Mysore
29
overcast clouds

Social Media

ಗುರುವಾರ, 03 ಸೆಪ್ಟೆಂಬರ್ 2026
Light
Dark

ಕೆಪಿಎಸ್‌ಸಿ ಹಗರಣ | ಜ್ಞಾನೇಂದ್ರ ಕುಮಾರ್‌ ವಿರುದ್ಧ ಇನ್ನೊಂದು ಪ್ರಕರಣ ದಾಖಲು

ಬೆಂಗಳೂರು : ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ತನಿಖೆ ತೀವ್ರಗೊಂಡಿದ್ದು, ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಹೊಸದಾಗಿ ಪ್ರಕರಣ ದಾಖಲಿಸಲಾಗಿದೆ.

ಸರ್ಕಾರಿ ಹುದ್ದೆ ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಹಣದ ಆಮಿಷಕ್ಕೆ ಬಲಿಳಾಗಿ ಸರ್ಕಾರದ ನೇಮಕಾತಿ ಪ್ರಕ್ರಿಯೆಗೆ ವಂಚನೆ ಮಾಡಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಎಫ್‌ಐಆರ್‌ನಲ್ಲಿ ಹೊಸ ಸೆಕ್ಷನ್‌ಗಳನ್ನು ಸೇರಿಸಲಾಗಿದೆ.

ಪಶುಸಂಗೋಪನಾ ಇಲಾಖೆಯ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಒಎಂಆರ್ (OMR) ಶೀಟ್ ಟ್ಯಾಂಪರಿಂಗ್ ಪ್ರಕರಣದ ತನಿಖೆಯ ಮುಂದುವರಿದ ಭಾಗವಾಗಿ ಸಿಐಡಿ (CID) ಅಧಿಕಾರಿಗಳು ಕೆಪಿಎಸ್‌ಸಿ ಕಚೇರಿಯಲ್ಲಿರುವ ಜ್ಞಾನೇಂದ್ರ ಅವರ ಕೊಠಡಿಯಲ್ಲಿ ಮಹಜರು ನಡೆಸಿದರು.

ಕೆಪಿಎಸ್‌ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿ (Controller of Examinations) ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನಡೆದ ಪಶುವೈದ್ಯಕೀಯ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಜ್ಞಾನೇಂದ್ರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಆಯ್ದ ಅಭ್ಯರ್ಥಿಗಳಿಂದ ಲಕ್ಷಾಂತರ ಮತ್ತು ಕೋಟಿ ರೂಪಾಯಿಗಳನ್ನು ಪಡೆದುಕೊಂಡು OMR ಶೀಟ್‌ಗಳನ್ನು ತಿರುಚಲಾಗಿದೆ ಎಂಬ ಆರೋಪದ ಮೇಲೆ ಈ ತನಿಖೆ ಚುರುಕುಗೊಂಡಿದೆ.
ಈ ಹಗರಣದ ಹಣಕಾಸು ವಹಿವಾಟಿನ ಜಾಡು ಹಿಡಿದು ಜಾರಿ ಮಾಡಲಾಲಯದ (ED) ಅಧಿಕಾರಿಗಳು ಈಗಾಗಲೇ ಬೆಂಗಳೂರಿನ ಜಯಮಹಲ್ ವಿಸ್ತರಣೆಯಲ್ಲಿರುವ ಜ್ಞಾನೇಂದ್ರ ಅವರ ಮನೆ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಅಭ್ಯರ್ಥಿಗಳ OMR ಉತ್ತರ ಪತ್ರಿಕೆಗಳಲ್ಲಿ ಅಕ್ರಮವಾಗಿ ಬದಲಾವಣೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಯಲ್ಲಿ ಭಾಗವಹಿಸಿದ್ದ 329 ಅಭ್ಯರ್ಥಿಗಳ OMR ಶೀಟ್‌ಗಳನ್ನು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗುತ್ತಿದೆ.

