Mysore
24
overcast clouds

Social Media

ಗುರುವಾರ, 17 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಯುಪಿಐ ವಹಿವಾಟು ಶುಲ್ಕ; ಹೊರೆಯಾಗದಿರಲಿ

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿ ಯುಪಿಐ ಪಾವತಿ ವ್ಯವಸ್ಥೆಯು ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಜೇಬಿನಲ್ಲಿ ಹಣವಿಲ್ಲದಿದ್ದರೂ ಮೊಬೈಲ್ ಮೂಲಕ ಕ್ಷಣಾರ್ಧದಲ್ಲಿ ವಹಿವಾಟು ನಡೆಸುವ ಸೌಲಭ್ಯವಿದೆ. ಆದರೆ ೨ ಸಾವಿರ ರೂ.ಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ಶೇ. ೦.೪ರಷ್ಟು ಎಂಡಿಆರ್ ಶುಲ್ಕ ವಿಧಿಸುವ ನಿಯಮವು ಸಾರ್ವಜನಿಕರಲ್ಲಿ, ವಿಶೇಷವಾಗಿ ಗ್ರಾಹಕರು ಮತ್ತು ಸಣ್ಣ ವರ್ತಕರಲ್ಲಿ ಸಾಕಷ್ಟು ಗೊಂದಲ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಇದರ ಸಾಧಕ-ಬಾಧಕಗಳ ಕುರಿತು ಸರ್ಕಾರದಿಂದ ಸ್ಪಷ್ಟನೆ ಅಗತ್ಯವಾಗಿದೆ.

ಸಾಮಾನ್ಯ ಗ್ರಾಹಕರ ದೃಷ್ಟಿಯಿಂದ ನೋಡಿದರೆ, ಬ್ಯಾಂಕ್ ಖಾತೆಯಿಂದ ನೇರವಾಗಿ ಇನ್ನೊಂದು ಬ್ಯಾಂಕ್ ಖಾತೆಗೆ ಮಾಡುವ ಯುಪಿಐ ವಹಿವಾಟುಗಳಿಗೆ ಯಾವುದೇ ಶುಲ್ಕವಿಲ್ಲದಿರುವುದು ಸಮಾಧಾನಕರ ವಿಷಯ. ಆದರೆ ೨ ಸಾವಿರ ರೂ.ಗಿಂತ ಹೆಚ್ಚಿನ ಮೌಲ್ಯದ ವಹಿವಾಟುಗಳ ಮೇಲೆ ವಿಧಿಸಲಾಗುವ ಶುಲ್ಕವು ಸಣ್ಣ ಮತ್ತು ಮಧ್ಯಮ ಪ್ರಮಾಣದ ವರ್ತಕರಮ ಲಾಭದ ಪ್ರಮಾಣವನ್ನು ಕುಗ್ಗಿಸುತ್ತದೆ. ಇದರಿಂದಾಗಿ ಕೆಲವು ಸಣ್ಣ ವ್ಯಾಪಾರಿಗಳು ಯುಪಿಐ ಪಾವತಿ ಸ್ವೀಕರಿಸಲು ಹಿಂಜರಿಯಬಹುದು ಅಥವಾ ಮತ್ತೆ ನಗದು ವ್ಯವಹಾರದತ್ತ ಮುಖ ಮಾಡಿ ಚಿಲ್ಲರೆ ಸಮಸ್ಯೆ ಉಂಟಾಗಬಹುದು.

ಭಾರತವನ್ನು ‘ನಗದು ರಹಿತ ಆರ್ಥಿಕತೆ’ಯತ್ತ ಕೊಂಡೊಯ್ಯುವ ಹಾದಿಯಲ್ಲಿ ಇಂತಹ ಶುಲ್ಕಗಳು ಹಿನ್ನಡೆಯನ್ನು ಉಂಟುಮಾಡಬಹುದು ಎಂಬ ಆತಂಕವೂ ಕಾಡುತ್ತಿದೆ. ಬ್ಯಾಂಕಿನಿಂದ ಬ್ಯಾಂಕ್‌ಗೆ ಮಾಡುವ ಸಾಮಾನ್ಯ ಯುಪಿಐ ಉಚಿತ ಎಂಬುದನ್ನು ಸರ್ಕಾರ ಮತ್ತು ಬ್ಯಾಂಕುಗಳು ಪ್ರಚಾರ ಮಾಡಬೇಕಿದೆ. ಹಾಗೆಯೇ, ಸಣ್ಣ ವರ್ತಕರಿಗೆ ಶೋಷಣೆಯಾಗದಂತೆ ಸೂಕ್ತ ರಕ್ಷಣೆ ನೀಡುವುದು ಹಾಗೂ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯ.

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

Tags:
error: Content is protected !!