Mysore
28
overcast clouds

Social Media

ಶನಿವಾರ, 27 ಜೂನ್ 2026
Light
Dark

ಅಗ್ನಿ ದುರಂತ | ಕೊನೆಗೂ ಅಬಕಾರಿ ಡಿಸಿ ತಲೆದಂಡ

ಮೈಸೂರು : ನಗರದ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್ಡೆನ್‌ಬಾರ್) ನಲ್ಲಿ ಸಂಭವಿಸಿದ  ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಹಿರಿಯ ಅಧಿಕಾರಿಯ ತಲೆದಂಡವಾಗಿದ್ದು, ಮೈಸೂರು ಅಬಕಾರಿ ಉಪ ಆಯುಕ್ತ ನಾಗರಾಜಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.

ಅಬಕಾರಿ ಇಲಾಖೆ ಪರವಾನಗಿ ಇಲ್ಲದೆ ರೆಸ್ಟೋರೆಂಟ್ ನಡೆಸುತ್ತಿದ್ದರೂ ಕ್ರಮಕೈಗೊಳ್ಳದ ಕಾರಣಕ್ಕಾಗಿ ಡಿವೈಎಸ್‌ಪಿ ಸೇರಿದಂತೆ ಇತರ ಅಧಿಕಾರಿಗಳನ್ನು ಅಮಾನತುಪಡಿಸಿದ್ದ ಸರ್ಕಾರ ಹಿರಿಯ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲು ಹಿಂದೇಟು ಹಾಕಲಾಗಿತ್ತು. ಹೀಗಾಗಿ,ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆ,ಆಕ್ರೋಶಗಳು ಕೇಳಿ ಬಂದ ಪರಿಣಾಮವಾಗಿ ಉಪ ಆಯುಕ್ತ ನಾಗರಾಜಪ್ಪ ಅವರನ್ನು ಅಮಾನತುಪಡಿಸಿ ಆದೇಶ ಹೊರಡಿಸಿದೆ. ಈ ಮೂಲಕ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟು ಕಣ್ಣುಮುಚ್ಚಿ ಕುಳಿತಿದ್ದ ಇತರೆ ಇಲಾಖೆಗಳ ಅಧಿಕಾರಿಗಳ ಮನದಲ್ಲೂ ನಡುಕ ಮೂಡಿಸಿದೆ.

ಪ್ರಕರಣ ಏನು
ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ದಟ್ಟಗಳ್ಳಿಯ ಮಾರಾ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿರುವ ಫಾಕ್ಸ್ ಡೆನ್ ಬಾರ್‌ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಹೊರ ರಾಜ್ಯದ ಇಬ್ಬರು ಕಾರ್ಮಿಕರು ಮೃತಪಟ್ಟು ಹಲವರು ಗಾಯಗೊಂಡಿದ್ದರು. ಈ ಘಟನೆಯು ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಅಗ್ನಿ ಸುರಕ್ಷತೆ, ಪರವಾನಗಿ ಹಾಗೂ ನಿಯಮ ಪಾಲನೆಯ ಕುರಿತು ಹಲವಾರು ಪ್ರಶ್ನೆಗಳು ಉಂಟಾಗಿದ್ದವು. ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭಿಸಲಾಗಿತ್ತು.

ನಂತರ ಮೈಸೂರು ಉಪ ವಿಭಾಗದ ಅಬಕಾರಿ ಡಿವೈಎಸ್‌ಪಿ, ಮೈಸೂರು ವಲಯ ಮೂರರ ಅಬಕಾರಿ ನಿರೀಕ್ಷಕ, ಅಬಕಾರಿ ಉಪ ನಿರೀಕ್ಷಕರು,ಒಬ್ಬ ಅಬಕಾರಿ ಪೇದೆ ಸೇರಿದಂತೆ ಐದು ಮಂದಿ ಅಮಾನತುಪಡಿಸಿದ್ದರೆ, ನಗರಪಾಲಿಕೆ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಆಯುಕ್ತರ ಅಮಾನತುಪಡಿಸುವಂತೆ ಸಾರ್ವಜನಿಕ ವಲಯದಿಂದ ಕೇಳಿ ಬರುವ ಜತೆಗೆ,ನಗರಾಭಿವೃದ್ದಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಅಮಾನತಿಗೆ ಶಿಫಾರಸ್ಸು ಮಾಡುವಂತೆ ಡಿಸಿಗೆ ಸೂಚನೆ ನೀಡಿದ್ದರು.

ಒಂದು ವಾರದಿಂದ ಮಾರಾ ರೆಸ್ಟೋಬಾರ್ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಹಾಗೂ ಇತರೆ ಮೂಲಗಳಿಂದ ವರದಿ ಪಡೆದುಕೊಂಡ ಬಳಿಕ ಸರ್ಕಾರಕ್ಕೆ ವರದಿ ನೀಡಿದ್ದರು. ಜಿಲ್ಲಾಡಳಿತ ನೀಡಿದ ಮಾಹಿತಿ ಆಧರಿಸಿ ಉಪ ಆಯುಕ್ತ ನಾಗರಾಜಪ್ಪ ಅವರನ್ನು ಅಮಾನತುಪಡಿಸಿ ಆದೇಶ ಹೊರಡಿಸಲಾಗಿದೆ. ಅಗ್ನಿ ದುರಂತಕ್ಕೆ ಕಾರಣವಾದ ಲೋಪಗಳು, ಅಽಕಾರಿಗಳ ನಿರ್ಲಕ್ಷ್ಯ ಹಾಗೂ ನಿಯಮ ಉಲ್ಲಂಘನೆಗಳ ಕುರಿತು ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ.

Tags:
error: Content is protected !!