ಇದೇ ವೇಳೆ, ಪ್ರಶ್ನೆಪತ್ರಿಕೆಗೆ ಪರೀಕ್ಷೆಗೂ ಮುನ್ನವೇ ಪ್ರವೇಶ ದೊರೆತಿತ್ತೇ? ಪ್ರಶ್ನೆಗಳು ಸೋರಿಕೆಯಾಗಿದ್ದವೆಯೇ? ಅವುಗಳನ್ನು ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳಿಗೆ ತಲುಪಿಸಲಾಗಿತ್ತೇ? ಎಂಬ ಪ್ರಮುಖ ಪ್ರಶ್ನೆಗಳಿಗೆ CID ಉತ್ತರ ಹುಡುಕುತ್ತಿದೆ. ಕೆಲವು ತನಿಖಾ ವರದಿಗಳ ಪ್ರಕಾರ, ಪ್ರಶ್ನೆಪತ್ರಿಕೆಯ ಗಣನೀಯ ಭಾಗ ಪರೀಕ್ಷೆಗೆ ಮುನ್ನವೇ ಸಿದ್ಧವಾಗಿತ್ತು ಮತ್ತು ಅದರ ದುರುಪಯೋಗ ನಡೆದಿರುವ ಸಾಧ್ಯತೆಯನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ

ಪ್ರಕರಣದ ತನಿಖೆ ಕೇವಲ CIDಗೆ ಸೀಮಿತವಾಗಿಲ್ಲ. ಅಕ್ರಮ ನೇಮಕಾತಿಗೆ ಸಂಬಂಧಿಸಿದ ಹಣದ ವಹಿವಾಟು ಹಾಗೂ ಅಕ್ರಮ ಹಣ ವರ್ಗಾವಣೆ ಕುರಿತು ಜಾರಿ ನಿರ್ದೇಶನಾಲಯವೂ ತನಿಖೆ ನಡೆಸುತ್ತಿದೆ.
ಆಗಸ್ಟ್ 23ರಂದು ED ಅಧಿಕಾರಿಗಳು ಗಂಗ್ವಾರ್ ಅವರ ಬೆಂಗಳೂರಿನ ನಿವಾಸ ಹಾಗೂ ಉತ್ತರ ಪ್ರದೇಶದ ಬರೇಲಿಯಲ್ಲಿರುವ ಸ್ಥಳಗಳ ಮೇಲೆ ಶೋಧ ನಡೆಸಿದ್ದರು. ಬೆಂಗಳೂರಿನ ನಿವಾಸದಲ್ಲಿ ಅವರು ಹಾಜರಿರದ ಹಿನ್ನೆಲೆಯಲ್ಲಿ ಬಾಗಿಲು ತೆರೆಯಲು ಲಾಕ್‌ಸ್ಮಿತ್‌ನ ಸಹಾಯ ಪಡೆಯಲಾಗಿತ್ತು

ಈ ಬೆಳವಣಿಗೆಯ ನಂತರ ಗಂಗ್ವಾರ್ ಅವರ ವಿಚಾರಣೆಗೆ ಹಾಜರಾಗುವಂತೆ CID ನೋಟಿಸ್ ನೀಡಿತ್ತು. ಆಗಸ್ಟ್ 28 ಮತ್ತು 29ರಂದು ಅವರನ್ನು ಸುದೀರ್ಘವಾಗಿ ವಿಚಾರಣೆ ನಡೆಸಲಾಗಿದ್ದು, ಎರಡು ದಿನಗಳಲ್ಲಿ ಸುಮಾರು 20 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆದ ಬಳಿಕ ಆಗಸ್ಟ್ 29ರ ರಾತ್ರಿ ಅವರನ್ನು ಬಂಧಿಸಲಾಯಿತು.

ಸಿಐಡಿ ಅಧಿಕಾರಿಗಳು ಕೆಪಿಎಸ್‌ಸಿ ಕಚೇರಿಯಲ್ಲಿ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಪ್ರಕರಣದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಿರುವುದು ಉನ್ನತ ಮಟ್ಟದ ಅಧಿಕಾರವರ್ಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಹಗರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಪ್ರಮುಖ ವ್ಯಕ್ತಿಗಳ ಬಂಧನವಾಗುವ ಸಾಧ್ಯತೆಯಿದೆ.

 

 

 

 

 

Tags:
error: Content is protected !!