Mysore
28
overcast clouds

Social Media

ಶನಿವಾರ, 26 ಸೆಪ್ಟೆಂಬರ್ 2026
Light
Dark

ಗಾಂಧಿ ಅಭಿಯಾನ ಅರಿವಿನ ಯಾನ | ಗೊಂದಲಗೊಳಿಸುತಿದ್ದ ಹಲವು ಸಂದೇಹಗಳು

ಬ್ಯಾರಿಸ್ಟರ್ ಎನ್ನಿಸಿಕೊಳ್ಳುವುದು ಸುಲಭವಾಗಿತ್ತು. ಆದರೆ ವಕೀಲಿ ವೃತ್ತಿಯನ್ನು ನಡೆಸುವುದು ಕಷ್ಟವಾಗಿತ್ತು. ನಾನು ಕಾನೂನುಗಳನ್ನೇನೋ ವ್ಯಾಸಂಗ ಮಾಡಿದ್ದೆ. ಅವುಗಳನ್ನು ಕಾರ್ಯ ರೂಪದಲ್ಲಿ ತರಲು ಕಲಿತಿರಲಿಲ್ಲ. ನಾನು ವ್ಯವಹಾರ ಸೂತ್ರಗಳನ್ನು ಉತ್ಸಾಹದಿಂದ ಓದಿದ್ದೆನಾದರೂ ನನ್ನ ಉದ್ಯೋಗಕ್ಕೆ ಅವನ್ನು ಅನ್ವಯಿಸುವುದು ನನಗೆ ತಿಳಿದಿರಲಿಲ್ಲ. ಆ ಸೂತ್ರಗಳ ಪೈಕಿ ಒಂದು ‘ಇತರರ ಆಸ್ತಿಗೆ ನಷ್ಟವುಂಟಾಗದಂತೆ ನಿನ್ನದನ್ನು ಉಪಯೋಗಿಸು’ ಎಂಬುದು. ಆದರೆ ವಕೀಲನು, ತನ್ನ ಕಕ್ಷಿಗಾರನ ಲಾಭಕ್ಕಾಗಿ ಈ ಸೂತ್ರವನ್ನು ಉಪಯೋಗಿಸುವುದು ಹೇಗೆ ಎಂಬುದು ನನಗೆ ತಿಳಿದಿರಲಿಲ್ಲ.
ಈ ಸೂತ್ರಕ್ಕೆ ಸಂಬಂಧಪಟ್ಟ ಎಲ್ಲ ಮುಖ್ಯ ಮೊಕದ್ದಮೆಗಳನ್ನೂ ನಾನು ಓದಿದ್ದರೂ ಈ ಸೂತ್ರವನ್ನು ಕಾನೂನು ವ್ಯವಹಾರದಲ್ಲಿ ಉಪಯೋಗಿಸುವ ಧೈರ್ಯ ನನಗೆ ಉಂಟಾಗಲಿಲ್ಲ. ಇದರ ಜತೆಗೆ, ನನಗೆ ಇಂಡಿಯನ್ ಲಾ ವಿಷಯ ಏನೂ ತಿಳಿದೇ ಇರಲಿಲ್ಲ. ಹಿಂದೂ ಲಾ ಮತ್ತು ಮಹಮ್ಮಡನ್ ಲಾ ಇವುಗಳ ಗಂಧವೇ ನನಗೆ ಇರಲಿಲ್ಲ. ದಾವಾ ಅರ್ಜಿ ಬರೆಯುವುದನ್ನೂ ನಾನು ಕಲಿತಿರಲಿಲ್ಲ. ಇವುಗಳ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ಸರ್ ಫಿರೋಜ್ ಷಾ ಮೆಹತಾರವರ ಹೆಸರನ್ನು ನಾನು