Mysore
28
broken clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಮೇ.6ರಂದು ಯಸಳೂರಿನ ಅರ್ಜುನ ಆನೆ ಸಮಾಧಿ ಸ್ಥಳದ ಸ್ಮಾರಕ ಉದ್ಘಾಟನೆ: ಸಚಿವ ಈಶ್ವರ್‌ ಖಂಡ್ರೆ

ಬೆಂಗಳೂರು: ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಕಳೆದ 2023 ಡಿಸೆಂಬರ್.4ರಂದು ಆನೆ ಸೆರೆ ಕಾರ್ಯಾಚರಣೆ ವೇಳೆ ವೀರಾವೇಶದಿಂದ ಹೋರಾಡಿ, ಪಶುವೈದ್ಯರು, ಸಿಬ್ಬಂದಿ ಜೀವ ಉಳಿಸಿ ಹುತಾತ್ಮನಾದ ಅರ್ಜುನ ಆನೆಯ ಸಮಾಧಿ ಸ್ಥಳದಲ್ಲಿ ನಿರ್ಮಿಸಿರುವ ಸ್ಮಾರಕವನ್ನು ಮೇ.6ರ ಬುಧವಾರ ಉದ್ಘಾಟಿಸಲಾಗುವುದು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ದಸರಾ ಮಹೋತ್ಸವದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತು ಗಜಗಾಂಭೀರ್ಯದಿಂದ ಹೆಜ್ಜೆಹಾಕಿ, ಜನರ ಪ್ರೀತಿಗೆ ಪಾತ್ರನಾಗಿದ್ದ ಅರ್ಜುನ ಆನೆಯ ಸಾವು ಇಲಾಖೆಗೆ ದೊಡ್ಡ ನಷ್ಟವಾಗಿದ್ದು, ಸಮಾಧಿ ಸ್ಥಳದಲ್ಲಿ ಮತ್ತು ನಾಗರಹೊಳೆಯ ಬಳ್ಳೆಯಲ್ಲಿ ಸ್ಮಾರಕ ನಿರ್ಮಿಸುವುದಾಗಿ ಸರ್ಕಾರ ತಿಳಿಸಿತ್ತು. ಅದರಂತೆ ಈಗಾಗಲೇ ಬಳ್ಳೆ ಶಿಬಿರದಲ್ಲಿ ಅರ್ಜುನನ ಹಿರಿಮೆ, ಸಾಹಸಗಾಥೆಗಳನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೂ ತಿಳಿಸುವ ರೀತಿಯಲ್ಲಿ ಸ್ಮಾರಕ ಅನಾವರಣ ಮಾಡಲಾಗಿದೆ. ಮೇ.6ರಂದು ಯಸಳೂರಿನ ಸಮಾಧಿ ಸ್ಥಳದ ಸ್ಮಾರಕ ಉದ್ಘಾಟಿಸಲಾಗುವುದು ಎಂದು ವಿವರಿಸಿದರು.

ಈ ಎರಡೂ ಸ್ಥಳದಲ್ಲಿ ಅರ್ಜುನ ಆನೆಯ ಪ್ರತಿರೂಪದಂತಿರುವ ಪ್ರತಿಮೆಗಳನ್ನು ನಿರ್ಮಿಸಲಾಗಿದ್ದು, ಅರ್ಜುನ ವಿವಿಧ ಆನೆ ಕಾರ್ಯಾಚರಣೆ, ಹುಲಿ ಮತ್ತು ಚಿರತೆ ಕಾರ್ಯಾಚರಣೆಯಲ್ಲಿ ಮತ್ತು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಚಿತ್ರಗಳನ್ನು ಹಾಕುವಂತೆ ಸೂಚಿಸಲಾಗಿದೆ ಎಂದೂ ತಿಳಿಸಿದರು.

ಯಸಳೂರಿನಲ್ಲಿ ಸ್ಮಾರಕ ಸಿದ್ಧವಾಗಿ ಹಲವು ತಿಂಗಳುಗಳೇ ಕಳೆದಿದೆ. ಆದರೆ ಕಾರಣಾಂತರದಿಂದ ಸ್ಮಾರಕ ಉದ್ಘಾಟನೆ ವಿಳಂಬವಾಗಿದ್ದು, ಈಗ ಉದ್ಘಾಟನಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

Tags:
error: Content is protected !!