Mysore
31
broken clouds

Social Media

ಶುಕ್ರವಾರ, 26 ಜೂನ್ 2026
Light
Dark

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ | ಕನ್ನಡಕ್ಕೊಂದು ಒಟಿಟಿ, ʼಗರುಡ ಪುರಾಣʼ ಇತ್ಯಾದಿ

‘ವೆನ್ ಯು ವಾಂಟ್ ಟು ಡು ಸಮ್‌ತಿಂಗ್ ಡು ಇಟ್; ಆರ್ ಎಲ್ಸ್ ವಿಟ್ ನೆಸ್‌ಇಟ್’ ಇದು ಅತ್ಯಂತ ಪ್ರಚಲಿತವಿರುವ ಮಾತು. ಈ ಮಾತು ನೆನಪಾಗಲು ಕಾರಣ ಕಳೆದ ವಾರ ಆರಂಭವಾದ ಹೊಸ ಒಟಿಟಿ ತಾಣ. ‘ಕನ್ನಡಕ್ಕೆ ತನ್ನದೇ ಆದ ಒಟಿಟಿ ಬೇಕು’ ಎನ್ನುವುದು ಬಹುಕಾಲದ ಬೇಡಿಕೆ. ಕನ್ನಡೇತರರು ಮಾಲೀಕರಾಗಿರುವ ಒಟಿಟಿ ಇತ್ತೀಚೆಗೆ ಕನ್ನಡ ಚಿತ್ರಗಳಿಗೆ ಬೆನ್ನು ಹಾಕಿರುವುದು ಇದಕ್ಕೆ ಮೂಲ ಕಾರಣ. ರಾಜ್ಯ ಸರ್ಕಾರವೇ ಇಂತಹದೊಂದು ಪ್ರಯತ್ನ ಮಾಡಲು ಹೆಜ್ಜೆ ಇಟ್ಟದ್ದೇನೋ ಹೌದು. ಆದರೆ ‘ಸರ್ಕಾರದ ಕೆಲಸ ಅಂದರೆ ದೇವರ ಕೆಲಸ’ ಎಂದುಕೊಂಡು ಆ ಯೋಜನೆ ಹೆಜ್ಜೆ ಇಡುತ್ತಿದೆ. ಬಹಶಃ, ‘ನಿಧಾನವೇ ಪ್ರಧಾನ’ ಎನ್ನುವುದು ಅದರ ಧ್ಯೇಯವಾಕ್ಯ ಇದ್ದಂತಿದೆ. ಚಲನಚಿತ್ರ, ಮನರಂಜನೆ ಸರ್ಕಾರದ ಆದ್ಯತಾ ಕ್ಷೇತ್ರ ಅಲ್ಲವಲ್ಲ!

ಸರ್ಕಾರದ ಒಟಿಟಿ ಸ್ಥಾಪನೆ ಆಗುವ ಮೊದಲೇ ಇದೀಗ, ಎವಿಆರ್, ಸಿನೆ- ಮ್ಯಾಕ್ಸ್ ಹೆಸರಿನ ಒಟಿಟಿ ಆರಂಭವಾಗಿದೆ. ಕಳೆದ ವಾರ ಅದರ ಉದ್ಘಾಟನೆ ಇತ್ತು. ಇದು ಅರವಿಂದ ವೆಂಕಟೇಶ ರೆಡ್ಡಿ ಅವರ ಮಾಲೀಕತ್ವದ ಒಟಿಟಿ. ಅವರು ಚಿತ್ರ ನಿರ್ಮಾಪಕರು. ನಿರ್ಮಾಣ ಯೋಜನೆಗಳಿಗೆ ಬೆಂಬಲ ನೀಡುತ್ತಿದ್ದ ರೆಡ್ಡಿ ಅವರು, ‘ರಿಚ್ಚಿ ರಿಚ್’, ‘೮’ ಮುಂತಾದ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಇದೀಗ ಅವರ ಮಾಲೀಕತ್ವದ ಒಟಿಟಿ.

