Mysore
23
overcast clouds

Social Media

ಮಂಗಳವಾರ, 26 ಮೇ 2026
Light
Dark

ಮಾಡೆಲ್‌ ಟ್ವಿಶಾ ಶರ್ಮಾ ಸಾವಿನ ಕೇಸ್‌ ತನಿಖೆ ಸಿಬಿಐ ಹೆಗಲಿಗೆ

ನವದೆಹಲಿ : ಮಾಡೆಲ್ ತ್ವಿಶಾ ಶರ್ಮಾ ಸಾವು ಪ್ರಕರಣ ಇದೀಗ ಸುಪ್ರೀಂಕೋರ್ಟ್​ ತಲುಪಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಈ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಳ್ಳಲಿದ್ದು, ಇಂದೇ ಅದಕ್ಕೆ ಬೇಕಾದ ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಖಚಿತಪಡಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಪಾಂಚೋಲಿ ಅವರಿದ್ದ ಪೀಠವು ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ಸಂತ್ರಸ್ತೆಯ ಪತಿ ಸಮರ್ಥ್ ಸಿಂಗ್ ವಕೀಲರಾಗಿದ್ದು, ಆಕೆಯ ಅತ್ತೆ ಗಿರಿಬಾಲಾ ಸಿಂಗ್ ಮಾಜಿ ಜಿಲ್ಲಾ ನ್ಯಾಯಾಧೀಶರಾಗಿದ್ದಾರೆ. ಆರೋಪಿಗಳು ಕಾನೂನು ಹಿನ್ನೆಲೆಯುಳ್ಳ ಪ್ರಭಾವಿಗಳಾಗಿರುವುದರಿಂದ ಸ್ಥಳೀಯ ಮಟ್ಟದಲ್ಲಿ ತನಿಖೆಯ ಪಕ್ಷಪಾತ ನಡೆಯುವ ಸಾಧ್ಯತೆ ಇದೆ ಎಂಬ ನಿರೂಪಣೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಮಹತ್ವದ ಕ್ರಮ ಕೈಗೊಂಡಿದೆ.

ಸಂತ್ರಸ್ತ ಕುಟುಂಬ ಅಥವಾ ಆರೋಪಿಗಳ ವೈಯಕ್ತಿಕ ಹೇಳಿಕೆಗಳು, ಊಹಾಪೋಹಗಳನ್ನು ಪ್ರಕಟಿಸದಂತೆ ನಮ್ಮ ಮಾಧ್ಯಮ ಸ್ನೇಹಿತರನ್ನು ವಿನಂತಿಸುತ್ತೇವೆ ಎಂದು ಸಿಜೆಐ ಸೂರ್ಯ ಕಾಂತ್ ಹೇಳಿದರು.

ವಿಚಾರಣೆ ವೇಳೆ ಎಸ್‌ಜಿ ತುಷಾರ್ ಮೆಹ್ತಾ ವಾದ ಮಂಡಿಸಿ, ಸಂಭಾವ್ಯ ಆರೋಪಿಯಾದ ತ್ವಿಷಾ ಅವರ ಅತ್ತೆ ಗಿರಿಬಾಲಾ ಸಿಂಗ್, ಒಂದು ಚಾನೆಲ್‌ನಿಂದ ಮತ್ತೊಂದು ಚಾನೆಲ್‌ಗೆ ಜಿಗಿಯುತ್ತಾ ಸಂತ್ರಸ್ತೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.

ನೋಯ್ಡಾ ನಿವಾಸಿಯಾಗಿದ್ದ 33 ವರ್ಷದ ತ್ವಿಶಾ ಶರ್ಮಾ ಮತ್ತು ಭೋಪಾಲ್‌ನ ವಕೀಲ ಸಮರ್ಥ್ ಸಿಂಗ್ ಸುಮಾರು ಐದು ತಿಂಗಳ ಹಿಂದೆ ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾಗಿ ವಿವಾಹವಾಗಿದ್ದರು. ಆದರೆ, ಮೇ 12 ರಂದು ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ಪತಿಯ ನಿವಾಸದಲ್ಲಿ ತ್ವಿಷಾ ಶರ್ಮಾ ಶವವಾಗಿ ಪತ್ತೆಯಾಗಿದ್ದರು. ತ್ವಿಷಾ ಕುಟುಂಬಸ್ಥರು ಅತ್ತೆ-ಮಾವನ ವಿರುದ್ಧ ನಿರಂತರ ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳದ ಗಂಭೀರ ಆರೋಪ ಹೊರಿಸಿದ್ದಾರೆ.

ಸ್ಥಳೀಯ ಪೊಲೀಸರು ಮೂರು ದಿನಗಳ ಕಾಲ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ ಮತ್ತು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ ಎಂದು ಸಂತ್ರಸ್ತರ ಪರ ವಕೀಲ ಸಿದ್ಧಾರ್ಥ್ ಲೂತ್ರಾ ವಾದಿಸಿದರು. ಸಾವಿನ ನಿಜವಾದ ಕಾರಣ ತಿಳಿಯಲು ಎರಡನೇ ಮರಣೋತ್ತರ ಪರೀಕ್ಷೆಗೆ ಕುಟುಂಬಸ್ಥರು ಒತ್ತಾಯಿಸಿದ್ದರು. ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನದ ಮೇರೆಗೆ ಭೋಪಾಲ್‌ನ ಏಮ್ಸ್ ವೈದ್ಯರ ತಂಡವು ನಿನ್ನೆ ಮೃತದೇಹದ ಎರಡನೇ ಶವಪರೀಕ್ಷೆ ನಡೆಸಿದೆ.

ಪ್ರಸ್ತುತ, ಪತಿ ಸಮರ್ಥ್ ಸಿಂಗ್ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಿದ್ದು, ಆತನನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅತ್ತೆ ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್‌ಗೆ ನೀಡಲಾದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸುವಂತೆ ಮಧ್ಯಪ್ರದೇಶ ಪೊಲೀಸರು ಹೈಕೋರ್ಟ್ ಅನ್ನು ಸಂಪರ್ಕಿಸಿದ್ದಾರೆ. ದೇಶದ ಪ್ರಮುಖ ಸಂಸ್ಥೆಯಾದ ಸಿಬಿಐ ತನಿಖೆಯನ್ನು ನಂಬುವಂತೆ ಮತ್ತು ಊಹಾಪೋಹಗಳಿಂದ ದೂರವಿರುವಂತೆ ಸುಪ್ರೀಂ ಕೋರ್ಟ್ ಸಾರ್ವಜನಿಕರಲ್ಲಿ ವಿನಂತಿಸಿದೆ.

Tags:
error: Content is protected !!