Mysore
29
overcast clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಡಿಕೆಶಿ ಜೊತೆಗಿನ ಬಾಂಧ್ಯವ : ಧರ್ಮಸ್ಥಳದಲ್ಲಿ ವಿಜಯೇಂದ್ರ ಹೇಳಿದಿಷ್ಟು

ಧರ್ಮಸ್ಥಳ : ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆಗಿನ ಬಾಂಧವ್ಯದ ಬಗ್ಗೆ ರಾಜ್ಯ ರಾಜಕೀಯದಲ್ಲಿ ಹಲವಾರು ಬಾರಿ ಚರ್ಚೆಗಳು ಆಗುತ್ತಲೇ ಇವೆ. ಹಿಂದೆ, ಯಡಿಯೂರಪ್ಪನವರ ಅವಧಿಯಲ್ಲೂ ಇದು ಸುದ್ದಿಯಲ್ಲಿತ್ತು. ಈ ಬಗ್ಗೆ, ವಿಜಯೇಂದ್ರ, ಅವರು ಧರ್ಮಸ್ಥಳದಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ.

ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ವಿಜಯೇಂದ್ರ ಮತ್ತು ಡಿ.ಕೆ ಶಿವಕುಮಾರ್ ಅವರು ಬ್ಯೂಸಿನೆಸ್ ಪಾರ್ಟ್ನರ್ ಎಂದು ಹಲವಾರು ಬಾರಿ ಹೇಳಿದ್ದರು. ಇಬ್ಬರ ನಡುವೆ ಹೊಂದಾಣಿಕೆ ಇರುವುದರಿಂದಲೇ, ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಹೆಚ್ಚಾಗಿರುವುದು ಎಂದು ಯತ್ನಾಳ್ ಆರೋಪಿಸುತ್ತಲೇ ಬರುತ್ತಿದ್ದಾರೆ. ಈ ಬಗ್ಗೆ, ವಿಜಯೇಂದ್ರ, ಸ್ಪಷ್ಟನೆಯನ್ನು ನೀಡಿದ್ದಾರೆ.

