ಬೆಂಗಳೂರು: ಬೆಂಗಳೂರು ದಕ್ಷಿಣದ ದೊಡ್ಡೇರಿಯಲ್ಲಿ ಬೃಹತ್ ನಕಲಿ ಔಷಧ ಜಾಲ ಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈ ಪ್ರಕರಣವನ್ನು ಇದೀಗ ಎಸ್‌ಐಟಿ ತನಿಖೆಗೆ ನೀಡಿ ಆದೇಶ ಹೊರಡಿಸಿದೆ. ಐಪಿಎಸ್ ಹಿರಿಯ ಅಧಿಕಾರಿ ಸಿ ವಂಶಿಕೃಷ್ಣ ನೇತೃತ್ವದ ಎಸ್‌ಐಟಿಗೆ ಐಪಿಎಸ್ ಅಧಿಕಾರಿಗಳಾದ ಶಿವಪ್ರಕಾಶ್, ಲೋಕೇಶ್, ಸಹಾಯಕ ಔಷಧ ನಿಯಂತ್ರಕರಾದ ಮಂಜುನಾಥ್ ರೆಡ್ಡಿ, ನಮ್ರತಾ ಹಲ್ಲೂರು, ಔಷಧ ನಿರೀಕ್ಷಕ ನೇಹಾ ಮುರ್ಗಿ ಅವರನ್ನೊಳಗೊಡಿರುವ ತಂಡವನ್ನು ರಚಿಸಲಾಗಿದೆ.
ನಕಲಿ ಔಷಧ ಜಾಲ ಪತ್ತೆಯಾದ ದಿನವೇ ಆರೋಗ್ಯ ಸಚಿವ ಯುಟಿ ಖಾದರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಪ್ರಕರಣವನ್ನು ಎಸ್‌ಐಟಿಗೆ ನೀಡುವ ಬಗ್ಗೆ ಸುಳಿವು ನೀಡಿದ್ದರು. ನಕಲಿ ಔಷಧ ಜಾಲ ಪತ್ತೆ ಸಂಬಂಧಬಗೆದಷ್ಟೂ ಶಾಕಿಂಗ್ ವಿಚಾರಗಳು ಬಯಲಾಗುತ್ತಿವೆ. ಪ್ರತಿಷ್ಠಿತ ಎಂಎನ್‌ಸಿ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಜೀವಕ್ಕೇ ಕಂಟಕ ತರುವ ನಕಲಿ ಇಂಜೆಕ್ಷನ್ ಹಾಗೂ ಮಾತ್ರೆಗಳನ್ನು ಪೂರೈಸುತ್ತಿದ್ದ ಈ ಅಂತಾರಾಜ್ಯ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದ್ದು, ಇದರ ಕಿಂಗ್ ಪಿನ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕರ್ನಾಟಕದ ಡ್ರಗ್ ಎನ್‌ಫೋರ್ಸ್‌ಮೆಂಟ್ ವಿಂಗ್ ಆಗಸ್ಟ್ ೧೮ರಂದು ಬಿದದಿ ಸಮೀಪದ ನಂ.೩೪ ಕುರುಬರಹಳ್ಳಿ ಗ್ರಾಮದಲ್ಲಿ ಲೈಸೆನ್ಸ್ ಇಲ್ಲದ ಔಷಧ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿತ್ತು. ಈ ವೇಳೆ ನಕಲಿ ಔಷಧಗಳು, ಬಲ್ಕ್ ಸ್ಟಾಕ್, ಪ್ಯಾಕೇಜಿಂಗ್ ಯಂತ್ರಗಳು, ಖಾಲಿ ವಯಲ್‌ಗಳು ಹಾಗೂ ನಕಲಿ ಲೇಬಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ವಸ್ತುಗಳ ಒಟ್ಟು ಅಂದಾಜು ಮೌಲ್ಯ ೫,೦೫,೪೯,೫೭೫ ರೂ. ಎಂದು ತಿಳಿದುಬಂದಿದೆ.




