Mysore
25
scattered clouds

Social Media

ಮಂಗಳವಾರ, 21 ಏಪ್ರಿಲ 2026
Light
Dark

ಕೊಡಗು | ತೆರೆದ ಬಾವಿಗೆ ಬಿದ್ದ ಕಾಡಾನೆ ಮರಿ , ರಕ್ಷಣೆ

ಮಡಿಕೇರಿ : ಕಾಡಾನೆ ಮರಿಯೊಂದು ಬಾವಿಗೆ ಬಿದ್ದು ನರಳಾಡಿದ ಘಟನೆ ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಪೆರಾಜೆ ಸಮೀಪದ ಕಲ್ಚೆರ್ಪೆಯಲ್ಲಿ ನಡೆದಿದ್ದು, ಅರಣ್ಯ ಇಲಾಖೆಯಿಂದ ಯಶಸ್ವಿ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ.

ಭಾನುವಾರ ರಾತ್ರಿ ಕಲ್ಚೆರ್ಪೆಯ ಪ್ರಜ್ವಲ್ ಎಂಬವರಿಗೆ ಸೇರಿದ ಬಾವಿಯೊಳಗೆ ಮರಿಯಾನೆ ಬಿದ್ದಿದೆ. ಆನೆಯ ನರಳಾಟ ಕೇಳಿದ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಭಾನುವಾರ ರಾತ್ರಿಯೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪರಿಶೀಲಿಸಿದರು.

ಭಾನುವಾರ ಬೆಳಗ್ಗೆ 8 ಗಂಟೆಯಿಂದ ಜೆಸಿಬಿ ತಂದು ಒಂದು ಬದಿ ಅಗೆದು ಕಾಡಾನೆ ಮರಿ ತೆರಳಲು ರಸ್ತೆ ನಿರ್ಮಿಸಲಾಯಿತು. ಮಧ್ಯಾಹ್ನ 12.50ರವರೆಗೆ ಈ ಕಾರ್ಯಾಚರಣೆ ಮುಂದುವರೆಯಿತು. ಬಳಿಕ ದಾರಿ ಮೂಲಕ ಕಾಡಾನೆ ಬಾಯಿಂದ ಮೇಲಕ್ಕೆ ಬಂದಿತು. ಈ ವೇಳೆ ಜನ ವಸತಿ ಪ್ರದೇಶದತ್ತ ದೌಡಾಯಿಸಿದ ಆನೆ ಕೆಲಕಾಲ ಆತಂಕ ಸೃಷ್ಟಿಸಿತ್ತು. ಬಳಿಕ ಸುರಕ್ಷಿತವಾಗಿ ತೆರಳಿದೆ. ಆನೆ ಬಾವಿಗೆ ಬಿದ್ದ ಸುದ್ದಿ ತಿಳಿದು ಜನರು ಗುಂಪು ಗುಂಪಾಗಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ವೀಕ್ಷಿಸಿದರು.

ಅರಣ್ಯ ಇಲಾಖೆಯ ಸಿಸಿಎಫ್ ಕರಿಕಾಳನ್, ಡಿಎಫ್‌ಒ ಅಂಥೋನಿ ಎಸ್. ಮರಿಯಪ್ಪ, ಎಸಿಎಫ್‌ಗಳಾದ ಪ್ರಶಾಂತ್ ಪೈ, ಸುಬ್ಬಯ್ಯ ನಾಯ್ಕ್, ರೇಂಜರ್‌ಗಳಾದ ಕಿರಣ್ ಪುತ್ತೂರು, ವಿಮಲ್ ಬಾಬು ಹಾಗೂ ಸಿಬ್ಬಂದಿಗಳು ಇದ್ದರು. ಪೋಲೀಸ್ ಇಲಾಖೆ, ಅಗ್ನಿ ಶಾಮಕ ಇಲಾಖಾ ಸಿಬ್ಬಂದಿಗಳು ಅಗತ್ಯ ಮುನ್ನಚ್ಚರಿಕಾ ಕ್ರಮದ ಮೂಲಕ ಸಹಕಾರ ನೀಡಿದರು.

Tags:
error: Content is protected !!