Mysore
32
overcast clouds

Social Media

ಶುಕ್ರವಾರ, 11 ಸೆಪ್ಟೆಂಬರ್ 2026
Light
Dark

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಭಕ್ತಿಭಾವ ಮತ್ತು ವೈಭವದಿಂದ ನೆರವೇರಿದವು.

ಸಾಲೂರು ಬೃಹನ್ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ. ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ನೇತೃತ್ವದಲ್ಲಿ ಹಾಗೂ ಬೇಡಗಂಪಣ ಅರ್ಚಕರ ವತಿಯಿಂದ ಶ್ರೀ ಮಲೆ ಮಹದೇಶ್ವರ ಸ್ವಾಮಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು, ಅಭಿಷೇಕ, ಹೋಮ-ಹವನ ಹಾಗೂ 108 ಕುಂಭಾಭಿಷೇಕ ನೆರವೇರಿಸಲಾಯಿತು.

ಶ್ರಾವಣ ಮಾಸದ ಕೊನೆಯ ವಿಶೇಷ ಪೂಜೆಯ ಅಂಗವಾಗಿ ಮುಂಜಾನೆಯಿಂದ ರುದ್ರಾಭಿಷೇಕ, ಬಿಲ್ವಾರ್ಚನೆ, ಗಣಪತಿ ಪೂಜೆ, ಪುಣ್ಯಾಹ, ನವಗ್ರಹ ಪೂಜೆ, ಅಷ್ಟದಿಕ್ಪಾಲಕರ ಪೂಜೆ ಹಾಗೂ ಮಹಾಮೃತ್ಯುಂಜಯ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ವಿವಿಧ ಕಳಶಗಳಿಗೆ ಆವಾಹನೆ ಮಾಡಿ ಪೂಜೆ ಸಲ್ಲಿಸಿದ ಬಳಿಕ ಶ್ರೀ ಸ್ವಾಮಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.

ನಂತರ ಬೇಡಗಂಪಣ ಅರ್ಚಕರು ಪವಿತ್ರ ಜಲದಿಂದ ತುಂಬಿದ 108 ಕುಂಭಗಳನ್ನು ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿದರು. ಸಾಲೂರು ಶ್ರೀಗಳ ಸಾನ್ನಿಧ್ಯದಲ್ಲಿ ಹೋಮ-ಹವನ ನೆರವೇರಿಸಿ, ಮಂತ್ರಘೋಷಗಳ ನಡುವೆ 108 ಕುಂಭಗಳ ಪವಿತ್ರ ಜಲದಿಂದ ಶ್ರೀ ಮಲೆ ಮಹದೇಶ್ವರ ಸ್ವಾಮಿಗೆ ಮಹಾ ಕುಂಭಾಭಿಷೇಕ ನೆರವೇರಿಸಲಾಯಿತು.

108 ಎಳನೀರು, ಹಾಲು, ಗಂಧ ಹಾಗೂ ಪಂಚಾಮೃತ ಅಭಿಷೇಕ, ಲಕ್ಷ ಬಿಲ್ವಾರ್ಚನೆ, ಮಹಾಮಂಗಳಾರತಿ ಹಾಗೂ ನೈವೇದ್ಯ ಸಮರ್ಪಣೆ ನೆರವೇರಿತು. ಧಾರ್ಮಿಕ ವಿಧಿವಿಧಾನಗಳ ಸಂದರ್ಭದಲ್ಲಿ ವೇದಘೋಷ, ಮಂತ್ರಪಠಣ ಹಾಗೂ ಭಕ್ತರ ಜಯಘೋಷಗಳಿಂದ ಕ್ಷೇತ್ರದ ವಾತಾವರಣ ಭಕ್ತಿಮಯವಾಗಿತ್ತು.

ಶ್ರಾವಣ ಮಾಸದ ಕೊನೆಯ ಕುಂಭಾಭಿಷೇಕ ಮಹೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸಿ “ಉಘೇ ಮಾದಪ್ಪ, ಜೈ ಮಹದೇಶ್ವರ” ಎಂಬ ಜಯಘೋಷಗಳನ್ನು ಮೊಳಗಿಸಿದರು. ಭಕ್ತರು ಮುಡಿಸೇವೆ, ಪಂಜಿನ ಸೇವೆ, ರಜಸೇವೆ ಸೇರಿದಂತೆ ವಿವಿಧ ಹರಕೆ ಸೇವೆಗಳನ್ನು ಸಲ್ಲಿಸಿ ಶ್ರೀ ಸ್ವಾಮಿಯ ದರ್ಶನ ಪಡೆದರು.

ಈ ಪ್ರಯುಕ್ತ ಕ್ಷೇತ್ರವನ್ನು ವಿವಿಧ ಪುಷ್ಪಗಳು, ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರದಿಂದ ದೇಗುಲದ ಆವರಣ ಕಂಗೊಳಿಸುತ್ತಿತ್ತು. ಭಕ್ತರ ಅನುಕೂಲಕ್ಕಾಗಿ ದಾಸೋಹ ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕಾಧಿಕಾರಿ ಮಹಾದೇವ, ಆಗಮಿಕರಾದ ಕರವೀರ ಸ್ವಾಮಿ, ಬೇಡಗಂಪಣ ಅರ್ಚಕರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

Tags:
error: Content is protected !!