ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನೂತನ ಸರ್ಕಾರದಲ್ಲಿ ಖಾತೆ ಹಂಚಿಕೆಯು ಆರಂಭಿಕ ದಿನಗಳಲ್ಲೇ ತೀವ್ರ ಗೊಂದಲ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಖಾತೆಯ ಬಗ್ಗೆ ಸ್ಪಷ್ಟತೆ ಸಿಗುವವರೆಗೆ ತಾವು ಅಧಿಕಾರ ಸ್ವೀಕರಿಸುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದ್ದಾರೆ. ಅವರಿಗೆ ನೀಡಲಾಗಿರುವ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಲ್ಲಿ ಬಿಡಿಎ ಮತ್ತು ಬಿಎಂಆರ್‌ಡಿಎ ಅನ್ನು ಸೇರಿಸಲಾಗಿಲ್ಲ. ಈ ಎರಡು ಪ್ರಮುಖ ಪ್ರಾಧಿಕಾರಗಳಿಲ್ಲದೆ ಖಾತೆ ಪರಿಣಾಮಕಾರಿಯಾಗಿರುವುದಿಲ್ಲ ಎಂಬುದು ಅವರ ವಾದ. ಈ ಅಸಮಾಧಾನವನ್ನು ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮುಂದಿಟ್ಟಿದ್ದಾರೆ.
ಖಾತೆ ಹಂಚಿಕೆ ಮಾಡಿ ನಾಲ್ಕು ದಿನ ಕಳೆದರೂ ಸಚಿವರು ಅಧಿಕಾರವಹಿಸಿಕೊಂಡಿಲ್ಲ. ಐದು ನಗರ ಪಾಲಿಕೆಗಳಿಗೆ ಮಾತ್ರ ಬೆಂಗಳೂರು ಉಸ್ತುವಾರಿ ಪಡೆಯಬೇಕಾ ಎಂದು ವರಿಷ್ಠರ ಬಳಿ ಕೃಷ್ಣ ಭೈರೇಗೌಡ ಅವರು ಅಸಮಾಧಾನ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಇಲಾಖೆಯನ್ನು ಸಮರ್ಥವಾಗಿ ನಿಬಾಯಿಸಿದ್ದೇನೆ. ಆದರೂ ಈ ರೀತಿಯ ಅಪೂರ್ಣ ಖಾತೆ ನೀಡುವ ಮೂಲಕ ತಾರತಮ್ಯ ಮಾಡುತ್ತಿರುವುದು ಏಕೆ ಎಂದು ಕೃಷ್ಣಭೈರೇಗೌಡ ಅವರು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಹಿಂದೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದವರಿಗೆ ಬಿಡಿಎ ಮತ್ತು ಬಿಎಂಆರ್‌ಡಿಎ ಜವಾಬ್ದಾರಿಯನ್ನಾಗಿ ನೀಡಲಾಗುತ್ತಿತ್ತು. ಈಗ ಈ ಪದ್ಧತಿಯನ್ನು ಬದಲಾಯಿಸಿದ್ದು ಯಾಕೆ? ಈ ಎರಡೂ ಪ್ರಾಧಿಕಾರಗಳ ಜವಾಬ್ದಾರಿಯನ್ನು ನೀಡಬೇಕು ಎಂದು ಭೈರೇಗೌಡ ಆಗ್ರಹಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಖಾತೆಯ ಪ್ರಬಲ ಆಕಾಂಕ್ಷಿಯಾಗಿದ್ದ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರಿಗೆ ಈ ಖಾತೆ ಸಿಗದಿದ್ದಾಗ ಅವರು ಆರಂಭದಲ್ಲಿ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದರು. ನಂತರದ ಮಾತುಕತೆಯಿಂದ ಅವರು ಸಮಾಧಾನಗೊಂಡಿದ್ದರೂ, ಸಂಪುಟದಲ್ಲಿ ಖಾತೆ ಹಂಚಿಕೆಯ ಕುರಿತು ಭಿನ್ನಮತ ಮುಂದುವರಿದಿದೆ. ಸಚಿವ ಕೆ.ಎಚ್. ಮುನಿಯಪ್ಪ ಕೂಡ ತಮ್ಮ ಖಾತೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಸರ್ಕಾರದ ಆಂತರಿಕ ಸಮನ್ವಯದ ಮೇಲೆ ಪ್ರಶ್ನೆ ಮೂಡಿಸಿದೆ.
ಈ ಹಿಂದೆ ಡಿಕೆ ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ದಿ ಖಾತೆಯನ್ನು ಹೊಂದಿದ್ದರು. ಈ ಸಂದರ್ಭದಲ್ಲಿ ಬಿಡಿಎ ಮತ್ತು ಬಿಎಂಆರ್‌ಡಿಎ ಖಾತೆಯಲ್ಲಿ ಒಳಗೊಂಡಿತ್ತು. ಆದರೆ ಇದೀಗ ಕೃಷ್ಣ ಬೈರೇಗೌಡ ಅವರಿಗೆ ನೀಡಲಾಗಿಲ್ಲ. ಹೀಗಾಗಿ ಇದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ತನಗೂ ಈ ಎರಡೂ ಪ್ರಾಧಿಕಾರಗಳ ಜವಾಬ್ದಾರಿಯನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.




