Mysore
27
overcast clouds

Social Media

ಸೋಮವಾರ, 06 ಜುಲೈ 2026
Light
Dark

ರಾಜ್ಯದಲ್ಲಿ ಚುರುಕು ಪಡೆದುಕೊಂಡ ಮಳೆ: ಜಲಾಶಯಗಳ ಒಳಹರಿವಿನಲ್ಲಿ ಏರಿಕೆ

ಬೆಂಗಳೂರು: ಕರ್ನಾಟಕದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆ ದಾಖಲಾಗದಿದ್ದರೂ, ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಉತ್ತರ ಕರ್ನಾಟಕದ ನದಿಗಳು ಜೀವಂತಗೊಂಡಿವೆ. ಅದರ ನೇರ ಪರಿಣಾಮ ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಜೋಗ್‍ಪಾಲ್ಸ್‌ಗೂ ಮತ್ತೆ ಜೀವಕಳೆ ಮರಳಿದೆ.

ವಿಶೇಷವಾಗಿ ಬೆಳಗಾವಿ ಸೇರಿದಂತೆ ಗಡಿಭಾಗದ ಜಿಲ್ಲೆಗಳಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗಿರುವುದರಿಂದ ರೈತರು ಮತ್ತು ನೀರಾವರಿ ಅವಲಂಬಿತ ಪ್ರದೇಶಗಳಲ್ಲಿ ನಿರೀಕ್ಷೆಯ ವಾತಾವರಣ ಮೂಡಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂಬರುವ ದಿನಗಳಲ್ಲಿ ಮಳೆಯ ಆರ್ಭಟ ಹೀಗೆಯೇ ಮುಂದುವರಿಯಲಿದೆ. ಇದರಿಂದ ಒಳಹರಿವಿನ ಪ್ರಮಾಣ ದುಪ್ಪಟ್ಟಾಗಲಿದ್ದು, ಜಲಾಶಯಗಳು ಮತ್ತಷ್ಟು ಬೇಗ ಭರ್ತಿಯಾಗುವ ನಿರೀಕ್ಷೆಯಿದೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕೃಷ್ಣಾ ಮತ್ತು ಅದರ ಉಪನದಿಗಳ ಜಲಪ್ರವಾಹದಲ್ಲಿ ಏರಿಕೆ ಕಂಡುಬರುತ್ತಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ನದಿಗಳಿಗೆ ನೀರಿನ ಹರಿವು ಹೆಚ್ಚಾಗಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರಕನ್ನಡ ಭಾಗಗಳಲ್ಲಿ ಇದರ ಪ್ರಭಾವ ಸ್ಪಷ್ಟವಾಗಿ ಕಾಣಿಸುತ್ತಿದ್ದು, ಜಲಾಶಯಗಳ ನೀರಿನ ಮಟ್ಟವೂ ನಿಧಾನವಾಗಿ ಏರಿಕೆಯಾಗುತ್ತಿದೆ.

ಬಿತ್ತನೆಗೆ ಕಾಯುತ್ತಿದ್ದ ರೈತರಿಗೆ ಇದು ತುಸು ನಿಟ್ಟುಸಿರು ತಂದಿದ್ದು, ಕೆರೆ-ಕಟ್ಟೆಗಳು ಮತ್ತು ಸಣ್ಣ ಜಲಮೂಲಗಳಲ್ಲೂ ನೀರಿನ ಸಂಗ್ರಹ ಹೆಚ್ಚಾಗುವ ನಿರೀಕ್ಷೆ ಇದೆ. ಜಲಾಶಯಗಳ ಒಳಹರಿವು ಹೆಚ್ಚಾಗುವುದು ಕುಡಿಯುವ ನೀರು, ನೀರಾವರಿ ಹಾಗೂ ವಿದ್ಯುತ್ ಉತ್ಪಾದನೆ ದೃಷ್ಟಿಯಿಂದಲೂ ಮಹತ್ವದ ಬೆಳವಣಿಗೆಯಾಗಿದೆ.

ಭಾರೀ ಗಾಳಿಗೆ ಮರ ಬಿದ್ದು ಮಲೆನಾಡಿನಾದ್ಯಂತ ತೀವ್ರ ಅನಾಹುತ ಸಂಭವಿಸಿದೆ. ರಸ್ತೆಗೆ ಬೃಹತ್ ಮರಗಳು ಬಿದ್ದು, ಹತ್ತಾರು ಗ್ರಾಮಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು ಮಲೆನಾಡ ಹತ್ತಾರು ಹಳ್ಳಿಗಳು ಕತ್ತಲಲ್ಲಿ ಮುಳುಗಿದೆ.

ಇನ್ನೊಂದೆಡೆ ಧಾರಾಕಾರ ಮಳೆಯಿಂದ ಮಲೆನಾಡಿನ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಮೂಡಿಗೆರೆ ತಾಲೂಕಿನ ಕೋಗಿಲೆ ಗ್ರಾಮದ ಹಬ್ಬಿ ಹಳ್ಳ ಮೈದುಂಬಿ ಉಕ್ಕಿ ಹರಿಯುತ್ತಿದ್ದು, ಹಚ್ಚಹಸಿರಿನ ಪ್ರಕೃತಿ, ಮಂಜಿನ ನಡುವೆ ಹರಿಯುವ ಹಳ್ಳಗಳು ಪ್ರವಾಸಿಗರು ಹಾಗೂ ಸ್ಥಳೀಯರ ಗಮನ ಸೆಳೆಯುತ್ತಿವೆ.

 

Tags:
error: Content is protected !!