ವಸುಧೇಂದ್ರ
ಹುಡುಗನೊಬ್ಬನಿಗೆ ಮತ್ತೊಬ್ಬ ಹುಡುಗನ ಮೇಲೆ ಅದು ಹೇಗೆ ಆಕರ್ಷಣೆ ಮೂಡುತ್ತದೆ? ಅದು ಅವನ ಆಯ್ಕೆಯೆ? ಕಲಿತ ದುಶ್ಚಟವೆ? ವಿಷಮ ಪರಿಸ್ಥಿತಿಯಿಂದಾದ ಅಸಹಜ ದೇಹಸ್ಥಿತಿಯೆ? ಹಾರ್ಮೋನ್ ಸಮಸ್ಯೆಯೆ? ಮಾನಸಿಕ ಕಾಯಿಲೆಯೆ? ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ? ಹೀಗಾಗದಂತೆ ತಂದೆ-ತಾಯಿ ಯಾವ ಜಾಗ್ರತೆ ವಹಿಸಬೇಕು? ಇಂತಹ ಹಲವು ಅನುಮಾನಗಳು ಸಮಾಜದಲ್ಲಿ ಇವೆ. ನನ್ನ ಪುಸ್ತಕ ‘ಮೋಹನಸ್ವಾಮಿ’ ಪ್ರಕಟವಾದಾಗ ನನ್ನ ಬುದ್ಧಿಜೀವಿ ಗೆಳೆಯರೂ ಇಂತ ಹದೇ ಪ್ರಶ್ನೆಗಳನ್ನು ಬೇರೆ ಬೇರೆ ರೂಪದಲ್ಲಿ ಕೇಳಿದರು ಎಂದ ಮೇಲೆ ಜನ ಸಾಮಾನ್ಯರಲ್ಲಿ ಈ ಅನುಮಾನಗಳು ಇರಲೇಬೇಕು. ನನ್ನ ಸಾಹಿತಿ ಗೆಳೆಯರ ಜೊತೆಗೆ ನಡೆದ ಮಾತುಕತೆಗಳ ಒಂದೆರಡು ಉದಾಹರಣೆ ಕೊಡುವೆ.
ಹಿರಿಯ ಕತೆಗಾರರೊಬ್ಬರು “ನಾನು ಚಿಕ್ಕಂದಿನಲ್ಲಿ ಆ ಕೆಟ್ಟ ದಾರಿ ಹಿಡಿದುಬಿಟ್ಟಿದ್ದೆ ಕಣ್ರೀ? ನಮ್ಮಮ್ಮ ತಿಕದ ಮೇಲೆ ನಾಲ್ಕು ಏಟು ಬಿಟ್ಟು ಆ ದಾರಿಯಿಂದ ಬಿಡಿಸಿದಳು” ಎಂದು ಹೇಳಿದರು.
ಒಬ್ಬ ಪ್ರಗತಿಪರ ಲೇಖಕಿ ತನ್ನ ಮಗನ ಬಗೆ ಮಾತಾಡುತ್ತಾ “ಅವನಿಗೆ ಸ್ವಲ್ಪ ಬುದ್ಧಿ ಹೇಳ್ರಿ? ನೀವು ಎಷ್ಟು ಕಷ್ಟಪಟ್ಟಿರಿ ಅಂತ ತಿಳಿಸಿಕೊಡ್ರಿ? ತಾಯಿ ಸಂಕಟ ಅವನಿಗೆ ಅರ್ಥ ಆಗಲಿ” ಎಂದು ಮಗನ ಕುರಿತು ಬೇಡಿಕೊಂಡರು.
ಮತ್ತೊಬ್ಬರು “ಮಗನಲ್ಲಿ ಈ ಮಾನಸಿಕ ಸಮಸ್ಯೆ ಕಾಣಿಸ್ತಾ ಇದೆ. ಯಾವ ಒಳ್ಳೆಯ ಮನೋವೈದ್ಯರ ಬಳಿ ಕರೆದುಕೊಂಡು ಹೋಗಲಿ? ” ಎಂದು ಸಲಹೆ ಕೇಳಿದರು. ಇಂತಹ ಬಾಲಿಶ ಅನುಮಾನಕ್ಕೆ ಕಾರಣ ಕನ್ನಡದಲ್ಲಿ ಈ ವಿಷಯಗಳ ಬಗ್ಗೆ ಕೈಗೆಟುಕುವಂತೆ ಮಾಹಿತಿಗಳಿಲ್ಲದಿರುವುದು ಮತ್ತು ಸಮಾಜದಲ್ಲಿ ಈ ವಿಷಯವಾಗಿ ಯಾರೂ ಮಾತನಾಡದಿರುವುದೇ ಆಗಿದೆ. ಇಂತಹ ಅನುಮಾನಗಳ ಕುರಿತು ಒಂದಿಷ್ಟು ಮಾಹಿತಿಯನ್ನು ನೀಡುವುದು ಈ ಲೇಖನದ ಉದ್ದೇಶವಾಗಿದೆ.
