Mysore
30
clear sky

Social Media

ಮಂಗಳವಾರ, 13 ಅಕ್ಟೋಬರ್ 2026
Light
Dark

ಸ್ಟಿಂಗ್ ಆಪರೇಷನ್ ಆರೋಪ: ಸಾಕ್ಷಿ ಬಿಡುಗಡೆಗೆ ಶಾಸಕ ತನ್ವೀರ್ ಸೇಠ್ ಒತ್ತಾಯ

ಮೈಸೂರು: ಸ್ಟಿಂಗ್ ಆಪರೇಷನ್ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವ ಬದಲು, ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಶಾಸಕ ತನ್ವೀರ್ ಸೇಠ್ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, “ಉಪ್ಪು ತಿಂದವರು ನೀರು ಕುಡಿಯಲೇಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ಆದರೆ ಆರೋಪ ಮಾಡುವವರು ಅದಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ಮುಂದಿಡಬೇಕು. ಸುಮ್ಮನೆ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುವುದರಿಂದ ಏನು ಪ್ರಯೋಜನ?” ಎಂದು ಪ್ರಶ್ನಿಸಿದ್ದಾರೆ.

ಕೆಲವರು ತಮ್ಮ ಗೌರವಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ನ್ಯಾಯಾಲಯದ ಮೊರೆ ಹೋಗುತ್ತಾರೆ. ಅವಮಾನಗಳನ್ನು ಸಹಿಸಿಕೊಳ್ಳುವುದು ಕಷ್ಟವಾದಾಗ ಕಾನೂನಿನ ಮೂಲಕ ರಕ್ಷಣೆ ಪಡೆಯಲು ಮುಂದಾಗುತ್ತಾರೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ ತನ್ವೀರ್ ಸೇಠ್, “ಆರೋಪ ಮಾಡುವವರಿಗೆ ಪ್ರಶ್ನೆ ಕೇಳಿದರೆ, ಹಾಸನದಲ್ಲಿ ಪೆನ್‌ಡ್ರೈವ್ ಹಂಚಿದ್ದು ಯಾರು ಎಂಬ ವಿಚಾರಕ್ಕೆ ಬರುತ್ತಾರೆ. ಸ್ಟಿಂಗ್ ಆಪರೇಷನ್ ಬಗ್ಗೆ ಇಷ್ಟೆಲ್ಲ ಮಾಹಿತಿ ಇರುವವರು ಸಾಕ್ಷಿ ನೀಡಬೇಕು. ಸಾಕ್ಷಿ ಮುಚ್ಚಿಡುವುದು ಅಪರಾಧವಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಸಾಕ್ಷಿಗಳಿದ್ದರೆ ತನಿಖೆ ನಡೆಸಬೇಕು. ದಾಖಲೆ ನೀಡದೆ ನಿರಂತರವಾಗಿ ಆರೋಪ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
“ಇಂದು ರಾಜಕಾರಣ ಮಾಡುವುದೇ ಕಷ್ಟವಾಗಿದೆ. ಎಲ್ಲಿ ಯಾವ ಕ್ಯಾಮರಾ ಇರುತ್ತದೆ ಎಂಬುದೇ ಗೊತ್ತಾಗದ ಸ್ಥಿತಿ ಬಂದಿದೆ. ಶಾಸಕರೂ ಮನುಷ್ಯರೇ” ಎಂದು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ಪ್ರತಿಭಟನೆಯಲ್ಲಿ ತಳ್ಳಾಟ: ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದ ತನ್ವೀರ್ ಸೇಠ್: ದೆಹಲಿಯ ಪ್ರತಿಭಟನೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಎಳೆದಾಡಲಾಗಿದೆ ಎಂಬ ವಿಚಾರಕ್ಕೂ ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯಿಸಿದ್ದಾರೆ.
ಪ್ರತಿಭಟನೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದರು. ಜನಸಂದಣಿಯಿಂದಾಗಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೂ ನಡೆಯಲು ಕಷ್ಟವಾಗಿತ್ತು. ಆ ಸಂದರ್ಭದಲ್ಲಿ ತಳ್ಳಾಟ, ನೂಕಾಟ ನಡೆದಿದೆ ಎಂದು ಮೈಸೂರಿನಲ್ಲಿ ಹೇಳಿದ್ದಾರೆ. ಎಸ್‌ಐಆರ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದನ್ನು ಮೆಚ್ಚಬೇಕು ಎಂದಿರುವ ಅವರು, ಈ ವಿಚಾರದಲ್ಲಿ ಯಾರೂ ಯಾರಿಗೂ ಕ್ಷಮೆ ಕೇಳುವ ಪ್ರಶ್ನೆಯಿಲ್ಲ ಎಂದು ತಿಳಿಸಿದ್ದಾರೆ.
“ಕ್ಷಮೆ ಕೇಳಬೇಕೆಂದರೆ, ಯಾವ ಕಾರಣಕ್ಕೆ ಯಾರು ಯಾರಿಗೆ ಕ್ಷಮೆ ಕೇಳಬೇಕು ಎಂಬ ಪಟ್ಟಿಯನ್ನೇ ಮಾಡಿಕೊಡುತ್ತೇನೆ. ನಂತರ ಸರಣಿಯಾಗಿ ಕ್ಷಮೆ ಕೇಳುವ ಕಾರ್ಯಕ್ರಮ ನಡೆಸೋಣ” ಎಂದು ವ್ಯಂಗ್ಯವಾಡಿದ್ದಾರೆ.

 

 

Tags:
error: Content is protected !!