Mysore
29
broken clouds

Social Media

ಶುಕ್ರವಾರ, 21 ಆಗಸ್ಟ್ 2026
Light
Dark

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ ಮರು ವಸೂಲಿಯಾಗಿದ್ದು, ಈ ಪ್ರಕರಣದ ಆರೋಪಗಳಿಂದ ನಾನು ಮುಕ್ತನಾಗಿ ಹೊರಬರುತ್ತೇನೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌‍ ವತಿಯಿಂದ ವಿಧಾನಸೌಧದ ಬಳಿ ಮಹಾತ ಗಾಂಧೀಜಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಸಚಿವರಾಗಿದ್ದ ಸಂದರ್ಭದಲ್ಲಿ ನಿಗಮದ ಮೇಲಿನ ಆರೋಪಗಳ ಕುರಿತು ತನಿಖೆಗೆ ಎಸ್‌ಐಟಿ ರಚಿಸಲಾಗಿತ್ತು. ತನಿಖೆಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಬಳಿಕ ತನಿಖೆ ನಡೆದಿದ್ದು, ಪ್ರಕರಣದಲ್ಲಿ ತಮ ಪಾತ್ರವಿಲ್ಲ ಎಂಬುದು ಸಾಬೀತಾಗಿದೆ ಎಂದು ಹೇಳಿದರು.

ದುರುಪಯೋಗವಾಗಿದೆ ಎಂದು ಆರೋಪಿಸಲಾಗಿದ್ದ 187 ಕೋಟಿ ರೂಪಾಯಿಗಳನ್ನು ಮರು ವಸೂಲಿ ಮಾಡಿ ಸರ್ಕಾರದ ಖಜಾನೆಗೆ ಜಮೆ ಮಾಡಲಾಗಿದೆ. ಹೀಗಾಗಿ ತಾವು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವುದಾಗಿ ನಾಗೇಂದ್ರ ತಿಳಿಸಿದರು. ಹಗರಣದ ಕುರಿತು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಗೆ ತಲೆಬಾಗಿ ಸಂಪೂರ್ಣ ಸಹಕಾರ ನೀಡಿದ್ದೇನೆ. ಸದ್ಯ ಜಾಮೀನು ಪಡೆದು ಹೊರಗಿದ್ದೇನೆ ಎಂದು ಅವರು ಹೇಳಿದರು. ಬಿಜೆಪಿಯವರಿಗೆ ದಲಿತರನ್ನು ಕಂಡರೆ ಆಗುವುದಿಲ್ಲ. ಅದರಲ್ಲೂ ದಲಿತರು ಮಂತ್ರಿಯಾದರೆ ಬಿಜೆಪಿಯವರು ಅದನ್ನು ಸಹಿಸುವುದಿಲ್ಲ ಎಂದು ನಾಗೇಂದ್ರ ಆರೋಪಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಹಲವು ಸಚಿವರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿವೆ. ದೇಶದಲ್ಲಿ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಶಾಸಕರ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ. ತಮ್ಮ ವಿರುದ್ಧ ಕೇಳಿಬಂದಿರುವುದು ಕೂಡ ಕೇವಲ ಆರೋಪಗಳಷ್ಟೇ. ಯಾವುದೇ ಪ್ರಕರಣದಲ್ಲಿ ತಾವು ದೋಷಿ ಎಂದು ತೀರ್ಪು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ನೆಲದ ಕಾನೂನಿನ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಕಾನೂನು ಹೋರಾಟವನ್ನು ಮುಂದುವರಿಸುತ್ತೇನೆ. ಅಂತಿಮವಾಗಿ ಆರೋಪಗಳಿಂದ ಮುಕ್ತನಾಗಿ ಹೊರಬರುವ ವಿಶ್ವಾಸವಿದೆ ಎಂದು ಸಚಿವ ಬಿ. ನಾಗೇಂದ್ರ ಹೇಳಿದರು.

Tags:
error: Content is protected !!