ಮೊದಲಿಗೆ ನಾವು ತಿಳಿದುಕೊಳ್ಳಬೇಕಾದ ಮುಖ್ಯ ಸಂಗತಿಯೆಂದರೆ ‘ಗೇ’ ಎನ್ನುವುದು ಚಟವೂ ಅಲ್ಲ, ಆಯ್ಕೆಯೂ ಅಲ್ಲ, ವ್ಯಸನವೂ ಅಲ್ಲ, ಮಾನಸಿಕ ಸಮಸ್ಯೆಯೂ ಅಲ್ಲ, ರೋಗವಂತೂ ಮೊದಲೇ ಅಲ್ಲ ಎನ್ನುವುದಾಗಿದೆ. ಇದು ಅತ್ಯಂತ ಸಹಜವಾಗಿ ಕೆಲವು ಹುಡುಗರಲ್ಲಿ ಮೂಡುವ ವಿಭಿನ ಲೈಂಗಿಕ ಆಸಕ್ತಿಯಾಗಿದೆ. ಇದಕ್ಕೆ ಕಾರಣವೇನು ಎಂಬುದು ಯಾರಿಗೂ ಗೊತ್ತಿಲ್ಲ. ಮಗುವೊಂದು ಐದು ವರ್ಷವಾಗುವುದರಲ್ಲಿ ಅದರ ಲೈಂಗಿಕತೆ ನಿರ್ಧಾರ ವಾಗಿರುತ್ತದೆ ಎಂದು ವೈದ್ಯಲೋಕ ಹೇಳುತ್ತದೆ. ಇತ್ತೀಚೆಗೆ ಭಾರತದ ಮನೋವೈದ್ಯರು ಮತ್ತು ಮನಃಶಾಸ್ತ್ರಜ್ಞರ ಸಂಘ ಈ ವಿಷಯ ಕುರಿತಂತೆ ಸ್ಪಷ್ಟವಾಗಿ ಸುತ್ತೋಲೆ ಹೊರಡಿಸಿದ್ದಾರೆ. ಯಾರೂ ಈ ಸಲಿಂಗ ಆಕರ್ಷಣೆ ಯನ್ನು ಮಾನಸಿಕ ರೋಗವೆಂದು ಪರಿಗಣಿಸುವಂತಿಲ್ಲವೆಂದೂ, ಆ ಆಕರ್ಷಣೆ ಯನ್ನು ಬದಲಾಯಿಸುತ್ತೇನೆಂದು ಪ್ರಯತ್ನಿಸುವುದು ತಪ್ಪೆಂದು ತಿಳಿಸಿದೆ.
