Mysore
28
broken clouds

Social Media

ಶುಕ್ರವಾರ, 21 ಆಗಸ್ಟ್ 2026
Light
Dark

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

Supreme Court

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆ ಅಡಿ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಉತ್ತರ ಪ್ರದೇಶದ ಶಾಲೆಯೊಂದರ ಮ್ಯಾನೇಜರ್‌ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿ ಕಾಯ್ದೆಯ ಸೆಕ್ಷನ್‌ 3(2)(r) ಮತ್ತು 3(1)(s) ಅಡಿಯಲ್ಲಿ ನಡೆಯುತ್ತಿದ್ದ ಕಾನೂನು ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.

ತೀರ್ಪಿನಲ್ಲಿ ಏನಿದೆ?
ಕಾಯ್ದೆಯ ಪ್ರಕಾರ ಸಾರ್ವಜನಿಕರ ವೀಕ್ಷಣೆಯ ವ್ಯಾಪ್ತಿಯಲ್ಲಿರುವ ಸ್ಥಳ ಎಂದರೆ ಆರೋಪಿಯು ಸಂತ್ರಸ್ತನಿಗೆ ಆಡಿದ ಮಾತುಗಳನ್ನು ಸಾರ್ವಜನಿಕರು ನೋಡಲು ಅಥವಾ ಕೇಳಲು ಸಾಧ್ಯವಾಗುವಂತಹ ತೆರೆದ ಸ್ಥಳವಾಗಿರಬೇಕು. ಒಂದು ವೇಳೆ ಘಟನೆಯು ಸಾರ್ವಜನಿಕರು ಇಲ್ಲದ ನಾಲ್ಕು ಗೋಡೆಗಳ ಮಧ್ಯೆ ನಡೆದರೆ ಅದನ್ನು ಸಾರ್ವಜನಿಕ ವೀಕ್ಷಣೆಯ ಸ್ಥಳದಲ್ಲಿ ನಡೆದಿದೆ ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟಿದೆ.

ಎಫ್‌ಐಆರ್‌ನಲ್ಲಿ ಶಾಲಾ ಮ್ಯಾನೇಜರ್‌ ಅವರೇ ನಿರ್ದಿಷ್ಟವಾಗಿ ಯಾವುದೇ ಜಾತಿ ನಿಂದನೆಯ ಮಾತುಗಳನ್ನು ಆಡಿದ್ದಾರೆ ಎಂದು ಉಲ್ಲೇಖಿಸಿಲ್ಲ. ಪ್ರಾಸಿಕ್ಯೂಷನ್ ಒದಗಿಸಿರುವ ದಾಖಲೆಗಳು ಗರಿಷ್ಠ ಪಕ್ಷ ಉಭಯ ಬಣಗಳ ನಡುವಿನ ಜಗಳ ಮತ್ತು ಗಲಾಟೆಯನ್ನು ಮಾತ್ರ ತೋರಿಸುತ್ತವೆಯೇ ಹೊರತು ಮ್ಯಾನೇಜರ್‌ ಯಾವುದೇ ನಿರ್ದಿಷ್ಟ ಜಾತಿ ನಿಂದನೆಯ ಮಾತುಗಳನ್ನಾಡಿರುವುದನ್ನು ದೃಢಪಡಿಸುವುದಿಲ್ಲ. ಶಾಲಾ ಮ್ಯಾನೇಜರ್ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಾಗಿದ್ದ ಪ್ರಕ್ರಿಯೆಗಳನ್ನು ನಾವು ರದ್ದುಗೊಳಿಸುತ್ತೇವೆ. ಆದರೆ ಈ ಪ್ರಕರಣದಲ್ಲಿ ದಾಖಲಾಗಿರುವ ಇತರ ಆರೋಪಗಳಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ?
ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳ ನಡುವೆ ಜಗಳ ನಡೆದ ಬಳಿಕ ಅವರ ತಂದೆ 2020ರ ಜನವರಿ 24ರಂದು ಶಾಲಾ ಮ್ಯಾನೇಜರ್‌ ಅವರನ್ನು ಸಂಪರ್ಕಿಸಿದ್ದರು. ಈ ವೇಳೆ ಮ್ಯಾನೇಜರ್‌ ಹಾಗೂ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು.

ಗಲಾಟೆ ನಡೆದ ಮರುದಿನವೇ ಗಲಭೆ, ಗಾಯ, ಅಕ್ರಮ ಬಂಧನ ಮತ್ತು ಉದ್ದೇಶಪೂರ್ವಕ ಅವಮಾನದ ಆರೋಪಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದರೊಂದಿಗೆ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(r) ಮತ್ತು 3(1)(s) ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಶಾಲಾ ಮ್ಯಾನೇಜರ್ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಘಟನೆ ನಡೆದಿದೆ ಎನ್ನಲಾದ ಶಾಲೆಯ ಕೊಠಡಿಯು ಸಂಪೂರ್ಣ ಮುಚ್ಚಲ್ಪಟ್ಟಿದ್ದು, ಕಿಟಕಿಗಳಿಲ್ಲದ ಹಾಗೂ ಸಾರ್ವಜನಿಕರಿಗೆ ಪ್ರವೇಶವಿಲ್ಲದ ಸ್ಥಳವಾಗಿತ್ತು ಎಂದು ಅವರು ವಾದಿಸಿದ್ದರು.

ಜಾತಿ ನಿಂದನೆ ನಡೆದಿದೆ ಎನ್ನಲಾದ ಸಮಯದಲ್ಲಿ ತಾವು ಕೊಠಡಿಯೊಳಗೆ ಇರಲಿಲ್ಲ ಎಂದು ಸಾಕ್ಷಿಗಳು ಹೇಳಿರುವುದನ್ನು ಮತ್ತು ಅವರ ಹೇಳಿಕೆಗಳು ಕೇವಲ ಗಲಾಟೆ ನಡೆದಿರುವುದನ್ನು ಮಾತ್ರ ದೃಢಪಡಿಸಿರುವುದನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಆದರೆ ಅಲಹಾಬಾದ್ ಹೈಕೋರ್ಟ್ ಎಸ್‌ಸಿ/ ಎಸ್‌ಟಿ ಕಾಯ್ದೆಯ ಅಡಿ ವಿಚಾರಣೆ ನಡೆಸಲು ಅನುಮತಿ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಮ್ಯಾನೇಜರ್ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Tags:
error: Content is protected !!