ಕೇಳಿದ್ದೆ. ಅವರು ಇಂಗ್ಲೆಂಡಿನಲ್ಲಿ ಈ ಕಲೆಯನ್ನು ಹೇಗೆ ಕಲಿತರು ಎಂದು ನನಗೆ ಆಶ್ಚರ್ಯವಾಯಿತು. ವಕೀಲಿ ಯಲ್ಲಿ ಅವರಿಗಿದ್ದ ಪ್ರಾವೀಣ್ಯವನ್ನು ಸಂಪಾದಿ ಸುವುದಂತೂ ನನಗೆ ಕನಸಿನ ಮಾತು. ಆದರೆ ಅದರಿಂದ ನನ್ನ ಜೀವನ ನಿರ್ವಹಣೆಗೆ ಆಗುವಷ್ಟನ್ನಾದರೂ ಸಂಪಾದಿಸಲು ನನ್ನಿಂದ ಸಾಧ್ಯವಾದೀತೇ ಎಂಬುದು ಕೂಡ ನನಗೆ ಸಂದೇಹವಾಗಿತ್ತು. ನಾನು ಕಾನೂನನ್ನು ವ್ಯಾಸಂಗ ಮಾಡುತ್ತಿದ್ದ ಕಾಲದಲ್ಲಿಯೇ ಈ ಸಂದೇಹ, ಕಾತರತೆಗಳು ನನ್ನನ್ನು ತಲ್ಲಣಗೊಳಿಸತೊಡಗಿದ್ದವು. ನನ್ನ ಈ ಕಷ್ಟವನ್ನು ನಾನು ಕೆಲವು ಆಪ್ತ ಮಿತ್ರರಲ್ಲಿ ಹೇಳಿ ಕೊಂಡ. ದಾದಾಭಾಯಿ ನವರೋಜಿಯವರ ಸಲಹೆಯನ್ನು ಕೇಳಿ ಎಂದು ಆ ಮಿತ್ರರು ಸೂಚಿಸಿದರು. ನಾನು ಇಂಗ್ಲೆಂಡಿಗೆ ಹೊರಟಾಗ ನನ್ನ ಬಳಿ, ದಾದಾಭಾಯಿ ನವರೋಜಿಯವರಿಗೆ ಒಂದು ಪರಿಚಯ ಕಾಗದವಿದ್ದಿತೆಂದು, ಈ ಹಿಂದೆಯೇ ಹೇಳಿದ್ದೇನೆ.
ಆ ಅವಕಾಶವನ್ನು ನಾನು ಉಪಯೋಗಿಸಿಕೊಂಡುದು ಎಷ್ಟೋ ಕಾಲದ ಅನಂತರ, ಆ ಮಹನೀಯರನ್ನು ಹೋಗಿ ನೋಡಿ ಅವರಿಗೆ ತೊಂದರೆ ಕೊಡಲು ನನಗೆ ಅಧಿಕಾರವಿಲ್ಲವೆಂದು ನಾನು ಭಾವಿಸಿದ್ದೆ. ಅವರ ಭಾಷಣವಾಗುತ್ತದೆ ಎಂದು ಪ್ರಕಟವಾದಾಗಲೆಲ್ಲ ನಾನು ಹೋಗಿ ಸಭಾಭವನದ ಒಂದು ಮೂಲೆಯಲ್ಲಿ ಕುಳಿತು ಅವರ ಭಾಷಣವನ್ನು ಕಿವಿ ತುಂಬಾ ಕೇಳಿ ಅವರನ್ನು ಕಣ್ಣು ತುಂಬಾ ನೋಡಿಕೊಂಡು ಹೊರಟು ಹೋಗುತ್ತಿದೆ. ವಿದ್ಯಾರ್ಥಿಗಳೊಂದಿಗೆ ನಿಕಟ ಸಂಪರ್ಕವನ್ನಿಟ್ಟು ಕೊಳ್ಳುವುದಕ್ಕಾಗಿ ಅವರು ಒಂದು ಸಂಘವನ್ನು ಸ್ಥಾಪಿಸಿದ್ದರು.
ನಾನು ಅದರ ಸಭೆಗಳಿಗೂ ಹೋಗುತ್ತಿದ್ದೆ. ವಿದ್ಯಾರ್ಥಿಗಳ ಹಿತದಲ್ಲಿ ಅವರಿಗಿದ್ದ ಆಸಕ್ತಿ, ಅವರಲ್ಲಿ ವಿದ್ಯಾರ್ಥಿಗಳಿಗಿದ್ದ ಗೌರವ ಇವುಗಳನ್ನು ನೋಡಿ ನನಗೆ ಸಂತೋಷವಾಗುತ್ತಿತ್ತು. ಕೊನೆಗೆ ಒಂದು ಸಲ ಧೈರ್ಯ ಮಾಡಿ ಅವರಲ್ಲಿಗೆ ಹೋಗಿ, ಪರಿಚಯ ಕಾಗದವನ್ನು ಕೊಟ್ಟೆ. ಅವರು ‘ನಿನಗೆ ಬೇಕಾದಾಗ ನನ್ನಲ್ಲಿಗೆ ಬಂದು ನನ್ನ ಸಲಹೆಯನ್ನು ಕೇಳಬಹುದು’ ಎಂದು ನನಗೆ ಹೇಳಿದರು. ಆ ಆಹ್ವಾನವನ್ನು ನಾನು ಉಪ ಯೋಗಿಸಿಕೊಳ್ಳಲೇ ಇಲ್ಲ. ಬಹಳ ತೀವ್ರವಾದ ಅವಶ್ಯಕತೆಯಿದ್ದ ಹೊರತು ಅವರಿಗೆ ತೊಂದರೆ ಕೊಡುವುದು ಸರಿಯಲ್ಲವೆಂದು ನಾನು ಭಾವಿಸಿದೆ. ಆದುದರಿಂದ ‘ನಿನ್ನ ಕಷ್ಟಗಳನ್ನು ದಾದಾಭಾಯಿಯವರಿಗೆ ಹೇಳು’ ಎಂದು ನನ್ನ ಮಿತ್ರರು ಕೊಟ್ಟ ಸಲಹೆಯಂತೆ ನಡೆಯಲು ನಾನು ಧೈರ್ಯ ಮಾಡಲಿಲ್ಲ. ನಾನು ಮಿ. ಫ್ರೆಡೆರಿಕ್ ಪಿನ್‌ಕಟ್‌ರನ್ನು ಭೇಟಿ ಮಾಡಬೇಕೆಂದು ಇದೇ ಮಿತ್ರರೋ ಅಥವಾ ಬೇರೊಬ್ಬ ಮಿತ್ರರೂ ಸೂಚಿಸಿದರು. ಯಾರು ಎಂಬುದು ನನಗೆ ಜ್ಞಾಪಕವಿಲ್ಲ. ಪಿನ್‌ಕಟ್‌ರು ಕನ್ಸರ್ವೇಟಿವ್ ಸಂಪ್ರದಾಯವಾದಿ ಪಕ್ಷದವರು. ಆದರೆ ಭಾರತದ ವಿದ್ಯಾರ್ಥಿಗಳಲ್ಲಿ ಅವರ ಪ್ರೇಮ ಶುದ್ಧವೂ ನಿಸ್ವಾರ್ಥವೂ ಆಗಿತ್ತು. ಅನೇಕ ವಿದ್ಯಾರ್ಥಿಗಳು ಅವರ ಸಲಹೆಯನ್ನು ಕೇಳುತ್ತಿದ್ದರು. ನಾನು ಭೇಟಿಯನ್ನು ಕೇಳಿ ಅವರಿಗೆ ಪತ್ರ ಬರೆದೆ. ಅವರು ಭೇಟಿಗೆ ಕರೆದರು. ಆ ಭೇಟಿಯನ್ನು ನಾನು ಎಂದಿಗೂ ಮರೆಯು ವಂತಿಲ್ಲ. ಅವರು ನನ್ನನ್ನು ಒಬ್ಬ ಮಿತ್ರನಂತೆ ಮಾತನಾಡಿಸಿದರು. ನನ್ನ ನಿರಾಸೆಯನ್ನು ತಮ್ಮ ನಗೆಯಿಂದಲೇ ಓಡಿಸಿಬಿಟ್ಟರು.