ಕೆಲವು ಮಕ್ಕಳು ಹುಟ್ಟಿದಾಗಿನಿಂದ ಎಡಗೈಯನ್ನೇ ಪ್ರಧಾನವಾಗಿಯೇ ಬಳಸುವುದಕ್ಕೆ ಪ್ರಾರಂಭಿಸುತ್ತಾರಲ್ಲಾ, ಅದಕ್ಕೆ ಈ ವಿಭಿನ್ನ ಲೈಂಗಿಕ ಸಂಗತಿಯನ್ನು ಹೋಲಿಸಿಕೊಳ್ಳಿ ಎಂದು ವೈದ್ಯಲೋಕ ತಿಳಿಸುತ್ತದೆ. ಇಡೀ ಸಮಾಜ ಬಲಗೈಯನ್ನೇ ಪ್ರಧಾನವಾಗಿ ಬಳಸುತ್ತದೆ ಮತ್ತು ಆ ಕಾರಣದಿಂದಲೇ ‘ಬಲ’ ಸಂಗತಿಗಳೆಲ್ಲಾ ಶುಭವೆಂದೂ ನಂಬುತ್ತದೆ. ಎಡವೆಂದರೆ ಎಲ್ಲವೂ ಅಶುಭ (ಎಡವಟ್ಟು! ). ಆದರೆ ಅಪರೂಪಕ್ಕೆ ಯಾರೋ ಎಡಗೈ ಪ್ರಧಾನವಾಗಿ ಬಳಸುವುದನ್ನು ಕಂಡಾಗ ಅವರಿಗೆ ಕಸಿವಿಸಿಯಾಗಲು ತೊಡಗುತ್ತದೆ. ತಮ್ಮ ಗುಂಪಿಗೆ ಸೇರಿದ ಪ್ರಾಣಿ ಇದಲ್ಲವೇನೋ ಎಂಬಂತೆ ಒದ್ದಾಡುತ್ತಾರೆ. ಕೆಲವು ತಂದೆ-ತಾಯಿಗಳು ಮಕ್ಕಳನ್ನು ಎಡಗೈ ಬಳಸದಂತೆ ತಡೆಯಲು ಅಮಾನವೀಯ ಒತ್ತಡಗಳನ್ನು ಹೇರುತ್ತಾರೆ. ಆದರೆ ದೈಹಿಕವಾಗಿಯಾಗಲಿ ಅಥವಾ ಮಾನಸಿಕವಾಗಿಯಾಗಲಿ ಆ ಮಗುವಿನಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಅದರ ದೇಹ ರಚನೆಯೇ ಎಡಗೈ ಪ್ರಮುಖವಾಗಿ ಬಳಸು ವಂತೆ ಮಾಡಿರುತ್ತದೆ. ಇಡೀ ಸಮಾಜ ಬಲಗೈಯನ್ನು ಯಾವುದಕ್ಕೆ ಬಳಸುತ್ತದೋ ಅದಕ್ಕೆ ಎಡಗೈಯನ್ನೂ, ಎಡಗೈ ಬಳಸುವುದಕ್ಕೆ ಬಲಗೈ ಬಳಸುವುದನ್ನು ಮಗು ಸಹಜವಾಗಿ ಮಾಡುತ್ತದೆ. ಅಷ್ಟೇ!
ಇದೇ ರೀತಿಯಲ್ಲಿ ಕೆಲವು ಹುಡುಗರಲ್ಲಿ ಲೈಂಗಿಕ ಆಕರ್ಷಣೆ ಮತ್ತೊಬ್ಬ ಹುಡುಗನ ಮೇಲೆ ಆಗುತ್ತದೆ. ಇದು ಯಾವಾಗ ಪ್ರಾರಂಭವಾಗುತ್ತದೆ ಎಂದು ಅವನಿಗೂ ತಿಳಿಯದಂತೆ ಆ ಭಾವಗಳು ಅವನಲ್ಲಿ ಅರಳುತ್ತವೆ. ಯಾವುದೋ ಒಂದು ದಿನ ಅವನು ಆ ಸ್ವಭಾವವನ್ನು ತನ್ನ ಆಯ್ಕೆಯಾಗಿ ಸ್ವೀಕರಿಸಿರುವುದಿಲ್ಲ. ಇದಕ್ಕೆ ಉದಾಹರಣೆಯಾಗಿ ನಿಮ್ಮದೇ ಬದುಕನ್ನು ತೆಗೆದುಕೊಳ್ಳಿ. ನೀವು ಗಂಡಾಗಿದ್ದರೆ ಎಂದಿನಿಂದ ನೀವು ಹೆಣ್ಣನ್ನು ಮಾತ್ರ ಇಷ್ಟ ಪಡಬೇಕು ಎಂದು ನಿರ್ಧರಿಸಿದಿರಿ? ಹೆಣ್ಣಾಗಿದ್ದರೆ ಎಂದಿನಿಂದ ಗಂಡಿನ ಕಡೆ ಮಾತ್ರ ಮನಸ್ಸು ಮಾಡಬೇಕು ಎಂದು ನಿರ್ಧರಿಸಿದಿರಿ? ಎರಡಕ್ಕೂ ಉತ್ತರವಿಲ್ಲವಲ್ಲವೆ? ಏಕೆಂದರೆ ಅದು ನಿಮ್ಮ ಆಯ್ಕೆ ಅಲ್ಲ, ನಿಮ್ಮ ಗುಣ, ನಿಮ್ಮ ಸ್ವಭಾವ. ಹಾಗೆಯೇ ಗೇ ಹುಡುಗನಿಗೆ ಮತ್ತೊಬ್ಬ ಹುಡುಗ ಇಷ್ಟವಾಗುವುದು ಅವನ ಗುಣವೇ ಹೊರತು, ಆಯ್ಕೆಯಲ್ಲ ಎನ್ನುವುದನ್ನು ನೀವು ಮುಖ್ಯವಾಗಿ ತಿಳಿದುಕೊಳ್ಳಬೇಕು.
