Mysore
23
overcast clouds

Social Media

ಗುರುವಾರ, 04 ಜೂನ್ 2026
Light
Dark

ಹನೂರು| ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಮತ್ತೊಂದು ಚಿರತೆ ಸೆರೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಮಲೆ ಮಹದೇಶ್ವರ ಬೆಟ್ಟ ತಪ್ಪಲಿನ ಇಂಡಿಗನತ್ತ, ನಾಗಮಲೆ ಗ್ರಾಮಗಳಲ್ಲಿ ಹಲವಾರು ದಿನಗಳಿಂದ ರೈತರ ನಿದ್ದೆಗಡಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕಳೆದ ಮೇ.10ರಂದು ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳುವಾಗ ಬೆಂಗಳೂರಿನ ಹರ್ಷಿತ್ ಎಂಬ ಬಾಲಕ ಚಿರತೆ ದಾಳಿಯಿಂದ ಮೃತಪಟ್ಟಿದ್ದನು. ಕಾವೇರಿ ವನ್ಯಜೀವಿಧಾಮದ ಸಿಬ್ಬಂದಿಗಳು ವಿವಿಧ ಮಾದರಿಯ ಮೂರು ಬೋನ್‌ಗಳನ್ನು ಇಟ್ಟು ಕಾರ್ಯಾಚರಣೆ ನಡೆಸುತ್ತಿದ್ದರು. 15 ದಿನಗಳ ನಂತರ ಹೆಣ್ಣು ಚಿರತೆಯೊಂದು ತು‌ಮಕೂರು ಮಾದರಿ ಬೋನಿಗೆ ಸೆರೆಯಾಗಿತ್ತು. ರಕ್ತದ ಮಾದರಿ, ಕ್ಯಾಮರಾ ಟ್ರಾಪ್ ನಲ್ಲಿ ಸೆರೆಸಿಕ್ಕ ಚಿರತೆಯ ದೃಶ್ಯಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ತಜ್ಞರಿಗೆ ರವಾನೆ ಮಾಡಿ ಬಾಲಕನ ಸಾವಿಗೆ ಕಾರಣವಾದ ಚಿರತೆ ಬಗ್ಗೆ ದೃಢಪಡಿಸಿ ಸೆರೆ ಸಿಕ್ಕ ಚಿರತೆಯನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ರವಾನೆ ಮಾಡಲಾಗುವುದು ಎಂದು ಕಾವೇರಿ ವನ್ಯಜೀವಿಧಾಮದ ಡಿಸಿಎಫ್ ಆಗಿದ್ದ ಸುರೇಂದ್ರ ಮಾಹಿತಿ ನೀಡಿದ್ದರು.

ಇನ್ನೊಂದೆಡೆ ನಾಗಮಲೆಯಲ್ಲಿ ಮತ್ತೊಂದು ಚಿರತೆ ಮೇ.24ರ ಬೆಳಗ್ಗೆ ಕಾಣಿಸಿಕೊಂಡಿತ್ತು. ಚಿರತೆ ಸೆರೆಗಾಗಿ ಎರಡು ಬೋನ್‌ಗಳನ್ನು ಇಡಲಾಗಿತ್ತು.

ಆದರೂ ಚಾಲಾಕಿ ಚಿರತೆ ರೈತರು ಸಾಕಿದ್ದ ಸಾಕು ನಾಯಿಗಳು, ಮೇಕೆಗಳನ್ನು ತಿಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿತ್ತು. ಇದೀಗ 25 ದಿನಗಳ ಬಳಿಕ ಮತ್ತೊಂದು ಚಿರತೆ ಸೆರೆಹಿಡಿಯಲಾಗಿದೆ. ಇದರಿಂದ ಮಲೆ ಮಹದೇಶ್ವರ ಬೆಟ್ಟ ತಪ್ಪಲಿನ ರೈತರು ತಕ್ಕಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ.

 

Tags:
error: Content is protected !!