Mysore
24
overcast clouds

Social Media

ಬುಧವಾರ, 17 ಜೂನ್ 2026
Light
Dark

ದುಬಾರೆ ದುರಂತ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ; ಆನೆ ಶಿಬಿರಗಳಿಗೆ ಹೊಸ ನಿಯಮ

ಬೆಂಗಳೂರು : ರಾಜ್ಯದ ಆನೆ ಶಿಬಿರಗಳು, ಸೆರೆಯಲ್ಲಿರುವ ಆನೆಗಳ ಕೇಂದ್ರಗಳು ಹಾಗೂ ಸಾರ್ವಜನಿಕ ವೀಕ್ಷಣಾ ಕೇಂದ್ರಗಳಿಗೆ ಕರ್ನಾಟಕ ಅರಣ್ಯ ಇಲಾಖೆ ಮೊದಲ ಬಾರಿಗೆ ಸಮಗ್ರ ‘ಕರ್ನಾಟಕ ಆನೆ ಶಿಬಿರ ಸುರಕ್ಷತಾ ಪ್ರೋಟೋಕಾಲ್’ ಅನ್ನು ಜಾರಿಗೆ ತಂದಿದೆ.

ಮೇ 19ರಂದು ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಎರಡು ಆನೆಗಳ ಗುದ್ದಾಟದಲ್ಲಿ ಸಿಲುಕಿ ತಮಿಳುನಾಡಿನ ಪ್ರವಾಸಿಗರೊಬ್ಬರು ಮೃತಪಟ್ಟ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲು ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.

ಈ ಹೊಸ ನಿಯಮಗಳ ಪ್ರಕಾರ, ಪ್ರವಾಸಿಗರು ಇನ್ನು ಮುಂದೆ ಆನೆಗಳನ್ನು ಮುಟ್ಟುವುದು, ಸ್ನಾನ ಮಾಡಿಸುವುದು ಅಥವಾ ಆಹಾರ ನೀಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಹೊಸ ಮಾರ್ಗಸೂಚಿಗಳ ಅನ್ವಯ, ಪ್ರವಾಸಿಗರು ಆನೆಗಳನ್ನು ವೀಕ್ಷಿಸಲು ಕನಿಷ್ಠ 30 ಅಡಿ ಅಂತರ ಕಾಯ್ದುಕೊಳ್ಳಬೇಕು. ಶಿಬಿರಗಳಲ್ಲಿ ಗುರುತಿಸಲಾದ ‘ಹಸಿರು ವಲಯ’ ಅಥವಾ ವೀಕ್ಷಣಾ ಗ್ಯಾಲರಿಯಲ್ಲೇ ನಿಂತು ಆನೆಗಳನ್ನು ವೀಕ್ಷಿಸಲು ಅವಕಾಶ ನೀಡಲಾಗುತ್ತದೆ.

ಆನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆ ಮತ್ತು ಆನೆಗಳ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಜಾರಿಗೆ ತಂದಿರುವ ಈ ಹೊಸ ನಿಯಮಗಳು ರಾಜ್ಯದ ಎಲ್ಲಾ ಶಿಬಿರಗಳಲ್ಲಿ ಶೀಘ್ರವೇ ಅನುಷ್ಠಾನಗೊಳ್ಳಲಿವೆ.

ಸಿಸಿಟಿವಿ ನಿಗಾ:
ಆನೆಗಳ ಹಾಗೂ ಪ್ರವಾಸಿಗರ ಎಲ್ಲಾ ಚಟುವಟಿಕೆಗಳನ್ನು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಸಾರ್ವಜನಿಕ ವೀಕ್ಷಣೆಗೆ ಒಂದು ಶಿಬಿರದಲ್ಲಿ ಗರಿಷ್ಟ 10 ಆನೆಗಳನ್ನು ಮಾತ್ರ ಇರಿಸಲು ಅವಕಾಶ ನೀಡಲಾಗಿದೆ.