‘ಪ್ರತಿಯೊಬ್ಬರೂ ಫಿರೋಜ್ ಷಾ ಮೆಹತಾ ಆಗಬೇಕೆಂಬುದು ನಿನ್ನ ಅಭಿಪ್ರಾಯವೇ? ಫಿರೋಜ್ ಮೆಹತಾ, ಬದರು ದ್ದೀನ್‌ರಂಥವರು ಅಪರೂಪ, ಸಾಧಾರಣ ವಕೀಲನಾಗಲು ಅಸಾಧಾರಣವಾದ ಬುದ್ಧಿಶಕ್ತಿ ಬೇಕಿಲ್ಲ. ಪ್ರಾಮಾಣಿಕತೆ, ಕಾರ್ಯಾಸಕ್ತಿ ಇವು ಇದ್ದರೆ ಜೀವನವನ್ನು ಸಂಪಾದಿಸಿಕೊಳ್ಳಬಹುದು. ಎಲ್ಲ ಮೊಕದ್ದಮೆಗಳೂ ತೊಡಕಿನವುಗಳಾಗಿರುವುದಿಲ್ಲ. ಅದಿರಲಿ, ಸಾಧಾರಣ ಜ್ಞಾನ ಸಂಪಾದನೆಗಾಗಿ ನೀನು ಯಾವ ಯಾವ ಗ್ರಂಥಗಳನ್ನು ಓದಿದ್ದೀಯೆ ಹೇಳು’ ಎಂದು ಕೇಳಿದರು. ನನ್ನ ಜ್ಞಾನ ಬಹು ಸ್ವಲ್ಪವಾಗಿದ್ದುದನ್ನು ಅವರು ಅರಿತುಕೊಂಡರು. ಅವರಿಗೆ ಆಶಾಭಂಗವಾ ಯಿತೆಂಬುದು ನನಗೂ ಕಂಡಿತು. ಆದರೆ ಅದು ಒಂದು ಕ್ಷಣ ಮಾತ್ರ. ಮುಂದಿನ ಗಳಿಗೆಯಲ್ಲಿಯೇ ಅವರ ಮುಖದಲ್ಲಿ ಹಿತವಾದ ನಗು ಹೊಳೆಯಿತು. ‘ನಿನ್ನ ಕಷ್ಟ ನನಗೆ ಅರ್ಥವಾಗಿದೆ. ಸಾಮಾನ್ಯ ಜ್ಞಾನಾರ್ಜನೆಗಾಗಿ ನೀನು ವ್ಯಾಸಂಗ ಮಾಡಿರು ವುದು ಬಹಳ ಕಡಿಮೆ. ನಿನ್ನಲ್ಲಿ ವಕೀಲನಿಗೆ ಇರಬೇಕಾದಷ್ಟು ವ್ಯವಹಾರಜ್ಞಾನವಿಲ್ಲ. ಭಾರತದ ಇತಿಹಾಸವನ್ನು ಸಹ ನೀನು ಓದಿಲ್ಲ. ವಕೀಲ ನಾಗುವವನಿಗೆ ಮನುಷ್ಯ ಸ್ವಭಾವ ತಿಳಿದಿರಬೇಕು. ಮನುಷ್ಯನ ಮುಖ ಚಹರೆಯನ್ನು ನೋಡಿ, ಆತನ ಸ್ವಭಾವವನ್ನು ತಿಳಿಯುವ ಶಕ್ತಿಯುಳ್ಳ ವನಾಗಿರಬೇಕು. ಪ್ರತಿಯೊಬ್ಬ ಭಾರತೀಯನೂ ಭಾರತದ ಇತಿಹಾಸವನ್ನು ತಿಳಿಯುವುದು ಅವನ ಕರ್ತವ್ಯ. ಇದಕ್ಕೂ ವಕೀಲಿ ವೃತ್ತಿಗೂ ಸಂಬಂಧವಿಲ್ಲ. ಆದರೆ ನಿನಗೆ ಆ ಜ್ಞಾನ ತಿಳಿದಿರಬೇಕು. ನೀನು ಕೇಯ್ ಮತ್ತು ಮ್ಯಾಲೆಸನ್ ಬರೆದ ಭಾರತದ ೧೮೫೭ರ ದಂಗೆಯ ಇತಿಹಾಸವನ್ನು ಸಹ ಓದಿಲ್ಲ. ಕೂಡಲೇ ಆ ಪುಸ್ತಕವನ್ನು ತೆಗೆದುಕೊಂಡು ಓದು.
