Mysore
23
broken clouds

Social Media

ಭಾನುವಾರ, 05 ಏಪ್ರಿಲ 2026
Light
Dark

ಇಂದಿನಿಂದ ಕೊಡವ ಕೌಟುಂಬಿಕ ಕ್ರಿಕೆಟ್‌ ಉತ್ಸವ

24ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಗೆ ಬೇತ್ರಿ ಮುಕ್ಕಾಟೀರ ಕುಟುಂಬಸ್ಥರಿಂದ ಸಿದ್ದತೆ; 24 ದಿನಗಳ ಕಾಲ ಕ್ರಿಕೆಟ್ ಹಬ್ಬ

ಪುನೀತ್ ಮಡಿಕೇರಿ

ಮಡಿಕೇರಿ : ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಕೊಡವ ಕುಟುಂಬಗಳ ನಡುವಿನ 24ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವ ಇಂದಿನಿಂದ ಆರಂಭಗೊಳ್ಳಲಿದ್ದು, ಬೇತ್ರಿ ಮುಕ್ಕಾಟಿರ ಕುಟುಂಬಸ್ಥರಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಏ.3 ರಿಂದ ಏ. 25 ಅಥವಾ 26 ರವರೆಗೆ ಪಂದ್ಯಾವಳಿ ನಡೆಯಲಿದೆ. ಫೈನಲ್ ಪಂದ್ಯದ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದ್ದು, ಮೂರ್ನಾಡುವಿನಲ್ಲಿ ಮುಕ್ಕಾಟಿರ ಕ್ರಿಕೆಟ್ ನಮ್ಮೆ ನಡೆಯಲಿದೆ. 2026ರ ಕ್ರಿಕೆಟ್ ಉತ್ಸವದ ಜವಾಬ್ದಾರಿಯನ್ನು ಬೇತ್ರಿ ಮುಕ್ಕಾಟಿರ ಕುಟುಂಬಸ್ಥರು ವಹಿಸಿಕೊಂಡಿದ್ದು, 24 ದಿನಗಳ ಕಾಲ ಕ್ರಿಕೆಟ್ ಹಬ್ಬ ನಡೆಯಲಿದೆ. ಈಗಾಗಲೇ ಉತ್ಸವ ಸಮಿತಿಯನ್ನು ರಚಿಸಲಾಗಿದ್ದು, ಪೂರ್ವ ಭಾವಿಯಾಗಿ ಹಲವು ಸಭೆಗಳನ್ನು ನಡೆಸಲಾಗಿದೆ. ಈ ಬಾರಿ 2 ಮೈದಾನಗಳಲ್ಲಿ ಕ್ರಿಕೆಟ ಪಂದ್ಯಾವಳಿ ನಡೆಯಲಿದೆ.

ಮೂರ್ನಾಡಿನ ಲಾಲೂ ಮುದ್ದಯ್ಯ ಮೈದಾನದಲ್ಲಿ ಉದ್ಘಾಟನಾ ಪಂದ್ಯ ಮತ್ತು ಅಂತಿಮ ಪಂದ್ಯ ನಡೆಯಲಿದೆ. ಆರಂಭಿಕ ಸುತ್ತಿನ ಪಂದ್ಯಗಳಿಗೆ ಅರಮೇರಿ ಕಳಂಚೇರಿಯ ಎಸ್‌ಎಂಎಸ್ ವಿದ್ಯಾಪೀಠದ ಮೈದಾನ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಪಂದ್ಯಾ ವಳಿಯ ಕ್ವಾರ್ಟರ್ ಫೈನಲ್‌ವರೆಗೆ ೬ ಓವರ್‌ಗಳ ಪಂದ್ಯಗಳು ನಡೆಯಲಿದ್ದು, ನಂತರದ ವಿಭಾಗಕ್ಕೆ 8 ಓವರ್ ಪಂದ್ಯಗಳು ನಡೆಯಲಿವೆ.