ಇದು ಕನ್ನಡಿಗರಿಂದ ಕನ್ನಡಿಗರಿಗಾಗಿಯೇ ಆರಂಭಿಸಿರುವ ಒಟಿಟಿ. ಕನ್ನಡ ಚಲನಚಿತ್ರ ಹಾಗೂ ಸೃಜನಾತ್ಮಕ ಮನರಂಜನಾ ವಿಷಯಗಳನ್ನು ವಿಶ್ವದಾದ್ಯಂತ ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶದಿಂದ ರೂಪುಗೊಂಡಿರುವ ಒಟಿಟಿ ಎನ್ನಲಾಗಿದ್ದು, ಈಗಾಗಲೇ ಇವರ ಬಳಿ ೭೫೦ಕ್ಕೂ ಹೆಚ್ಚು ಚಿತ್ರಗಳಿವೆಯಂತೆ. ಚಲನಚಿತ್ರಗಳಷ್ಟೇ ಅಲ್ಲದೆ, ಮನರಂಜನಾ ಕಾರ್ಯಕ್ರಮಗಳ ನೇರಪ್ರಸಾರ, ರಿಯಾಲಿಟಿ ಶೋಗಳು ಇರಲಿವೆಯಂತೆ. ಸೃಜನ್ ಲೋಕೇಶ್ ನಡೆಸಿಕೊಡಲಿರುವ ‘ಮಜಾ ಟಾಕೀಸ್’, ವಾರಾಂತ್ಯ ವಿಶೇಷ ಕಾರ್ಯ ಕ್ರಮಗಳು ಇರಲಿವೆ. ಆಸಕ್ತರಿಗೆ ದುಬಾರಿ ಆಗದಂತೆ ಮಾಸಿಕ, ವಾರ್ಷಿಕ ಶುಲ್ಕಗಳನ್ನು, ಪ್ರಸಾರ ಗುಣಮಟ್ಟಕ್ಕೆ ಅನುಗುಣವಾಗಿ ಇಡಲಾಗಿದೆ. ಕಡಿಮೆ ನಿರ್ಮಾಣ ವೆಚ್ಚದ ಚಿತ್ರಗಳಿಗೆ ಇದು ಕಾಯಕಲ್ಪವಾಗಲು ಸಾಧ್ಯವಾಗಬಹುದು ಎಂದುಕೊಳ್ಳೋಣ.

ಒಟಿಟಿ ವಿಷಯ ಬಂದಾಗ ಈಗ ಅಲ್ಲಿರುವ ಕನ್ನಡ ಚಲನಚಿತ್ರಗಳ ನೆನಪಾಗುತ್ತದೆ. ನೆಟ್‌ಫ್ಲಿಕ್ಸ್, ಅಮೆಜನ್ ಮಾತ್ರವಲ್ಲ, ಯುಟ್ಯೂಬ್‌ಗಳಲ್ಲಿ ಸಾಕಷ್ಟು ಕನ್ನಡ ಚಿತ್ರಗಳಿವೆ. ಅವೆಲ್ಲ ಕನ್ನಡದ ತಯಾರಾದ ಚಿತ್ರಗಳಲ್ಲ. ಹಿಂದಿ ಸೇರಿದಂತೆ ಇತರ ಭಾಷೆಗಳಿಂದ ಅವುಗಳ ಪ್ರಸಾರದ ಹಕ್ಕನ್ನು ಪಡೆಯುವ ವೇಳೆ, ಇತರ ಭಾಷೆಗಳಲ್ಲಿ ಡಬ್ ಮಾಡಿ ಪ್ರಸಾರ ಮಾಡುವ ಹಕ್ಕನ್ನೂ ಅವು ಪಡೆದಿರುತ್ತವೆ. ಮಲಯಾಳ, ತಮಿಳು, ತೆಲುಗು ಭಾಷೆಗಳ ಬಹುತೇಕ ಚಿತ್ರಗಳು, ಹೊಸವು ಮಾತ್ರವಲ್ಲ, ಹಳೆಯ ಚಿತ್ರಗಳನ್ನು ಕೂಡ ಡಬ್ ಆಗಿ ಕನ್ನಡದಲ್ಲಿ ನೋಡಲು ಸಾಧ್ಯ. ಅದರಿಂದಾಗಿಯೇ, ಮೂಲ ಕನ್ನಡ ಚಿತ್ರಗಳೆಂದರೆ, ಆ ಮಂದಿಗೆ ಒಂದು ರೀತಿಯ ತಿರಸ್ಕಾರ.