ನಮ್ಮ ಮತ್ತು ಡಿ.ಕೆ ಶಿವಕುಮಾರ್ ನಡುವೆ ಯಾವುದೇ ವ್ಯವಹಾರವಿಲ್ಲ
“ನನ್ನ ಮತ್ತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಡುವೆ ವ್ಯವಹಾರವಿದೆ ಎನ್ನುವ ಆರೋಪಕ್ಕೆ ಯಾವುದೇ ಹುರುಳಿಲ್ಲ ಮತ್ತು ನಮ್ಮ ನಡುವೆ ಆತ್ಮೀಯತೆಯೂ ಇಲ್ಲ. ಯಾರೋ ಈ ಸುದ್ದಿಯನ್ನು ಹರಿಯ ಬಿಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಮತ್ತು ಈಗ ಮುಖ್ಯಮಂತ್ರಿಯಾಗಿದ್ದಾಗ, ಒಬ್ಬ ರಾಜಕಾರಣಿಯಾಗಿ ಏನು ಮರ್ಯಾದೆ, ಗೌರವ ಕೊಡಬೇಕೋ ಅದನ್ನು ಕೊಡುತ್ತಿದ್ದೇನೇಯೇ ಹೊರತು, ಇದರಿಂದ ಹೊರತಾದ ಯಾವುದೇ ಸಂಬಂಧ ನಮ್ಮಿಬ್ಬರ ನಡುವೆ ಇಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವವರಿಗೆ ಮಂಜುನಾಥ ಒಳ್ಳೆಯ ಬುದ್ದಿಯನ್ನು ಕೊಡಲಿ
ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಆದಾಗ, ನನ್ನ ಬಗ್ಗೆ ಏನೇನೋ ಪುಕಾರು ಹಬ್ಬಿಸಲಾಯಿತು. ರಾಜ್ಯದ ಬಿಜೆಪಿ ಅಧ್ಯಕ್ಷರು ಮತ್ತು ರಾಜ್ಯದ ಮುಖ್ಯಮಂತ್ರಿಗಳು ಜೊತೆಯಾಗಿದ್ದಾರೆ ಎಂಬ ಅಪಪ್ರಚಾರ ಮಾಡಲಾಯಿತು. ಡಿ.ಕೆ ಶಿವಕುಮಾರ್ ಮತ್ತು ನನ್ನ ಮಧ್ಯೆ ಯಾವುದೇ ವ್ಯವಹಾರವಿಲ್ಲ. ನನ್ನ ವಿರುದ್ಧ ಯಾರು ಅಪಪ್ರಚಾರ ಮಾಡುತ್ತಿದ್ದಾರೋ, ಅವರಿಗೆ ಆ ಭಗವಂತನೇ ಒಳ್ಳೆಯ ಬುದ್ಧಿ ಕೊಡಲಿ ಎಂದು ಧರ್ಮಸ್ಥಳ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಧರ್ಮಸ್ಥಳ ಶಾಸಕಾಂಗ ಸಭೆಯಿಂದ ಹಿಂದಕ್ಕೆ ಸರಿದಿದ್ದೇವೆ – ವಿಜಯೇಂದ್ರ
ಪರಿಷತ್ ಚುನಾವಣೆಯಲ್ಲಿ ನಮ್ಮ ಇಬ್ಬರೂ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆದರೆ, ಬಿಜೆಪಿಯಲ್ಲಿನ ಅಡ್ಡ ಮತದಾನ, ಲಕ್ಷಾಂತರ ಕಾರ್ಯಕರ್ತರಿಗೆ ನೋವುಂಟು ಮಾಡಿದೆ. ವೈಯಕ್ತಿಕವಾಗಿ ನಾನೂ ನಿದ್ದೆಯಿಲ್ಲದ ರಾತ್ರಿ ಕಳೆದಿದ್ದೇನೆ. ಹಾಗಾಗಿ, ಸತ್ಯ ಹೊರಬರಲಿ ಎಂದು ಧರ್ಮಸ್ಥಳ ಮಂಜುನಾಥನ ಮುಂದೆ ಆಣೆಪ್ರಮಾಣ ಮಾಡುವ ನಿರ್ಧಾರ ಮಾಡಿದ್ದು ನಿಜ. ಆದರೆ, ಪಾರ್ಟಿಯ ಹಿರಿಯರು ಇದಕ್ಕೆ ಅಸಮ್ಮತಿ ಸೂಚಿಸಿದ ಹಿನ್ನಲೆಯಲ್ಲಿ, ಇಲ್ಲಿ ಶಾಸಕಾಂಗ ಸಭೆ ನಡೆಸುವ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದೇನೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.

ಸಿಟಿ ರವಿ ನೇತೃತ್ವದ ಸಮಿತಿಯ ವರದಿ ಸದ್ಯದಲ್ಲೇ ಸಲ್ಲಿಕೆ
ಮೇಲ್ಮನೆ ಚುನಾವಣೆಯಲ್ಲಿನ ಬಿಜೆಪಿ ಅಡ್ಡಮತದಾನ ಪಾರ್ಟಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ಈಗಾಗಲೇ, ವಿಜಯೇಂದ್ರ ಮತ್ತು ಆರ್.ಅಶೋಕ ಅವರನ್ನು ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ದೆಹಲಿಗೆ ಕರೆಸಿಕೊಂಡು ವಿವರಣೆಯನ್ನು ಕೇಳಿದ್ದಾರೆ. ಇನ್ನು, ಸಿಟಿ ರವಿ ನೇತೃತ್ವದಲ್ಲಿನ ಸತ್ಯ ಶೋಧನಾ ಸಮಿತಿ, ವರದಿಯನ್ನು ಇನ್ನೇನು ನೀಡಲಿದೆ. ವರದಿಯಲ್ಲಿ ಏನಿದೆ ಎನ್ನುವುದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಸಿಟಿ ರವಿ ಹೇಳಿದ್ದಾರೆ. ಇದರ ಮಧ್ಯೆ, ರಾಜ್ಯ ಬಿಜೆಪಿಯಲ್ಲಿ ಹಲವು ಬದಲಾವಣೆಯಾಗಲಿದೆ ಎನ್ನುವ ಬಲವಾದ ಸುದ್ದಿ ಹರಿದಾಡುತ್ತಿದೆ.

Tags:
error: Content is protected !!