ಒಟ್ಟು 350ಕ್ಕೂ ಹೆಚ್ಚು ಕೊಡವ ಕುಟುಂಬಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗ ವಹಿಸಲಿವೆ. ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯಲ್ಲಿ 50ಕ್ಕೂ ಅಧಿಕ ತಂಡಗಳು ಪಾಲ್ಗೊಳ್ಳಲಿವೆ. ಕ್ರಿಕೆಟ್ ಉತ್ಸವದ ವೇಳೆ ವಿವಿಧ ಕಾರ್ಯಕ್ರಮಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಕಳೆದ ವರ್ಷ ನಡೆದ ಚೆಕ್ಕೆರ ಕ್ರಿಕೆಟ್ ನಮ್ಮೆಯಲ್ಲಿ ಪುರುಷರ ವಿಭಾಗದಲ್ಲಿ 280 ತಂಡಗಳು, ಮಹಿಳೆಯರ ವಿಭಾಗದಲ್ಲಿ 58 ತಂಡಗಳು ಪಾಲ್ಗೊಂಡಿದ್ದವು.

ಬಾಳೆಲೆಯಲ್ಲಿ ನಡೆದ ಅರಮಣಮಾಡ ಕಪ್ ನಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಆಟವಾಡಲು ಅವಕಾಶ ಮಾಡಿಕೊಡಲಾಗಿತ್ತು.

ನಂತರ ಆಯೋಜನೆ ಮಾಡಿದ ಚೆಕ್ಕೇರ ಒಕ್ಕ ಮತ್ತಷ್ಟು ಕೊಡವ ಕುಟುಂಬಗಳ ಮಹಿಳೆಯರಿಗೆ ತಂಡವಾಗಿ ಪಾಲ್ಗೊಳ್ಳಲು ಉತ್ತೇಜನ ನೀಡಿತ್ತು. ಇದೀಗ ಮುಕ್ಕಾಟಿರ ಒಕ್ಕ ಹೆಚ್ಚು ಮಹಿಳಾ ತಂಡಗಳಿಗೆ ಅವಕಾಶ ಕಲ್ಪಿಸಲು ತೀರ್ಮಾನಿಸಿದೆ.

ಸಣ್ಣ ಪ್ರಮಾಣದ ಜನಸಂಖ್ಯೆಯನ್ನು ಹೊಂದಿರುವ ಕುಟುಂಬಸ್ಥರು ಕಳೆದ ವರ್ಷ ಕೊಡವ ಫುಟ್ಬಾಲ ಪಂದ್ಯಾವಳಿಯನ್ನು ಆಯೋಜಿಸಿ, ಸೈ ಎನಿಸಿಕೊಂಡಿದ್ದರು.

ಮೊದಲ ವರ್ಷವೇ ಸುಮಾರು 71 ಕುಟುಂಬಗಳು ಫುಟ್ಬಾಲ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ಮುಕ್ಕಾಟಿರ ತಂಡ ಯಶಸ್ವಿಯಾಗಿತ್ತು.