ಕಳೆದ ವಾರ ಕನ್ನಡ ಸಾಹಿತ್ಯ ಪರಿಷತ್‌ನ ದತ್ತಿಪ್ರಶಸ್ತಿ ಪ್ರದಾನ ಸಮಾರಂಭವೊಂದಕ್ಕೆ ಅತಿಥಿಯಾಗಿ ಹೋಗಿದ್ದ, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ. ಜಯಮಾಲ ಅವರು ಈ ಬಗ್ಗೆ ಅಲ್ಲಿ ಪ್ರಸ್ತಾಪಿಸಿದರು. ಅಧ್ಯಕ್ಷೆಯಾಗಿ ನಾನು ಈ ಮಾತು ಹೇಳುವಂತಿಲ್ಲ, ಆದರೆ ವೈಯಕ್ತಿಕವಾಗಿ ಹೇಳುತ್ತೇನೆ. ನನ್ನ ಪ್ರಕಾರ. ಕನ್ನಡ ಚಿತ್ರಗಳ ಇಂದಿನ ಈ ಪರಿಸ್ಥಿತಿಗೆ, ಭಾಗಶಃ ಪರಭಾಷಾ ಚಿತ್ರಗಳು ಡಬ್ ಆಗಿ ಬರುತ್ತಿರುವುದು ಕಾರಣ, ಎನ್ನುವುದಾಗಿತ್ತು ಅವರ ಮಾತು.

ಪರಭಾಷೆಯ ಚಿತ್ರಗಳಷ್ಟೇ ಅಲ್ಲ, ಅವುಗಳ ಹಾಸ್ಯ ದೃಶ್ಯಗಳು ಸೇರಿದಂತೆ, ಯುಟ್ಯೂಬ್ ಮೂಲಕ ಗಳಿಕೆಗೆ ಸಾಧ್ಯವಿರುವ ಎಲ್ಲ ರೀತಿಯ ರೀಲುಗಳೂ ಅಲ್ಲಿವೆ. ನಾವು ಕೇಳದ ಹೆಸರಿನ ಚಿತ್ರಗಳಿವೆ. ಈಗಾಗಲೇ ಚಿತ್ರೀಕರಣ ಆಗುತ್ತಿರುವ ಚಿತ್ರಗಳ ಹೆಸರಿನ ಚಿತ್ರಗಳಿವೆ. ಅಲ್ಲಿ ಶೀರ್ಷಿಕೆಗಳನ್ನು ಮನಸೋ ಇಚ್ಛೆ ಇಡುತ್ತಾರೆ. ಆ ಹೆಸರಿನ ಚಿತ್ರಗಳು ಇವೆಯೇ ಎನ್ನುವುದನ್ನು ನೋಡುವ ವ್ಯವಸ್ಥೆ ಇದ್ದಂತಿಲ್ಲ.

ಒಟಿಟಿ ವಿಷಯ ಬಿಡಿ, ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳಲ್ಲಿ ಒಂದು ‘ಗರುಡ’. ಈ ಹೆಸರಿನ ಎರಡು ಚಿತ್ರಗಳು ಹಿಂದೆ ಬಂದಿವೆ. ೧೯೯೯ರಲ್ಲಿ ತೆರೆಕಂಡ ‘ಗರುಡ’ ಚಿತ್ರವನ್ನು ಹ ಸೂ ರಾಜಶೇಖರ್ ನಿರ್ದೇಶಿಸಿದ್ದರು. ದೇವರಾಜ್ ಮುಖ್ಯಭೂಮಿಕೆಯ ಚಿತ್ರ. ಸಾಮಾನ್ಯವಾಗಿ ಚಿತ್ರ ತೆರೆಕಂಡು ೨೦ ವರ್ಷಗಳ ನಂತರ, ಯಾರಾದರೂ ಕೋರಿದರೆ, ಆ ಶೀರ್ಷಿಕೆಯನ್ನು ನೀಡುವುದಿದೆ. ಹಲವು ಚಿತ್ರಗಳ ಹೆಸರು ಹಾಗೆ ಪುನರಾವರ್ತನೆ ಆಗಿವೆ. ‘ಗರುಡ’ ಕೂಡ. ೨೦೨೨ರಲ್ಲಿ ಇದೇ ಹೆಸರಿನ ಚಿತ್ರ ಸಿದ್ಧವಾಗಿ ತೆರೆಗೆ ಬಂತು. ಶ್ರೀನಗರ ಕಿಟ್ಟಿ ಮುಖ್ಯಭೂಮಿಕೆಯ ಆ ಚಿತ್ರವನ್ನು ಧನಕುಮಾರ್ ನಿರ್ದೇಶಿಸಿದ್ದರು. ಅದಾಗಿ ನಾಲ್ಕು ವರ್ಷಗಳಷ್ಟೇ ಆಗಿದೆ. ಈಗ ಮತ್ತೆ ಅದೇ ಹೆಸರಿನ ಚಿತ್ರ. ಇತ್ತೀಚಿನ ಬೆಳವಣಿಗೆಗಳು ಇದಕ್ಕೆ ಕಾರಣ.

