇದೇ ವೇಳೆ ರಾಜ್ಯಾದ್ಯಂತ ಚರ್ಚೆಯಾಗುತ್ತಿರುವ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ದೂರು ದಾಖಲಿಸಿದ್ದೇವೆ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸುವಂತೆ ಮನವಿ ಮಾಡಿದ್ದೇವೆ. ಆರೋಪಿಗಳನ್ನು ಪತ್ತೆಹಚ್ಚುವ ವಿಶ್ವಾಸವಿದೆ ಎಂದರು.
ಸ್ಟಿಂಗ್ನಲ್ಲಿ ಕಾಣಿಸಿಕೊಂಡಿರುವ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಬೇಕು. ಅವರ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗವಾಗಬೇಕು. ಇದೇ ಉದ್ದೇಶದಿಂದ ತಮ್ಮ ತಂದೆ ಮೊದಲಿನಿಂದಲೂ ತನಿಖೆಗೆ ಆಗ್ರಹಿಸಿ ದೂರು ನೀಡಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.




