Mysore
21
broken clouds

Social Media

ಬುಧವಾರ, 26 ಆಗಸ್ಟ್ 2026
Light
Dark

ಬೆಂಗಳೂರು | 4 ವರ್ಷದ ಬಾಲಕಿ ಬರ್ಬರ ಹತ್ಯೆ ; ಅತ್ಯಾಚಾರ ಶಂಕೆ

ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ನಾಲ್ಕೂವರೆ ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದು, ಈ ಘಟನೆ ನಗರವನ್ನು ಬೆಚ್ಚಿಬೀಳಿಸಿದೆ. ಬಾಲಕಿಯ ಶವ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಬೋಳುಗುಟ್ಟದ ನಿರ್ಜನ ಪ್ರದೇಶದ ನೀಲಗಿರಿ ತೋಪಿನಲ್ಲಿ ಪತ್ತೆಯಾಗಿದೆ.

ಬಾಲಕಿ ಗುರುವಾರ ಸಂಜೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದಳು. ಪೋಷಕರು ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಪೊಲೀಸರಿಗೆ ದೂರು ನೀಡಿದ್ದರು.

ಬಳಿಕ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ, ರಾತ್ರಿ ವೇಳೆಗೆ ಬೋಳುಗುಟ್ಟದ ನಿರ್ಜನ ಪ್ರದೇಶದ ನೀಲಗಿರಿ ತೋಪಿನಲ್ಲಿ ಶವ ಪತ್ತೆ ಮಾಡಿದ್ದರು. ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ಬಾಲಕಿಯ ಗುರುತು ಮರೆಮಾಚಲು ಮುಖವನ್ನು ಕಲ್ಲಿನಿಂದ ಜಜ್ಜಿ ವಿಕೃತವಾಗಿ ಕೊಲೆ ಮಾಡಿದ್ದಾರೆ.

ದೇಹದ ಸ್ಥಿತಿಯನ್ನು ಗಮನಿಸಿದರೆ ಲೈಂಗಿಕ ದೌರ್ಜನ್ಯವೂ ನಡೆದಿರಬಹುದೆಂಬ ಅನುಮಾನವಿದೆ. ಈ ಬಗ್ಗೆ ಮರಣೋತ್ತರ ಪರೀಕ್ಷಾ ವರದಿಯಿಂದ ಸ್ಪಷ್ಟ ಮಾಹಿತಿಗಳು ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಕುಟುಂಬ ಮೂಲತಃ ಅಸ್ಸಾಂ ಮೂಲದವರಾಗಿದ್ದು, ತಂದೆ ಅಪಾರ್ಟ್‌ಮೆಂಟ್‌ನಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದು, ಜೊತೆಗೆ ಕಸದ ಸಂಗ್ರಹಣೆಯ ಕೆಲಸವೂ ಮಾಡುತ್ತಿದ್ದರು. ಕುಟುಂಬ ತಾತ್ಕಾಲಿಕ ಶೆಡ್‌ನಲ್ಲಿ ವಾಸಿಸುತ್ತಿತ್ತು ಎಂದು ತಿಳಿದುಬಂದಿದೆ.

ಆರೋಪಿಗಳು ಬಾಲಕಿಗೆ ಪರಿಚಿತರಾಗಿರುವ ಸಾಧ್ಯತೆ ಇದೆ. ಆಮಿಷ ನೀಡಿ ಆಕೆಯನ್ನು ಕರೆದೊಯ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ವೈಷಮ್ಯದ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಈ ಸಂಬಂಧ ಅಪಹರಣ, ಕೊಲೆ ಹಾಗೂ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:
error: Content is protected !!