ಬಹುತೇಕರು ಇದೊಂದು ಮಾದಕ ವ್ಯಸನದಂತೆ ದುಶ್ಚಟವೆಂದು ತಿಳಿದುಕೊಂಡಿದ್ದಾರೆ. ಯಾರೋ ಕೆಟ್ಟ ಹುಡುಗರ ಜೊತೆಗೆ ಸೇರಿಕೊಂಡು ನಮ್ಮ ಹುಡುಗ ಹಾಳಾದ ಎಂದೋ, ಇಲ್ಲವೇ ಮೊಬೈಲ್‌ನಲ್ಲಿ ಕೆಟ್ಟ ಆಪ್ ಗಳನ್ನು ಹಾಕಿಕೊಂಡಿದ್ದರಿಂದ ಹಾಗಾದ ಎಂತಲೋ, ಗಂಡಸರ ಹಾಸ್ಟೆಲ್‌ನಲ್ಲಿ ಇದ್ದ ಕಾರಣದಿಂದ ಅಂತಹ ಚಟ ಬೆಳೆಯಿತೆಂದೋ ಅಪ್ಪ-ಅಮ್ಮ ಹೇಳುವುದನ್ನು ಕೇಳುತ್ತೇವೆ. ಈ ಮಾತಿಗೆ ಯಾವುದೇ ತರ್ಕವಿಲ್ಲ. ಲೈಂಗಿಕ ಆಕರ್ಷಣೆಯೆನ್ನುವುದನ್ನು ಯಾರು ಯಾರಿಗೂ ಕಲಿಸಿಕೊಡು ವುದಿಲ್ಲ. ನೀವು ದುಷ್ಟ ಹುಡುಗರ ಸಹವಾಸ ಮಾಡಿದ್ದಕ್ಕೇ ಹೆಣ್ಣಿಗೆ ಆಕರ್ಷಿತರಾಗುವುದನ್ನು ಕಲಿತಿರಾ? ಒಂದು ವೇಳೆ ಯಾವ ಗೆಳೆಯರ ಸಹವಾಸವಿಲ್ಲದಿದ್ದರೂ ನಿಮ್ಮಲ್ಲಿ ಸಹಜವಾಗಿ ಹೆಣ್ಣಿನ ಕಡೆ ಒಲವು ಬೆಳೆಯುತ್ತಿತ್ತಲ್ಲವೆ? ಇದೂ ಅಷ್ಟೇ. ಹೂವಿನ ಗಂಧವನ್ನು ಬಾಹ್ಯವಾಗಿ ಸೇರಿಸುವುದು ಸಾಧ್ಯವಿಲ್ಲ. ಹಾಗೆಯೇ ಒಂದು ಹೂವಿನ ಗಂಧವನ್ನು ಮತ್ತೊಂದಾಗಿ ಪರಿವರ್ತಿಸಲೂ ಸಾಧ್ಯವಿಲ್ಲ. ಅದು ಸೃಷ್ಟಿಯ ನಿಯಮ. ಆದರೆ ಯಾವುದೇ ಸಮಾಜವು ಸದ್ಯದ ರೂಢಿಗೆ ಹೊಂದದ ಸಂಗತಿಗಳಿಗೆ ಭಯಪಡುತ್ತದೆ. ಮೂಲತಃ ಸಂಘಜೀವಿಯಾದ ಮನುಷ್ಯನಿಗೆ ತನ್ನ ವಿಭಿನ್ನತೆಯೊಂದು ತನ್ನನ್ನು ಸಂಘದಿಂದ ಬೇರ್ಪಡಿಸುವ ಸಂಗತಿಯಾಗಿ ಕಂಡಾಗ ಹೆದರಿಕೆಯಾಗುತ್ತದೆ. ಇಂತಹ ವಿಷಯದ ಕುರಿತು ಆರೋಗ್ಯಕರ ಮಾಹಿತಿ ಸಿಗುವುದೂ ಕಷ್ಟ. ಮಡಿವಂತ ಸಮಾಜದಲ್ಲಿ ಯಾರೂ ಈ ಕುರಿತು ಮಾತಾಡುವುದಿಲ್ಲ; ಇನ್ನು ಕನ್ನಡದ ಪತ್ರಿಕೆ ಮತ್ತು ಡಿಜಿಟಲ್ ಮಾಧ್ಯಮಗಳು ಭಯ ಹುಟ್ಟಿಸುವಂತೆ ಸುದ್ದಿಗಳನ್ನು ಪ್ರಕಟಿಸುತ್ತವೆ. ಸಹಜವಾಗಿಯೇ ಅವರಲ್ಲಿ ಅಗೋಚರ ತಲ್ಲಣ ಮೂಡುತ್ತದೆ. ಸಂತೋಷದ ಸಂಗತಿಯೆಂದರೆ ಇಂತಹ ಭಯ-ತಲ್ಲಣಕ್ಕೆ ಯಾವುದೇ ಕಾರಣವಿಲ್ಲ, ತಳಹದಿಯೂ ಇಲ್ಲ. ಗೇ ಹುಡುಗರು ಎಲ್ಲರಂತೆ ಸುಖವಾಗಿ ಬದುಕು ಸಾಗಿಸಬಹುದು. ಅವನ ಪಾಡಿಗೆ ಅವನಿದ್ದು, ತನಗೆ ಹೊಂದುವ ಗೆಳೆಯರ ಗುಂಪನ್ನು ಸೇರಿಕೊಳ್ಳಬೇಕಷ್ಟೇ.
ಸರಿಯಾದ ಮನೋವೈದ್ಯರಿಂದ ಆಪ್ತಸಮಾಲೋಚನೆ ಮತ್ತು ವೈದ್ಯಕೀಯ ಸಲಹೆ ತೆಗೆದುಕೊಂಡರೆ ಹುಡುಗ ಬದಲಾಗುತ್ತಾನೆ ಎಂದು ಕೆಲವರು ನಂಬುತ್ತಾರೆ. ಹುಡುಗನಿಗೆ ಸಮಸ್ಯೆಯೇ ಇಲ್ಲವೆಂದ ಮೇಲೆ ಏನನ್ನು ಬದಲಿಸಲು ನೀವು ಪ್ರಯತ್ನಿಸುತ್ತೀರಿ? ಸಮಸ್ಯೆ ಇರುವುದು ಅವನ ಬದುಕಿನ ಕ್ರಮವನ್ನು ಒಪ್ಪದ ನಿಮ್ಮ ಹಠಮಾರಿ ಮನಸ್ಸಿನಲ್ಲೇ ಹೊರತು ಅವನಲ್ಲಲ್ಲ. ಯಾರಾದರೂ ವೈದ್ಯರು ಅಥವಾ ಆಪ್ತಸಮಾಲೋಚಕರು ತಾವು ‘ಗೇ’ ಹುಡುಗನನ್ನು ಬದಲಾಯಿಸಿ ‘ಸ್ಟ್ರೇಟ್’ ಮಾಡಬಲ್ಲೆವು ಎಂದು ಹೇಳಿರುವ ದಾಖಲೆಗಳು ನಿಮ್ಮಲ್ಲಿ ಇದ್ದರೆ, ಅವರ ಮೇಲೆ ಖಂಡಿತಾ ಊಐ ದಾಖಲಿಸಬಹುದು. ಇದು ಅಪರಾಧವೇ ಆಗಿದೆ.
