ಮುಂಬೈ : ನೀಟ್ ಅಕ್ರಮ ವಿರೋಧಿಸಿ ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆಯು ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಈ ನಡುವೆ ಪ್ರತಿಭಟನಾನಿರತ ಜೆನ್‌ಜೀಗಳು ರ‍್ಯಾಲಿ, ಸಮಾವೇಶಗಳಲ್ಲಿ ಪೊಲೀಸರ ಕ್ರಮ ತಡೆಯಲು ಮಾಡಿದ ತಂತ್ರಗಳ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ.
ಮುಂಬೈನಲ್ಲಿ ಯುವತಿಯೊಬ್ಬಕೆ ಕೈ ಅಡ್ಡ ಹಿಡಿದು ಪೊಲೀಸ್ ವಾಹನ ತಡೆದು ನಿಲ್ಲಿಸುವುದು, ಇನ್ನೊಂದೆಡೆ ಪ್ರತಿಭಟನಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಪೊಲೀಸ್ ವಾಹನದ ಬಾಗಿಲು ತೆಗೆದು ವಶಕ್ಕೆ ಪಡೆದವರೆಲ್ಲರನ್ನೂ ಬಿಡುಗಡೆಗೊಳಿಸಿ ಓಡಿಹೋಗುವುದು, ಮತ್ತೊಂದೆಡೆ ಜಲ ಫಿರಂಗಿಯನ್ನೇ ರೈನ್ ಡ್ಯಾನ್ಸ್ ಮಾಡಿಕೊಂಡಿದ್ದು, ಬ್ಯಾರಿಕೇಡ್ ಹತ್ತಿ ರೈಲಾಟ, ಅಡ್ಡಕಟ್ಟಿದ್ದ ಅಗ್ಗವನ್ನೇ ಹಿಡಿದು ಟಗ್ಗಾಫರ್ ಆಡಿದ್ದು ಹೀಗೆ ಹಲವು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ರೀತಿಯೂ ಚಳುವಳಿ ಮಾಡಬಹುದು ಎಂದು ಗೊತ್ತೇ ಇರಲಿಲ್ಲ ಎಂದು ಹಲವು ನೆಟ್ಟಿಗರು ಅಚ್ಚರಿಪಟ್ಟು ಶೇರ್ ಮಾಡುತ್ತಿದ್ದರೆ, ಇನ್ನೂ ಕೆಲವರು ಪೊಲೀಸರ ಪರಿಸ್ಥಿತಿ ಕಂಡು ಮರುಗಿದ್ದಾರೆ.
ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನಕ್ಕೆ ಅಡ್ಡ ನಿಂತು 27 ವರ್ಷದ ಯುವತಿ ರಿಯಾ ಅಹಿರ್ ತಡೆದರು. ರಿಯಾ ಅವರ ದಿಟ್ಟ ಪ್ರತಿರೋಧಕ್ಕೆ ಮಣಿದ ಪೊಲೀಸರು ಅಂತಿಮವಾಗಿ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಬೇಕಾಯಿತು.



