ಹೊಸದಿಲ್ಲಿ : ಯುಪಿಎ ಒಕ್ಕೂಟದ ಹಿರಿಯ ನಾಯಕಿ ಹಾಗೂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ ಬಿಲಾಂಗಿಂಗ್ ಎ ಜರ್ನಿ ಆಫ್ ಲವ್ ಪುಸ್ತಕದ ಪ್ರಕಟಣೆಯು ರಾಜಕೀಯ ಮತ್ತು ಸಾಹಿತ್ಯಿಕ ವಲಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ.
ಪುಸ್ತಕದ ಒಡಂಬಡಿಕೆ ಮತ್ತು ಸಂಪಾದಕೀಯ ಬದಲಾವಣೆಗಳ ವಿಚಾರವಾಗಿ ಪ್ರಕಾಶನ ಸಂಸ್ಥೆ ಹಾಗೂ ರಾಜಕೀಯ ಪಕ್ಷಗಳ ನಡುವೆ ಮಾತಿನ ಸಮರವೇ ಏರ್ಪಟ್ಟಿದೆ. ನವೆಂಬರ್ ೧೦ರಂದು ಜಾಗತಿಕವಾಗಿ ಬಿಡುಗಡೆಯಾಗಲಿರುವ ಈ ಆತ್ಮಕಥೆಯನ್ನು ಭಾರತದಲ್ಲಿ ಪ್ರಕಟಿಸಬೇಕಿದ್ದ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸಂಸ್ಥೆಯು, ಭಾರತೀಯ ಆವೃತ್ತಿಯ ಪ್ರಕಾಶಕರು ತಾವಲ್ಲ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿದೆ.
ಹಸ್ತಪ್ರತಿಯಲ್ಲಿ ಕೆಲವು ಸಂಪಾದಕೀಯ ಬದಲಾವಣೆಗಳನ್ನು ಮತ್ತು ಸತ್ಯ ಪರಿಶೀಲನೆ ಶಿಫಾರಸುಗಳನ್ನು ಮಾಡುವುದು ಪ್ರಕಾಶನ ಸಂಸ್ಥೆಯ ಸಾಮಾನ್ಯ ಪ್ರಕ್ರಿಯೆಯಾಗಿದೆಯೆಂಬುದನ್ನು ಪೆಂಗ್ವಿನ್ ಸಮರ್ಥಿಸಿಕೊಂಡಿದೆ. ಆದರೆ, ಪ್ರಕಾಶಕರು ಸೂಚಿಸಿದ ಬದಲಾವಣೆಗಳಿಗೆ ಲೇಖಕಿ ಸೋನಿಯಾ ಗಾಂಧಿ ಒಪ್ಪದ ಕಾರಣ ಉಭಯತರ ನಡುವಿನ ಒಪ್ಪಂದ ಮುರಿದುಬಿದ್ದಿದ್ದು, ಪುಸ್ತಕದ ಭಾರತೀಯ ಹಕ್ಕುಗಳಿಗಾಗಿ ಪ್ರಸ್ತುತ ಹಾರ್ಪರ್‌ಕಾಲಿನ್ಸ್‌ಸ್ ಸೇರಿದಂತೆ ಇತ್ತೀಚಿನ ಇತರೆ ಪ್ರಕಾಶನ ಸಂಸ್ಥೆಗಳೊಂದಿಗೆ ಮಾತುಕತೆಗಳು ನಡೆಯುತ್ತಿವೆ.
ಕಾಂಗ್ರೆಸ್ ಆಕ್ರೋಶ ಮತ್ತು ಗಂಭೀರ ಆರೋಪಗಳು ಪುಸ್ತಕದ ಪ್ರಕಟಣೆಯಲ್ಲಿ ಉಂಟಾಗಿರುವ ತೊಡಕಿಗೆ ಕೇಂದ್ರ ಸರ್ಕಾರದ ಪರೋಕ್ಷ ರಾಜಕೀಯ ಒತ್ತಡವೇ ಕಾರಣ ಎಂದು ಕಾಂಗ್ರೆಸ್ ಹಿರಿಯ ನಾಯಕರು ತೀವ್ರವಾಗಿ ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಹಾಗೂ ಚೀನಾ ಆಕ್ರಮಣದ ಕುರಿತಾದ ಸೂಕ್ಷ್ಮ ಹಾಗೂ ಟೀಕಾತ್ಮಕ ಅಂಶಗಳನ್ನು ಕೈಬಿಡುವಂತೆ ಅಥವಾ ಬದಲಾಯಿಸುವಂತೆ ಪ್ರಕಾಶಕರ ಮೇಲೆ ಒತ್ತಡ ಹೇರಲಾಗಿದೆ ಎಂದು ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
ಬಿಜೆಪಿ ತಿರುಗೇಟು :
ಕಾಂಗ್ರೆಸ್‌ನ ಆರೋಪಗಳನ್ನು ತಳ್ಳಿಹಾಕಿರುವ ಬಿಜೆಪಿ ಮತ್ತು ಬಲಪಂಥೀಯ ಚಿಂತಕರು, ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷವು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ಯಾವುದೇ ಆತಚರಿತ್ರೆ ಅಥವಾ ಕೃತಿಯಲ್ಲಿ ಸತ್ಯಾಸತ್ಯತೆ, ಜೀವಂತ ವ್ಯಕ್ತಿಗಳ ಮೇಲಿನ ಆರೋಪಗಳು ಹಾಗೂ ದೇಶದ ಭದ್ರತೆ ಅಥವಾ ಗಡಿ ರೇಖೆಗೆ ಸಂಬಂಧಿಸಿದ ಸೂಕ್ಷ್ಮ ಸಂಗತಿಗಳಿದ್ದಾಗ ಪ್ರಕಾಶನ ಸಂಸ್ಥೆಗಳು ಕಾನೂನಾತ್ಮಕ ಹಾಗೂ ಸಂಪಾದಕೀಯ ದೃಷ್ಟಿಯಿಂದ ಸತ್ಯ ಪರಿಶೀಲನೆ ನಡೆಸುವುದು ಅವುಗಳ ಜವಾಬ್ದಾರಿಯಾಗಿದೆ.