ಜತೆಗೆ ಮನುಷ್ಯ ಸ್ವಭಾವವನ್ನು ತಿಳಿಯಬೇಕಾದರೆ ಇನ್ನೂ ಎರಡು ಪುಸ್ತಕಗಳನ್ನು ಓದು’ ಎಂದು ಹೇಳಿದರು. ಲ್ಯಾವೇಟರ್ ಮತ್ತು ಪೆಮ್ಮೆಲ್ಪನಿಕ್ ಎಂಬವರು ಮುಖ ಸಾಮುದ್ರಿಕಾ ಶಾಸ್ತ್ರವನ್ನು ಕುರಿತು ಬರೆದ ಪುಸ್ತಕಗಳೇ ಅವುಗಳಾಗಿದ್ದವು. ಆ ಪೂಜ್ಯ ಮಿತ್ರರ ಉಪಕಾರವನ್ನು ನಾನು ತುಂಬಾ ಕೃತಜ್ಞತೆಯಿಂದ ಸ್ಮರಿಸಿದೆ. ಅವರ ಎದುರಿಗೆ ನಾನು ಇದ್ದಾಗ ನನ್ನ ಭಯ ಪೂರ್ಣವಾಗಿ ಮಾಯವಾಗಿತ್ತು. ಆದರೆ ಅವರನ್ನು ಬಿಟ್ಟು, ಬಂದ ಕೂಡಲೇ ನನ್ನ ಕಳವಳ ಮತ್ತೆ ಪ್ರಾರಂಭವಾಯಿತು. ಮುಖ ನೋಡಿ ಮನುಷ್ಯನ ಸ್ವಭಾವವನ್ನು ಅರಿಯುವುದು’ ಈ ಮಾತುಗಳು ನನ್ನ ಮನಸ್ಸನ್ನು ಬಿಟ್ಟು ಹೋಗಲೇ ಇಲ್ಲ. ಮರುದಿನ ನಾನು ಲ್ಯಾವೇಟರ್ ಪುಸ್ತಕವನ್ನು ಕೊಂಡುಕೊಂಡೆ. ಪೆಮ್ಮೆಲ್‌ಪೆನಿಕ್ ಪುಸ್ತಕ ಅಂಗಡಿ ಯಲ್ಲಿ ದೊರೆಯಲಿಲ್ಲ. ನಾನು ಲ್ಯಾವೇಟರ್ ಪುಸ್ತಕವನ್ನು ಓದಿದೆ, ಅದು ಸ್ಟೆಲ್ರವರು ಬರೆದ ಈಕ್ವಿಟಿ ಎಂಬ ಪುಸ್ತಕಕ್ಕಿಂತ ಹೆಚ್ಚು ಕ್ಲಿಷ್ಟವಾಗಿತ್ತು. ಸ್ವಲ್ಪವೂ ಉತ್ಸಾಹಕರವಾಗಿರಲಿಲ್ಲ. ಷೇಕ್ಸ್‌ಪಿಯರ್ ನ ಮುಖಚಹರೆಯನ್ನು ಕುರಿತು ಓದಿದೆನು. ಆದರೆ ಲಂಡನ್ ನಗರದಲ್ಲಿ ರಸ್ತೆಯಲ್ಲಿ ಮೇಲಕ್ಕೂ ಕೆಳಕ್ಕೂ ತಿರುಗಾಡುತ್ತಿದ್ದ ಷೇಕ್ಸ್‌ಪಿಯರ್‌ಗಳನ್ನು ಗುರುತಿಸುವ ಶಕ್ತಿ ನನಗೆ ಉಂಟಾಗಲಿಲ್ಲ.