ಹಿಂದೆ ಯಾವುದೇ ಸಂಸ್ಥೆ ಶೀರ್ಷಿಕೆಯನ್ನು ನೋಂದಾಯಿಸುವ ಮೊದಲು ಸಂಬಂಧಪಟ್ಟ ಸಂಸ್ಥೆಗಳ ಸಮ್ಮತಿ ಪಡೆಯುವ ಪರಿಪಾಠ ಇತ್ತು. ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕರೊಬ್ಬರು ಯಾವುದಾದರೂ ಕನ್ನಡ ಚಿತ್ರದ ಶೀರ್ಷಿಕೆ ನೋಂದಾಯಿಸಲು ಅರ್ಜಿ ಸಲ್ಲಿಸಿದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಆ ಹೆಸರು ನೋಂದಣಿ ಆಗಿದೆಯೇ ಎಂದು ವಿಚಾರಿಸಿ, ಆಗದೆ ಇದ್ದರೆ ಅನುಮತಿ ನೀಡಲಾಗುತ್ತಿತ್ತು. ಆದರೆ ಈಗ ವಾಣಿಜ್ಯ ಮಂಡಳಿ ಹೆಸರಲ್ಲಿ ನೋಂದಣಿ ಆಗುವ ಸಂಸ್ಥೆಗಳೆಲ್ಲ ಶೀರ್ಷಿಕೆ ನೋಂದಣಿ ಮಾಡುತ್ತಿರುವುದು ಈ ಬೆಳವಣಿಗೆಗೆ ಮೂಲ ಕಾರಣ.

ಕಳೆದ ವಾರ ಭಾರೀ ಚರ್ಚೆಗೆ ಗ್ರಾಸ ಆದದ್ದು, ‘ಅಯೋಗ್ಯ ೨’ ನಾಯಕ ನೀನಾಸಂ ಸತೀಶ್. ಸಾಮಾಜಿಕ ತಾಣಗಳು, ನವಮಾಧ್ಯಮಗಳು ಚಿತ್ರರಂಗದ ಏಳುಬೀಳುಗಳಲ್ಲಿ ವಹಿಸುತ್ತಿರುವ ಪಾತ್ರದ ಬಗ್ಗೆ ಸತೀಶ್ ಆಡಿದ ಮಾತುಗಳು ಅ ಸಾಕಷ್ಟು ವಾಗ್ವಾದಕ್ಕೆ ಕಾರಣವಾಗಿತ್ತು. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಅವರ ಮಾತನ್ನು ಅವುಗಳದೇ ಆದ ರೀತಿಯಲ್ಲಿ ಅರ್ಥೈಸಿ, ವಿಶ್ಲೇಷಿಸಿ, ಸತೀಶ್ ಅವರಿಂದ ಸಮಜಯಿಶಿ ಪಡೆದುಕೊಂಡದ್ದು ಸಾಕಷ್ಟು ಗಮನ ಸೆಳೆದ ಪ್ರಸಂಗ.

