ಬೆಂಗಳೂರು : ಆರ್‌ಎಸ್‌ಎಸ್ ಸಂಘಟನೆಯ ಕಾರ್ಯವೈಖರಿ ಹಾಗೂ ವಿದೇಶದಲ್ಲಿನ ಅದರ ಚಟುವಟಿಕೆಗಳ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಕಳೆದ 100 ವರ್ಷಗಳಿಂದ ಈ ನೋಂದಣಿಯಾಗದ ಸಂಘಟನೆ ಭಾರತದಲ್ಲಿ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಪ್ರಚಾರ ಮಾಡುತ್ತಾ ಬಂದಿದೆ ಎಂದು ಆರ್‌ಎಸ್‌ಎಸ್ ವಿರುದ್ಧ ಆರೋಪ ಮಾಡಿದ್ದಾರೆ.
ಅಮೆರಿಕ ಪ್ರವಾಸದ ವೇಳೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿರುವ ಅವರು, ಯಾವುದೇ ಹಿಂದೂ, ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಭಾವಿಸಿದರೆ, ಆತ ಹಿಂದೂವಾಗಿ ಉಳಿಯುವುದಿಲ್ಲ. ಹಿಂದೂ ಎಂದು ಕರೆದುಕೊಳ್ಳುವವರು ಎಲ್ಲ ಮಾರ್ಗಗಳೂ ಒಂದೇ ಗುರಿಯತ್ತ ಸಾಗುತ್ತವೆ ಎಂಬುದನ್ನು ನಂಬಬೇಕು ಎಂಬ ಭಾಗವತ್ ಅವರ ಮಾತುಗಳನ್ನು ಪ್ರಸ್ತಾಪಿಸಿದ್ದಾರೆ. ಪ್ರೇಕ್ಷಕರು ಬದಲಾದಾಗ ಭಾಷೆಯಲ್ಲೂ ಇಷ್ಟೊಂದು ಬದಲಾವಣೆ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಭಾರತೀಯ ವಲಸಿಗರಿಂದ ಆರ್‌ಎಸ್‌ಎಸ್ ತನ್ನ ವಿಚಾರ ಪರಿವಾರಕ್ಕಾಗಿ ನಿಧಿ ಸಂಗ್ರಹಿಸಲು ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇಂತಹ ಚಟುವಟಿಕೆಗಳು ಸಮಾಜದಲ್ಲಿ ಕೋಮು ವಿಭಜನೆಯ ಬೀಜ ಬಿತ್ತುತ್ತವೆ ಎಂದು ಟೀಕಿಸಿದ್ದಾರೆ.
ಮೋಹನ್ ಭಾಗವತ್ ಅವರ ಮೂರು ರಾಷ್ಟ್ರಗಳ ಪ್ರವಾಸ ಹಾಗೂ ಯೂನಿವರ್ಸಲ್ ಒನ್‌ನೆಸ್ (ಸಾರ್ವತ್ರಿಕ ಏಕತೆ) ಎಂಬ ಸಂದೇಶವನ್ನು ಕೇವಲ ಧಾರ್ಮಿಕ ಸಾಮರಸ್ಯದ ಪ್ರಯತ್ನವೆಂದು ಪರಿಗಣಿಸುವ ಮೊದಲು ಅದರ ಹಿಂದಿರುವ ಸಂಘಟನೆಗಳ ಜಾಲವನ್ನು ಗಮನಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.




