Mysore
23
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಮೈ-ಬೆಂ ಹೆದ್ದಾರಿಯಲ್ಲಿ ಸುಲಿಗೆ,ದರೋಡೆ ; 34 ಪ್ರಕರಣಗಳಲ್ಲಿ 28 ಕೇಸ್‌ ಸಾಲ್ವ್‌!

ಮಂಡ್ಯ : ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್-275) ಹಾಗೂ ಸರ್ವಿಸ್ ರಸ್ತೆಗಳಲ್ಲಿ ತಡರಾತ್ರಿ ಪ್ರಯಾಣಿಕರನ್ನು ತಡೆದು ಸುಲಿಗೆ, ದರೋಡೆ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಒಟ್ಟು 34 ಪ್ರಕರಣಗಳು ವರದಿ ಆಗಿದ್ದು, 28 ಪ್ರಕರಣಗಳನ್ನು ಭೇದಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದ್ದಾರೆ.

ಶಾಸಕ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಈ ಹೆದ್ದಾರಿ ಸಾರ್ವಜನಿಕ ಬಳಕೆಗೆ ಮುಕ್ತಗೊಂಡ ಬಳಿಕ 2022 ರಿಂದ 2025ರ ಅಂತ್ಯಕ್ಕೆ ಈ ಪ್ರಕರಣಗಳು ವರದಿಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರ ಸುಲಿಗೆಗೆ ಸಂಬಂಧಿಸಿದಂತೆ ಒಟ್ಟು 22 ಪ್ರಕರಣಗಳು ವರದಿಯಾಗಿದ್ದು, 17 ಪ್ರಕರಣಗಳನ್ನು ಭೇದಿಸಲಾಗಿದೆ. ಒಟ್ಟು 34 ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 12, ಮಂಡ್ಯ ಜಿಲ್ಲೆಯಲ್ಲಿ 9 ಹಾಗೂ ಮೈಸೂರು ನಗರದಲ್ಲಿ 1 ಪ್ರಕರಣ ವರದಿಯಾಗಿದೆ ಎಂದರು.

ಪ್ರಯಾಣಿಕರ ದರೋಡೆಗೆ ಸಂಬಂಧಿಸಿದಂತೆ, ವರದಿಯಾದ ಒಟ್ಟು 12 ಪ್ರಕರಣಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 7 ಹಾಗೂ ಮಂಡ್ಯ ಜಿಲ್ಲೆಯಲ್ಲಿ 5 ಪ್ರಕರಣಗಳು ವರದಿಯಾಗಿದ್ದು 11 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 56 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಲಿಗೆ ಮತ್ತು ದರೋಡೆಯನ್ನು ತಡೆಯಲು ದಿನದ 24 ಗಂಟೆಗಳಲ್ಲಿ ಮೂರು ಪಾಳಿಯಲ್ಲಿ ಹೈವೇ ಪೆಟ್ರೋಲಿಂಗ್ ನಿಯೋಜನೆ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

19.27 ಲಕ್ಷ ಸಂಚಾರ ನಿಯಮ ಉಲ್ಲಂಘನೆ
ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಒಟ್ಟು 19.27 ಲಕ್ಷ ಸಂಚಾರ ನಿಯಮಗಳ ಉಲ್ಲಂಘನೆ ಆಗಿದೆ. 2024ರಲ್ಲಿ 13,83,861 ಹಾಗೂ 2025ರಲ್ಲಿ 5,43,175 ಪ್ರಕರಣಗಳು ದಾಖಲಾಗಿವೆ ಎಂದು ಸಚಿವ ಜಿ.ಪರಮೇಶ್ವರ್ ತಿಳಿಸಿದರು.

ನಿಯಮ ಉಲ್ಲಂಘನೆ ಸಂಬಂಧ 2024ರಲ್ಲಿ 13,83,861 ಪ್ರಕರಣಗಳು ವರದಿಯಾಗಿದ್ದು ರೂ.93,75,42,500 ದಂಡ ವಿಧಿಸಲಾಗಿದೆ. ದಂಡದ ಮೊತ್ತ ರೂ. 8,38,80,500 ಸಂಗ್ರಹಿಸಲಾಗಿದೆ. ದಂಡದ ಮೊತ್ತ 85,36,62,000 ರೂ. ಬಾಕಿ ಇದೆ.

ನಿಯಮ ಉಲ್ಲಂಘನೆ ಸಂಬಂಧ 2025ಲ್ಲಿ 5,43,175 ಪ್ರಕರಣಗಳು ವರದಿಯಾಗಿದ್ದು ರೂ. 40,10,76,500 ದಂಡ ವಿಧಿಸಲಾಗಿದೆ. ದಂಡದ ಮೊತ್ತ ರೂ. 4,30,73,000 ಸಂಗ್ರಹಿಸಲಾಗಿದೆ. ದಂಡದ ಮೊತ್ತ 35,8003,500 ರೂ. ಬಾಕಿ ಇದೆ ಎಂದು ಉತ್ತರಿಸಿದ್ದಾರೆ.

Tags:
error: Content is protected !!