ಅದರ ಬೆನ್ನ ತಮ್ಮ ಚಿತ್ರಗಳು ಸೋತಾಗ, ನಿರ್ಮಾಪಕರು ವಾಹಿನಿಗಳಲ್ಲಿ ಬಂದು ಕ್ಯಾಮೆರಾ ಮುಂದೆ ಹಲಬುವ ಪ್ರಸಂಗವನ್ನು ಪ್ರಸ್ತಾಪಿಸಿ, ಇದು ಇತರ ನಿರ್ಮಾಪಕರನ್ನು ಧೃತಿಗೆಡಿಸುತ್ತದೆ, ಹೆಜ್ಜೆ ಮುಂದೆ ಇಡದಂತೆ ಮಾಡುತ್ತದೆ, ಎನ್ನುವರ್ಥದ ಮಾತುಗಳನ್ನು ಆಡುತ್ತಾ, ಚಿತ್ರ ನಿರ್ಮಾಣಕ್ಕೆ ಬರುವ ಮೊದಲು, ಅಲ್ಲಿನ ಕುರಿತಂತೆ ತಿಳಿದು ಬರಬೇಕು, ಇಲ್ಲಿ ಬಂದ ಮೇಲೆ ಎಲ್ಲದಕ್ಕೂ ಸಿದ್ಧವಾಗಿ ಇರಬೇಕು, ವ್ಯವಹಾರ ಎಂದ ಮೇಲೆ, ಏಳು- ಬೀಳುಗಳು ಸಹಜ ಎಂದರು.

ಇದು ನಿರ್ಮಾಪಕರಲ್ಲಿ ಕೆಲವರಿಗೆ ಹಿತವಾಗಲಿಲ್ಲ. ಸಕ್ರಿಯವಾಗಿರುವ ನಿರ್ಮಾಪಕರ ಸಂಘ ಮೂರನೇ ದಿನ ಪತ್ರಿಕಾಗೋಷ್ಠಿ ಕರೆಯಿತು. ನೀನಾಸಂ ಸತೀಶ್ ನಿರ್ಮಾಪಕರ ಕುರಿತಂತೆ ಆಡಿರುವ ಮಾತುಗಳ ಕುರಿತಂತೆ ಇದ್ದ ವಿಷಯವಾಗಿತ್ತದು.

ಸತೀಶ್, ಪತ್ರಿಕಾಗೋಷ್ಠಿಗೆ ಮೊದಲೇ, ತಾವು ಯಾರನ್ನೂ ನೋಯಿಸುವ ಉದ್ದೇಶ ಹೊಂದಿರಲಿಲ್ಲ, ತಾವು ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಚಿತ್ರೋದ್ಯಮದ ಹಿತದೃಷ್ಟಿಯಿಂದ ಆಡಿದ್ದ ಮಾತಾಗಿತ್ತು ಅದು. ಒಂದು ವೇಳೆ ಇದರಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ ಎಂದು ವಿಡಿಯೋ ಬಿಡುಗಡೆ ಮಾಡಿದರು. ಮಾರನೇ ದಿನ ಪತ್ರಿಕಾಗೋಷ್ಠಿಗೂ ಹೋದರು.

ನಿರ್ಮಾಪಕರಾಗಿ ಬರುವ ಮೊದಲು ಚಿತ್ರದ ಬಗ್ಗೆ ಒಂದಷ್ಟು ತಿಳಿದುಕೊಂಡು ಬರಬೇಕು ಎಂದ ಸತೀಶ್ ಅವರ ಮಾತು ನೂರಕ್ಕೆ ನೂರು ಸತ್ಯ, ಮುಗ್ದ ಮಂದಿಯನ್ನು ನಿರ್ಮಾಪಕರಾಗಿಸುವ ಕೆಲವು ಮಂದಿ, ಅವರಿಗೆ ಇನ್ನಿಲ್ಲದ ಆಸೆ ತೋರಿಸಿದ ಪ್ರಸಂಗಗಳು ಸಾಕಷ್ಟಿವೆ. ಕೈಯಲ್ಲಿದ್ದ ದುಡ್ಡು ಮಾತ್ರವಲ್ಲದೆ ಮನೆ, ಮಠ ಕಳೆದುಕೊಂಡ ಉದಾಹರಣೆಗಳಿವೆ. ಚಿತ್ರವೊಂದರ ನಿರ್ಮಾಣ ಹೇಗೆ, ಅದರ ವಿವಿಧ ಹಂತಗಳು ಯಾವುವು ಎನ್ನುವುದರ ಅರಿವೂ ಇಲ್ಲದ ನಿರ್ಮಾಪಕರಿದ್ದಾರೆ.