ಸಮಿತಿ ರಚನೆ
ಕ್ರಿಕೆಟ್ ನಮ್ಮೆ ಅಧ್ಯಕ್ಷರಾಗಿ ಸುರೇಶ್ ಪೆಮ್ಮಯ್ಯ, ಕಾರ್ಯಾಧ್ಯಕ್ಷರಾಗಿ ಮಧು ದೇವಯ್ಯ, ಉಪಾಧ್ಯಕ್ಷರಾಗಿ ಕಿಟ್ಟು ಮುತ್ತಣ್ಣ, ರವಿಕುಮಾರ್, ಕಾರ್ಯದರ್ಶಿಯಾಗಿ ಮುಕ್ಕಾಟಿರ ಪೊನ್ನಣ್ಣ, ಖಜಾಂಚಿ ಮುಕ್ಕಾಟಿರ ಗಣಪತಿ, ಜಂಟಿ ಖಜಾಂಚಿಯಾಗಿ ಮುಖೇಶ್ ಅಯ್ಯಪ್ಪ, ಜಂಟಿ ಕಾರ್ಯದರ್ಶಿಯಾಗಿ ಸಂಜು ಸೋಮಣ್ಣ, ವಕ್ತಾರರಾಗಿ ರವಿ ಚೀಯಣ್ಣ, ಡಿಜಿಟಲ್ ಮೀಡಿಯ ಮುಖ್ಯಸ್ಥರಾಗಿ ಉತ್ತಮ ಬೋಪಣ್ಣ, ಸದಸ್ಯರಾಗಿ ಸತ್ಯ ಪೆಮ್ಮಯ್ಯ, ಡ್ಯಾನಿ ಕಾವೇರಪ್ಪ, ಗಣೇಶ್ ಮಾಚಯ್ಯ, ಕಾಶಿ ಕುಟ್ಟಪ್ಪ, ಮಂಥನ್ ಕಾಳಪ್ಪ, ಭಜನ್, ಉಮೇಶ್ ಬೆಳ್ಯಪ್ಪ, ದಿವಿನ್ ಜವಾಬ್ದಾರಿ ಹೊತ್ತಿದ್ದಾರೆ.

23 ವರ್ಷಗಳ ಕಾಲ ಯಶಸ್ವಿ ಆಯೋಜನೆ

2000ನೇ ಇಸವಿಯಲ್ಲಿ ಪ್ರಾರಂಭವಾದ ಕ್ರಿಕೆಟ್ ನಮ್ಮೆ ಇದೀಗ 24ರ ಹೊಸ್ತಿಲಲ್ಲಿದೆ. 2029 ರಲ್ಲಿ ಜಲಪ್ರಳಯ ಹಾಗೂ ನಂತರದ ಎರಡು ವರ್ಷ ಕೋವಿಡ್ ಸಂದರ್ಭದಲ್ಲಿ ಮಾತ್ರ ಮೂರು ವರ್ಷ ಉತ್ಸವ ನಡೆಯಲಿಲ್ಲ. ಅದನ್ನು ಹೊರತು ಪಡಿಸಿದಂತೆ 23 ಕೊಡವ ಕುಟುಂಬಗಳು ಕೊಡವ ಕ್ರಿಕೆಟ್ ನಮ್ಮೆಯನ್ನು ಯಶಸ್ಸಿಯಾಗಿ ಆಯೋಜಿಸಿವೆ. ಮೊದಲ ಬಾರಿಗೆ 200ನೇ ಇಸವಿಯಲ್ಲಿ ಕೀತಿಯಂಡ ತಂಡ ಕ್ರಿಕೆಟ್ ಆಯೋಜಿಸಿತ್ತು. ನಂತರ ತಾತಂಡ, ಬಲ್ಲಂಡ, ಕಾಂಡೇರ ಕಪ್, ಮಣವಟ್ಟೀರ, ಕುಂಡ್ರಂಡ, ಅಮ್ಮಣಿಚಂಡ, ನಂಬುಡಮಾಡ, ಕೂತಂಡ, ಕೋಳೇರ, ಬಲ್ಲಿಮಾಡ, ಮಾಚಿಮಂಡ, ಚಾಮೇರ, ಅಡ್ಡೇಂಗಡ, ಕೊಕ್ಕೇಂಗಡ, ಚೌರೀರ, ಮುಕ್ಕಾಟೀರ (ಪುಲಿಕೋಟ್), ಅಳಮೇಂಗಡ, ಮಡ್ಲಂಡ, ಪೊರ್ಕೊಂಡ, ಬಾಳೆಯಡ, ಅರಮಣಮಾಡ, ಚಕ್ಕೇರ ತಂಡಗಳು ಕ್ರಿಕೆಟ್ ಉತ್ಸವವನ್ನು ನಡೆಸಿವೆ.

Tags:
error: Content is protected !!