ವಾಷಿಂಗ್ಟನ್ : ಇರಾನ್ ವಿರುದ್ಧದ ಯುದ್ಧವನ್ನು ಡೊನಾಲ್ಡ್ ಟ್ರಂಪ್ ಮುಂದುವರಿಸದಂತೆ ತಡೆಯಲು ರಿಪಬ್ಲಿಕನ್ ನೇತೃತ್ವದ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೀಟಿವ್ಸ್ (ಕೆಳಮನೆ) ನಿರ್ಣಯವೊಂದನ್ನು ಅಂಗೀಕರಿಸಿದೆ.
ಹೌಸ್ ಫಾರಿನ್ ಅಫೇರ್ಸ್ ಕಮಿಟಿಯ ಸದಸ್ಯ, ನ್ಯೂಯಾರ್ಕ್ ಸಂಸದ ಗ್ರೆಗೊರಿ ಮೀಕ್ಸ್ ಅವರು ನಿರ್ಣಯವನ್ನು ಮಂಡಿಸಿದ್ದರು.
ಇರಾನ್ ವಿರುದ್ಧ ಅನುಮತಿ ಇಲ್ಲದೆ ಯುದ್ಧ ನಡೆಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರವನ್ನು ಮಿತಿಗೊಳಿಸುವ ನಿರ್ಣಯವನ್ನು ಅಮೆರಿಕದ ಪ್ರತಿನಿಧಿ ಸಭೆ ಅಂಗೀಕರಿಸಿದೆ. ಬುಧವಾರ ನಡೆದ ಮತದಾನದಲ್ಲಿ 215-208 ಅಂತರದಿಂದ ಈ ನಿರ್ಣಯ ಅಂಗೀಕೃತವಾಯಿತು. ನಾಲ್ವರು ರಿಪಬ್ಲಿಕನ್ ಸದಸ್ಯರು ಡೆಮಾಕ್ರಟಿಕ್ ಪಕ್ಷದೊಂದಿಗೆ ಕೈಜೋಡಿಸಿದ್ದು ಟ್ರಂಪ್‌ಗೆ ತೀವ್ರ ಹಿನ್ನಡೆಯಾಗಿದೆ.
ಏನಿದು ವಿವಾದ?
ಫೆಬ್ರವರಿ 28ರಂದು ಇಸ್ರೇಲ್ ಜೊತೆಗೂಡಿ ಟ್ರಂಪ್ ಇರಾನ್ ಮೇಲೆ ದಾಳಿ ನಡೆಸಿದ್ದರು. ಕಾಂಗ್ರೆಸ್ ಅನುಮೋದನೆ ಪಡೆಯದೆ ನಡೆದ ಈ ದಾಳಿ 100ನೇ ದಿನಕ್ಕೆ ಕಾಲಿಡುತ್ತಿದೆ. ಟ್ರಂಪ್ ಇದನ್ನು “ಸಣ್ಣ ಘರ್ಷಣೆ” ಎಂದು ಬಣ್ಣಿಸಿದ್ದರು. ಆದರೆ ಸಂವಿಧಾನದ ಪ್ರಕಾರ ಯುದ್ಧ ಘೋಷಿಸುವ ಅಧಿಕಾರ ಕಾಂಗ್ರೆಸ್‌ಗೆ ಮಾತ್ರ ಇದೆ.
ಯುದ್ಧ ಅಧಿಕಾರ ಕಾಯ್ದೆ 1973:
ಈ ಕಾಯ್ದೆಯ ಪ್ರಕಾರ ಅಧ್ಯಕ್ಷರು ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ 48 ಗಂಟೆಯೊಳಗೆ ಕಾಂಗ್ರೆಸ್‌ಗೆ ಮಾಹಿತಿ ನೀಡಬೇಕು. 60 ದಿನಗಳವರೆಗೆ ಮಾತ್ರ ಕಾಂಗ್ರೆಸ್ ಅನುಮತಿ ಇಲ್ಲದೆ ಯುದ್ಧ ಮುಂದುವರಿಸಬಹುದು. ನಂತರ 30 ದಿನ ವಿಸ್ತರಣೆ ಅಥವಾ ಕಾಂಗ್ರೆಸ್ ಅನುಮೋದನೆ ಕಡ್ಡಾಯ.
ಮುಂದೇನು?
ಈ ನಿರ್ಣಯ ರಿಪಬ್ಲಿಕನ್ ಬಹುಮತದ ಸೆನೆಟ್‌ನಲ್ಲೂ ಅಂಗೀಕಾರವಾಗಬೇಕು. ಬಳಿಕ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆದರೆ ಮಾತ್ರ ಟ್ರಂಪ್ ಅವರ ನಿರೀಕ್ಷಿತ ವೀಟೋವನ್ನು ರದ್ದುಪಡಿಸಲು ಸಾಧ್ಯ.
ಈ ವರ್ಷ ಸೆನೆಟ್‌ನಲ್ಲಿ ಇದೇ ರೀತಿಯ 7 ಪ್ರಯತ್ನಗಳನ್ನು ರಿಪಬ್ಲಿಕನ್ನರು ತಡೆದಿದ್ದರು. ಪ್ರತಿನಿಧಿ ಸಭೆಯಲ್ಲೂ 3 ಬಾರಿ ಯುದ್ಧ ಅಧಿಕಾರ ನಿರ್ಣಯಗಳು ಸೋತಿದ್ದವು. ಆದರೆ ಈ ಬಾರಿ ಮೊದಲ ಬಾರಿಗೆ ನಿರ್ಣಯ ಯಶಸ್ವಿಯಾಗಿದೆ.
ಫೆಬ್ರವರಿಯಲ್ಲಿ ಆರಂಭವಾದ ಅಮೆರಿಕ-ಇಸ್ರೇಲ್ ಇರಾನ್ ಯುದ್ಧ ಜಾಗತಿಕ ಇಂಧನ ಮಾರುಕಟ್ಟೆ ಹಾಗೂ ಅಮೆರಿಕದಲ್ಲಿ ಜೀವನ ವೆಚ್ಚದ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ ಟ್ರಂಪ್ ಮೇಲೆ ಒತ್ತಡ ಹೆಚ್ಚುತ್ತಿದೆ.




