ಚಾ.ನಗರದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಚಾರ ಮಾಡಲಿರುವ ವಾಹನಗಳು
ಚಾಮರಾಜನಗರ : ಧಮ್ಮ ಪಯಣ ಜಾಗೃತಿ ಜಾಥಾದ ನಾಲ್ಕು ಪ್ರಚಾರ ವಾಹನಗಳಿಗೆ ಬೌದ್ಧ ಬಿಕ್ಕುಗಳು ಹಾಗೂ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ನಗರದಲ್ಲಿ ಗುರುವಾರ ಚಾಲನೆ ನೀಡಿದರು.
ನಗರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ನಿಮಿತ್ತ ಅಂತಾರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ ಸಮಿತಿ, ಭಿಕ್ಕು ಸಂಘ, ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ಪ್ರಚಾರ ಹಮ್ಮಿಕೊಂಡಿದ್ದು, ರಾಮಸಮುದ್ರ ದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಬಳಿಕ ಪ್ರಚಾರ ವಾಹನಗಳಿಗೆ ಗಣ್ಯರು ಚಾಲನೆ ನೀಡಿದರು.
ನಂತರ, ಪ್ರಚಾರ ವಾಹನಗಳು ಬಿ.ರಾಚಯ್ಯ ಜೋಡಿ ರಸ್ತೆ, ಡೀವಿಯೇಷನ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮಾರ್ಗವಾಗಿ ಗುಂಡ್ಲುಪೇಟೆ ವೃತ್ತ, ಸುಲ್ತಾನ್ ಷರೀಫ್ ವೃತ್ತ, ಸತ್ತಿ ರಸ್ತೆಯ ಮೂಲಕ ನಗರದ ಅಂಬೇಡ್ಕರ್ ಭವನವನ್ನು ತಲುಪಿತು. ಈ ಸಂದರ್ಭದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಮಾತನಾಡಿ, ಅಕ್ಟೋಬರ್ ೨೪ ಮತ್ತು ೨೫ ರಂದು ನಡೆಯುವ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ಪ್ರಯುಕ್ತ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸಾಗುವ ಬುದ್ಧ, ಅಂಬೇಡ್ಕರ್ ಪ್ರಚಾರ ವಾಹನಗಳಿಗೆ (ಟ್ಯಾಬ್ಲೋಗಳಿಗೆ) ಚಾಲನೆ ನೀಡಲಾಗಿದ್ದು, ಬೌದ್ಧಸಮ್ಮೇಳನಕ್ಕೆ ಇನ್ನು ೫೦ ದಿನಗಳು ಮಾತ್ರ ಬಾಕಿ ಇದೆ ಎಂದು ಹೇಳಿದರು.
ಧಮ್ಮ ಪಯಣದ ಈ ವಾಹನಗಳು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಪಯಣ ಮಾಡಿ ಸಮ್ಮೇಳನಕ್ಕೆ ಗ್ರಾಮದವರನ್ನು ಆಹ್ವಾನ ಮಾಡುವುದು ಇದರ ಉದ್ದೇಶವಾಗಿದೆ. ಪ್ರತಿ ರಾತ್ರಿ ಆಯಾ ಗ್ರಾಮಗಳಲ್ಲಿ ವಾಸ್ತವ್ಯ ಮಾಡಲಿದ್ದು ಅಲ್ಲಿಯ ಗ್ರಾಮಸ್ಥರು ಮೋಂಬತ್ತಿ ಮೆರವಣಿಗೆಯೊಂದಿಗೆ ಸ್ವಾಗತ ಮಾಡಿ ತಮ್ಮ ತನು-ಮನ-ಧನ ಅರ್ಪಿಸುವ ಮೂಲಕ ಸಮ್ಮೇಳನ ಯಶಸ್ಸಿಗೆ ಸಹಕರಿಸಬೇಕು ಎಂದರು.