ಪ್ರವಾಸಿಗರಿಗೆ ಸಮಯ ಮತ್ತು ಸಂಖ್ಯಾ ಮಿತಿ
ಶಿಬಿರದ ಸಾಮರ್ಥ್ಯ, ಆನೆಗಳ ಸಂಖ್ಯೆ ಮತ್ತು ಪ್ರವಾಸಿಗರ ದಟ್ಟಣೆಯನ್ನು ಆಧರಿಸಿ ಪ್ರವಾಸಿಗರ ಬ್ಯಾಚ್‌ಗಳು ಹಾಗೂ ವೀಕ್ಷಣಾ ಸಮಯವನ್ನು ನಿಗದಿಪಡಿಸಲಾಗುತ್ತದೆ. ಹಸಿರು ವಲಯದಲ್ಲಿ ಗರಿಷ್ಟ 50 ರಿಂದ 75 ಪ್ರವಾಸಿಗರಿಗೆ ಮಾತ್ರ ಅವಕಾಶ ಇರಲಿದೆ. ಆನೆಗಳನ್ನು ವೀಕ್ಷಿಸಲು 20 ರಿಂದ 30 ನಿಮಿಷಗಳ ಕಾಲಾವಕಾಶ ನೀಡಲಾಗುತ್ತಿದ್ದು, ಅದಕ್ಕೂ ಮೊದಲು 10 ನಿಮಿಷಗಳ ಬ್ರೀಫಿಂಗ್ ಸಮಯ ಹಾಗೂ ೧೦ ನಿಮಿಷಗಳ ಬಫರ್ ಸಮಯ ಇರಲಿದೆ.

10 ಶಿಬಿರ 114 ಆನೆಗಳು
ರಾಜ್ಯದ 10 ಆನೆ ಶಿಬಿರಗಳಲ್ಲಿ ಒಟ್ಟು 114 ಆನೆಗಳಿದ್ದು, ಇದು ದೇಶದಲ್ಲೇ ಅತಿ ಹೆಚ್ಚಾಗಿದೆ. ಪ್ರವಾಸಿಗರಿಗೆ ಪ್ರವೇಶ ಇರುವ ಪ್ರಮುಖ ಶಿಬಿರಗಳಲ್ಲಿ ದುಬಾರೆ, ಹಾರಂಗಿ, ಮತ್ತಿಗೋಡು, ಸಕ್ರೆಬೈಲು ಮತ್ತು ದಾಂಡೇಲಿಯ ಪನ್ಸೋಲಿಯಲ್ಲಿ ಪ್ರವಾಸಿಗರಿಗೆ ಅವಕಾಶವಿದೆ.

ಮೂರು ವಲಯಗಳು
ಕೆಂಪು ವಲಯ: ಆನೆಗಳಿಗೆ ಸ್ನಾನ, ಆಹಾರ, ಟೆಥರಿಂಗ್ ಮತ್ತು ಪಶುವೈದ್ಯಕೀಯ ಚಿಕಿತ್ಸೆ ನೀಡುವ ಪ್ರದೇಶ. ಇಲ್ಲಿ ಮಾವುತರು, ವೈದ್ಯರು ಹಾಗೂ ಸಿಬ್ಬಂದಿಗೆ ಮಾತ್ರ ಪ್ರವೇಶ
ಕಿತ್ತಳೆ ವಲಯ: ಸಿಬ್ಬಂದಿ ಓಡಾಟ ಹಾಗೂ ತುರ್ತು ಕಾರ್ಯಾಚರಣೆಗಳಿಗೆ ಮೀಸಲಾದ ನಿಯಂತ್ರಿತ ಮಾರ್ಗ
ಹಸಿರು ವಲಯ: ಪ್ರವಾಸಿಗರು ಮಾರ್ಗದರ್ಶಕರೊಂದಿಗೆ ನಿಂತು ಆನೆಗಳನ್ನು ವೀಕ್ಷಿಸುವ ಪ್ರದೇಶ. ಇಲ್ಲಿ ಆನೆಗಳನ್ನು ಮುಟ್ಟುವುದು, ಆಹಾರ ನೀಡುವುದು ಅಥವಾ ಸ್ನಾನ ಮಾಡಿಸುವುದು ಸಂಪೂರ್ಣ ನಿಷೇಧ

Tags:
error: Content is protected !!