ಲ್ಯಾವೇಟರ್ ಗ್ರಂಥದಿಂದ ನನ್ನ ಜ್ಞಾನ ಹೆಚ್ಚಲಿಲ್ಲ. ಪಿನ್‌ಕಟ್ ಸಲಹೆ ನನಗೆ ಪ್ರತ್ಯಕ್ಷವಾಗಿ ಯಾವ ಸಹಾಯವನ್ನೂ ಮಾಡಲಿಲ್ಲ. ಆದರೆ ನನ್ನಲ್ಲಿದ್ದ ಅವರ ಕರುಣೆ ನನಗೆ ಒಳ್ಳೆಯ ಬೆಂಬಲ ವಾಯಿತು. ನನ್ನ ಮನಸ್ಸಿನ ಮುಂದೆ ಅವರ ನಗು ಮುಖ ಯಾವಾಗಲೂ ಇರುತ್ತಿದ್ದಿತು. ಅವರು ಹೇಳಿದ ‘ವಕೀಲಿ ವೃತ್ತಿಯಲ್ಲಿ ಜಯಶಾಲಿ ಯಾಗಬೇಕಾದರೆ ಫಿರೋಜ್ ಷಾ ಮೆಹತಾರವರ ನೈಪುಣ್ಯ, ಸ್ಮರಣಶಕ್ತಿ, ಯೋಗ್ಯತೆ ಇವು ಇದ್ದರೆ ಸಾಕು’ ಎಂಬ ಮಾತುಗಳಲ್ಲಿ ನನಗೆ ನಂಬಿಕೆಯುಂಟಾಯಿತು. ಕೊನೆಯ ಎರಡು ಗುಣಗಳೂ ನನ್ನಲ್ಲಿ ತಕ್ಕ ಪ್ರಮಾಣದಲ್ಲಿ ಇದ್ದುದರಿಂದ ನನಗೆ ಬಹುಮಟ್ಟಿಗೆ ಧೈರ್ಯವುಂಟಾಯಿತು. ಇಂಗ್ಲೆಂಡಿನಲ್ಲಿದ್ದಾಗ ಕೇಟ್ ಮತ್ತು ಮ್ಯಾಲೆಸನ್ರು ಬರೆದ ದಂಗೆಯ ಇತಿಹಾಸವನ್ನು ಓದಲು ನನಗೆ ಸಾಧ್ಯವಾಗಲಿಲ್ಲ. ಆ ಗ್ರಂಥವನ್ನು ಅವಕಾಶ ದೊರೆತ ಕೂಡಲೇ ಓದಬೇಕೆಂದು ನಿಶ್ಚಯ ಮಾಡಿಕೊಂಡಿದ್ದೆ. ದಕ್ಷಿಣ ಆಫ್ರಿಕಾಕ್ಕೆ ಹೋದ ಕೂಡಲೇ ಅದನ್ನು ಓದಿದೆ. ಹೀಗೆ ನಿರಾಸೆಯ ಜತೆಗೆ ಸ್ವಲ್ಪ ಆಶಾಕಿರಣದೊಂದಿಗೆ, ನಾನು ಎಸ್. ಎಸ್. ಅಸ್ಸಾಂ ಎಂಬ ಹಡಗಿನಲ್ಲಿ ಬೊಂಬಾಯಿಗೆ ತಲುಪಿದೆ. ಬಿರುಗಾಳಿಯಿಂದ ಬಂದರಿನಲ್ಲಿ ಅಲ್ಲೋಲಕಲ್ಲೋಲವಾಗಿದ್ದಿತು. ದೋಣಿಯಲ್ಲಿ ಕುಳಿತು ತೀರವನ್ನು ಸೇರಬೇಕಾಯಿತು.
Tags:
error: Content is protected !!