ಒಂದು ಚಿತ್ರದ ನಿರ್ಮಾಣಕ್ಕೆ, ಅದು ಕಡಿಮೆ ವೆಚ್ಚದ್ದಿರಲಿ, ಅದ್ದೂರಿ ಇರಲಿ, ಅದರ ಬಜೆಟ್ ಹಾಕಲು ಗೊತ್ತಿಲ್ಲದವರದೇ ಹೆಚ್ಚು ಕಾರುಬಾರು. ಸರಿಯಾಗಿ ಖರ್ಚುವೆಚ್ಚದ ಲೆಕ್ಕಾಚಾರ ಹಾಕಿ, ಅದರ ಪ್ರತಿಶತ ೧೦-೧೫ರಷ್ಟು ವ್ಯತ್ಯಾಸ ಆಗಬಹುದು. ಆದರೆ ಈಗ ಹಾಗಾಗುವುದು ಅಪರೂಪ. ‘ಮಾರ್ಟಿನ್’, ‘೪೫’ ಮುಂತಾದ ಚಿತ್ರಗಳ ಉದಾಹರಣೆ ನಮ್ಮ ಕಣ್ಣಮುಂದಿದೆ.

ಇತ್ತೀಚಿನ ದಿನಗಳಲ್ಲಿ ಚಿತ್ರೀಕರಣ ಮುಗಿದ ನಂತರ ಗ್ರಾಫಿಕ್ಸ್, ವಿಶೇಷ ಪರಿಣಾಮಗಳು, ಡಿಐ ಇತ್ಯಾದಿಗಳ ವೆಚ್ಚಗಳಂತೂ ಸಿಕ್ಕಿದವನಿಗೆ ಸೀರುಂಡೆ.

ಅಷ್ಟೇನೂ ಬೇಕಿಲ್ಲ. ಸತೀಶ್ ಅಭಿನಯದ ‘ಅಶೋಕ ಬ್ಲೇಡ್’ ಚಿತ್ರಕ್ಕೆ, ಅದರ ನಿರ್ಮಾಣ ಪಾಲುದಾರರೂ ಆಗಿದ್ದ ನಿರ್ದೇಶಕ ವಿನೋದ್ ದೊಂಡಾಳೆ ಹಾಕಿದ್ದ ಅಂದಾಜು ವೆಚ್ಚ ಆರಂಭದಲ್ಲಿ ಎರಡು ಕೋಟಿ ರೂಪಾಯಿಗಳಾಗಿತ್ತು. ಸತೀಶ್ ಅವರೂ ನಿರ್ಮಾಣ ಪಾಲುದಾರರಾದರು. ನಿರ್ಮಾಣ ವೆಚ್ಚ ಏಳುಕೋಟಿ ರೂ. ದಾಟಿದರೂ ಚಿತ್ರ ಮುಗಿಯದೆ ಇzಗ, ಅವರು ಈ ವಿಷಯವನ್ನು ಆತ್ಮೀಯರ ಬಳಿ ಹೇಳಿದ್ದಿದೆ.

‘ಅಶೋಕ ಬ್ಲೇಡ್’ ವಿನೋದ್ ಪಾಲಿಗೆ ಬ್ಲೇಡೇ ಆಯಿತು! ಆ ಚಿತ್ರ ‘ದ ರೈಸ್ ಆ- ಅಶೋಕ’ ಹೆಸರಿನಲ್ಲಿ ತೆರೆಗೆ ಬಂತು. ನಿರ್ದೇಶಕರಾಗಿ ವಿನೋದ್ ಅವರದೇ ಹೆಸರಿತ್ತು.

ಕನ್ನಡ ಚಿತ್ರೋದ್ಯಮದಲ್ಲಿ, ಚಿತ್ರನಿರ್ಮಾಣ, ಸಿದ್ಧತೆ, ಕಥೆಗಳ ಆಯ್ಕೆ, ಕಲಾವಿದ – ತಂತ್ರಜ್ಞರ ಆಯ್ಕೆ, ಖರ್ಚು – ವೆಚ್ಚಗಳು, ವ್ಯವಹಾರ ಕುರಿತಂತೆ ಹೊಸಬರಿಗೆ ತಿಳಿಯ ಹೇಳುವ ಅಗತ್ಯ ಈಗ ಹೆಚ್ಚಿದೆ.

Tags:
error: Content is protected !!