ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು ಮುಂದಾಗಿದ್ದಾರೆ ಎಂದು ಚಿಕ್ಕಕೆರೆಯೂರು ಹಾಡಿಯ ಗಿರಿಜನರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ತಾಲ್ಲೂಕಿನ ಸವ್ವೆ ಗ್ರಾಮದ ಸಮೀಪ ಸರ್ಕಾರ ನೀಡಿದ ಜಮೀನಿನಲ್ಲಿ ಆದಿವಾಸಿ ರೈತರು ಧರಣಿ ನಡೆಸುತ್ತಿದ್ದು, ನಮಗೆ ನ್ಯಾಯ ಸಿಗುವವರೆಗೂ, ಪ್ರತಿಭಟನೆ ನಡೆಸುತ್ತೇವೆ. ಸರ್ಕಾರ ೨೦೦೧ರಲ್ಲಿ ೮ ಎಕರೆ ಜಮೀನನ್ನು ನಮಗೆ ನೀಡಿದ್ದಕ್ಕೆ ಸಂಬಂಧಪಟ್ಟ ದಾಖಲೆಗಳಿವೆ. ಹೀಗಾಗಿ ಯಾವುದೇ ಕಾರಣಕ್ಕೂ ನಮ್ಮ ಜಮೀನುಗಳನ್ನು ಬೇರೆಯವರ ಪಾಲಾಗಲು ಬಿಡುವುದಿಲ್ಲ. ನಮ್ಮ ಮೇಲೆ ಎಷ್ಟೇ ದಬ್ಬಾಳಿಕೆ ಮಾಡಿದರೂ ಇಲ್ಲಿಯೇ ಇರುತ್ತೇವೆ. ನ್ಯಾಯ ಸಿಗುವವರೆಗೂ ಇಲ್ಲಿಯೇ ಧರಣಿ ನಡೆಸುತ್ತೇವೆ ಎಂದು ತಿಳಿಸಿದರು.
ಆದಿವಾಸಿ ಮುಖಂಡ ಪುಟ್ಟಬಸವ ಮಾತನಾಡಿ, ಕಸಬಾ ಹೋಬಳಿ ಸವ್ವೆ ಗ್ರಾಮದ ಸರ್ವೆ ನಂ.೫೯ರಲ್ಲಿ ಆರು ಆದಿವಾಸಿ ಕುಟುಂಬಗಳಿಗೆ ಸರ್ಕಾರ ಜಮೀನು ಮಂಜೂರು ಮಾಡಿದೆ. ಈ ಸಂಬಂಧ ಆದಿವಾಸಿಗಳ ಬಳಿ ಆರ್‌ಟಿಸಿ ಸೇರಿದಂತೆ ಸಂಬಂಧಪಟ್ಟ ದಾಖಲೆಗಳೂ ಇವೆ. ಕಳೆದ ಹಲವು ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಅನುಭವದಲ್ಲಿದ್ದಾರೆ. ಆದರೆ, ಪ್ರಭಾವಿ ವ್ಯಕ್ತಿ ಕೃಷ್ಣಶೆಟ್ಟಿ ಮತ್ತು ರಂಗಶೆಟ್ಟಿ ಎಂಬವರು ಆದಿವಾಸಿಗಳ ಮುಗ್ಧತೆ ದುರುಪಯೋಗಪಡಿಸಿಕೊಂಡು, ಅವರ ಜಮೀನು ಕಬಳಿಸಲು ಮುಂದಾಗಿದ್ದಾರೆ. ಕೈಬರವಣಿಗೆಯ ಆರ್‌ಟಿಸಿ ಹಾಗೂ ನಕಲಿ ದಾಖಲೆ ಸೃಷ್ಟಿಸಿಕೊಂಡು ಆದಿವಾಸಿಗಳ ಜಮೀನು ತನ್ನದು ಎಂದು ಸರ್ವೇ ಅಧಿಕಾರಿಗಳಿಗೆ ಹಣದ ಆಮಿಷ ಒಡ್ಡಿ, ಜಮೀನು ಅಳತೆ ಮಾಡಿಸಲು ಮುಂದಾಗಿದ್ದಾರೆ. ಶುಕ್ರವಾರ ಸರ್ವೆ ಮಾಡಲು ಅಧಿಕಾರಿಗಳು ಬಂದಿದ್ದರು. ನಮ್ಮ ಬಳಿ ಇರುವ ದಾಖಲೆಗಳನ್ನು ತೋರಿಸಿದ ಬಳಿಕ ವಾಪಸ್ ಹೋಗಿದ್ದಾರೆ. ಸೆ.೮ರ ಮಂಗಳವಾರ ಇಬ್ಬರಿಗೂ ಜಮೀನಿಗೆ ಸಂಬಂಧಪಟ್ಟ ಪೂರಕ ದಾಖಲೆಗಳನ್ನು ತರುವಂತೆ ಅಧಿಕಾರಿಗಳು ಹೇಳಿದ್ದಾರೆ. ಅಲ್ಲಿಯವರೆಗೆ ನಾವು ಇಲ್ಲಿಯೇ ಧರಣಿ ನಡೆಸುತ್ತೇವೆ. ಮೋಸವಾಗಲು ಬಿಡುವುದಿಲ್ಲ ಎಂದರು.