ಹೆಂಗಸರ ಸಂಪರ್ಕ ಹೆಚ್ಚಾಗಿ ಸಿಗದಿದ್ದರಿಂದ ಹುಡುಗರು ಹೀಗಾಗುತ್ತಾರೆ ಎಂಬ ನಂಬಿಕೆ ಇನ್ನೂ ಹಲವರಿಗಿದೆ. ನಮ್ಮ ಹಿಂದಿನ ತಲೆಮಾರಿನ ಹಿರಿಯ ಲೇಖಕರೆಲ್ಲರೂ ಇದೇ ಭಾವವನ್ನು ತಮ್ಮ ಕತೆ-ಕಾದಂಬರಿಗಳಲ್ಲಿ ಹರಿಬಿಟ್ಟಿದ್ದಾರೆ. ಆದರೆ ಇದು ಅಪ್ಪಟ ಸುಳ್ಳೆಂದು ವೈದ್ಯರು ತಿಳಿಸುತ್ತಾರೆ. ಇಂತಹ ಪರಿಸರದಲ್ಲಿ ನಿಮಗೆ ದೈಹಿಕ ಬಯಕೆಯನ್ನು ಗಂಡಸು ತೃಪ್ತಿಪಡಿಸಬಲ್ಲ ಎಂದರೆ, ಆ ಪರಿಸರದಿಂದ ಹೊರಬಂದ ನಂತರವೂ ನೀವು ಅದನ್ನು ಬಯಸುತ್ತೀರಿ ಎಂದೇ ಅರ್ಥ. ಇಲ್ಲವಾದರೆ ಅಲ್ಲಿ, ಇಲ್ಲಿ, ಎಲ್ಲಿಯೂ ಬೇಡವಾಗುತ್ತದೆ. ಇಡೀ ಜಗತ್ತಿನಲ್ಲಿ ಎಲ್ಲಾ ದೇಶ-ಕಾಲಗಳಲ್ಲೂ ಕ್ವೀರ್ ಜನರು ಇದ್ದೇ ಇದ್ದಾರೆ. ಹೆಣ್ಣು-ಹೆಣ್ಣನ್ನು ಬಯಸುವವರು, ಗಂಡು-ಗಂಡಿಗೆ ಮರಳಾಗುವವರು, ಗಂಡು-ಹೆಣ್ಣು ಎರಡನ್ನೂ ಬೇರೆ ಬೇರೆ ಪ್ರಮಾಣದಲ್ಲಿ ಬಯಸುವವರು – ಇನ್ನೂ ನಮಗೆ ಗೊತ್ತೇ ಇರದ ನೂರಾರು ರೀತಿಯಲ್ಲಿ ಲೈಂಗಿಕತೆ ಜಗತ್ತಿನಲ್ಲಿರುತ್ತದೆ. ಆ ಕಾರಣದಿಂದಲೇ ‘+’ ಎನ್ನುವ ಚಿಹ್ನೆಯನ್ನು ನಿರಂತರ ಲೈಂಗಿಕತೆಯ ಹೊಸತನದ ಪ್ರತೀಕವಾಗಿ ನಂತರ ಸೇರಿಸುವುದು.
‘ಗೇ’ ಸಮುದಾಯ ಚಿಕ್ಕದ್ದು. ಜನಸಂಖ್ಯೆಯ ನೂರಕ್ಕೆ ಹತ್ತು ಅನುಪಾತದಲ್ಲಿ ಅವರು ಇರುತ್ತಾರೆ ಎಂದು ಕೆಲವು ದೇಶಗಳಲ್ಲಿ ಸಮೀಕ್ಷೆ ಮಾಡಿದ್ದಾರೆ. (ಒಟ್ಟು ಕ್ವೀರ್ ಜನರು ೨೦ ಪ್ರತಿಶತ) ಸಮಾಜವು ಈ ಅಲ್ಪಸಂಖ್ಯಾತರ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲದ್ದರಿಂದ ಇವರು ತಮಗೆ ತೋರಿದಂತೆ ಬದುಕುತ್ತಾರೆ. ಇವರು ಸಮಾಜ, ಧರ್ಮದ ಕಟ್ಟಳೆಗಳಿಗೆ ಒಳಗಾಗದ್ದರಿಂದ ಇವರಲ್ಲಿ ಪಾಲಿಗಮಿ (ಬಹುಜನರ ಸಂಪರ್ಕ) ಹೆಚ್ಚು. ಕೂಡುವಿಕೆಯಲ್ಲಿ ಸುರಕ್ಷತೆಯ ವಿಧಾನವನ್ನು ಬಳಸದಿದ್ದರೆ ಕಾಯಿಲೆಗಳು ಹರಡುವ ಸಾಧ್ಯತೆಗಳು ಹೆಚ್ಚು. ಅದರಲ್ಲೂ HIV ಪ್ರಮಾಣ ಇವರಲ್ಲಿ ಅಧಿಕ. ಹಾಗಂತ ಈ ಜನರಲ್ಲಿ ಮಾತ್ರ HIV ರೋಗಾಣು ಇದೆ, ಉಳಿದವರಲ್ಲಿ ಇಲ್ಲ ಎಂಬ ಅವಸರದ ತೀರ್ಮಾನ ಬೇಡ. ಸುರಕ್ಷಿತತೆ ಇಲ್ಲದೆ ಕೂಡುವ ಕ್ರಮವು ಯಾರಲ್ಲೇ ಆದರೂ HIV ರೋಗಾಣು ಹಬ್ಬಬಹುದಾಗಿದೆ. ಆದರೆ ಆಧುನಿಕ ವೈದ್ಯಕೀಯದಲ್ಲಿ ಸಾಕಷ್ಟು ಒಳ್ಳೆಯ ಮಾತ್ರೆಗಳು ಲಭ್ಯವಿವೆ. ಆದ್ದರಿಂದ HIV ಅಂತಹ ದೊಡ್ಡ ಕಾಯಿಲೆ ಅಲ್ಲ ಎಂದು ಹೇಳುತ್ತಾರೆ. ತಪ್ಪದೆ ಮಾತ್ರೆ ತೆಗೆದುಕೊಂಡರೆ ರೋಗಾಣುವನ್ನು ನಿಯಂತ್ರಣದಲ್ಲಿ ಇಡಬಹುದು. ಜೊತೆಗೆ ಯಾವ ಪಥ್ಯದ ಅವಶ್ಯವೂ ಇಲ್ಲ, ಅದು ನಿಮ್ಮ ಆಯುಷ್ಯ ಕುಂಠಿತಗೊಳಿಸುವುದೂ ಇಲ್ಲ. ಶಾಲೆಗಳಲ್ಲಿ ಮಕ್ಕಳಿಗೆ ಸುರಕ್ಷಿತ ಲೈಂಗಿಕ ಕ್ರಿಯೆಯ ಬಗ್ಗೆ ನಾವು ಹೇಳಿಕೊಡುವ ಆವಶ್ಯಕತೆ ಸಾಕಷ್ಟಿದೆ.
ಹಾಗಿದ್ದರೆ ಮೇಲೆ ತಿಳಿಸಿದ ನಮ್ಮ ಹಿರಿಯ ಕತೆಗಾರರ ಸಮಸ್ಯೆ ಏನಾಗಿರಬಹುದು ಎಂದು ಯೋಚಿಸಿ. ಸಾಮಾನ್ಯವಾಗಿ ಸಮಾಜಕ್ಕೆ ಅಂಜಿ ನಮ್ಮ ಎಷ್ಟೋ ಆಸೆಗಳನ್ನು ಹತ್ತಿಕ್ಕಿ ಅದಕ್ಕೆ ವಿರುದ್ಧವಾಗಿ ನಾವು ಬದುಕಿರುತ್ತೇವೆ. ಅದೇ ರೀತಿ ಅವರೂ ತಮ್ಮ ಸಲಿಂಗ ಬಯಕೆಯನ್ನು ಭಯದಿಂದ ಹತ್ತಿಕ್ಕಿ ಬದುಕಿರುವ ಸಾಧ್ಯತೆ ಇದೆ. ಅದಕ್ಕೆ ಅವರಮ್ಮ ಕೊಟ್ಟ ಶಿಕ್ಷೆಯೇ ಕಾರಣವೆಂಬ ಭ್ರಮೆಯಲ್ಲಿ ಅವರು ಇರಬಹುದು. ಅದೃಷ್ಟವಶಾತ್ ಅವರಿಗೆ ಹೆಣ್ಣಿನಲ್ಲೂ ಸಮನಾದ ದೈಹಿಕ ಆಸಕ್ತಿ ಇದ್ದುದರಿಂದ ಹೇಗೋ ಮದುವೆಯಾಗಿ ಬದುಕು ಜಯಿಸಿಬಿಟ್ಟರು. ಇಲ್ಲವಾಗಿದ್ದರೆ ಅವರ ಬದುಕು ನರಕವಾಗಿ ಹೋಗುತ್ತಿತ್ತು. (ಲೇಖಕರು ಕನ್ನಡದ ಹೆಸರಾಂತ ಕಥೆಗಾರರು)
me@vasudhendra.com





