ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ತಾಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮಳೆಯ ಅಭಾವದಿಂದ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೇವು-ನೀರಿಲ್ಲದೆ ಜಾನುವಾರುಗಳು ಪರದಾಡುತ್ತಿವೆ.
ತಮ್ಮ ಹೊಟ್ಟೆಯ ಹಸಿವನ್ನು ಮಾತಿನಲ್ಲಿ ಹೇಳಲಾಗದ ಮೂಕ ಪ್ರಾಣಿಗಳ ಸಂಕಟ ಒಂದೆಡೆಯಾದರೆ, ಅವುಗಳನ್ನು ಸಾಕಲಾಗದೆ ಕಣ್ಣೀರು ಹಾಕುತ್ತಿರುವ ರೈತರ ಪರಿಸ್ಥಿತಿ ಮತ್ತೊಂದೆಡೆ ಹೃದಯ ವಿದ್ರಾವಕವಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕೊಪ್ಪ ಗ್ರಾಮದ ರೈತನೊಬ್ಬ ಮಾತನಾಡಿ , ಕುಡಿಯಲು ನೀರಿಲ್ಲ, ಗುಡ್ಡದಲ್ಲಿ ನೀರಿಲ್ಲದೆ ಎಷ್ಟೋ ದನಗಳು ಬಿದ್ದು ಹೋಗಿವೆ, ಹುಣಸೆ ಮರದ ಸೊಪ್ಪು ಕೂಡ ಸುರಿದು ಹೋಗಿದೆ, ಮೇವು ಇಲ್ಲದೆ ದನಗಳು ಕಸ, ಕೂದಲು, ಪೇಪರ್ ತಿಂದು ಜೀವ ಉಳಿಸಿಕೊಳ್ಳುತ್ತಿವೆ, ಪೇಪರ್ ತಿಂದು ಎಷ್ಟೋ ದನಗಳು ಸತ್ತು ಹೋಗಿವೆ ಎಂದು ಅಳಲು ತೋಡಿಕೊಂಡಿದ್ದಾರೆ. ಒಬ್ಬೊಬ್ಬರ ಮನೆಯಲ್ಲಿ 500 ರಿಂದ 600 ದನಗಳಿವೆ, ಊರಿನಲ್ಲಿ 100 ರಿಂದ 150 ದನಗಳಿವೆ, ಕಾಡಿನಲ್ಲಿ ಮೇವಿಲ್ಲ, ಊರಲ್ಲಿ ಹುಲ್ಲು ಸಿಗುತ್ತಿಲ್ಲ, ಸರ್ಕಾರದವರು ಬಂದು ನೋಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೃಶ್ಯದಲ್ಲಿ ಜಾನುವಾರುಗಳು ಒಣಗಿದ ಎಲೆಗಳನ್ನು ಆಯ್ದು ತಿನ್ನುತ್ತಿರುವುದು ಕಂಡುಬರುತ್ತದೆ.
ಮಳೆಯಾಗದೆ ಕೆರೆ-ಕಟ್ಟೆಗಳು ಬತ್ತಿ ಹೋಗಿದ್ದು, ಮೇವಿನ ಬೆಲೆ ಗಗನಕ್ಕೇರಿರುವುದರಿಂದ ಸಣ್ಣ ರೈತರಿಗೆ ದನ-ಕರುಗಳನ್ನು ಸಾಕುವುದೇ ದೊಡ್ಡ ಹೊರೆಯಾಗಿದೆ. ಈ ಭಾಗದಲ್ಲಿ ತಕ್ಷಣ ಉಚಿತ ಮೇವಿನ ಬ್ಯಾಂಕ್ ಮತ್ತು ಗೋಶಾಲೆಗಳನ್ನು ತೆರೆಯಬೇಕೆಂದು ರೈತರು ಒತ್ತಾಯಿಸಿದ್ದಾರೆ.




