Mysore
21
clear sky

Social Media

ಬುಧವಾರ, 28 ಜನವರಿ 2026
Light
Dark

ಉಡುಪಿ ಮಲ್ಪೆ ಬಳಿ ದೋಣಿ ಪಲ್ಟಿ: ಮೈಸೂರಿನ ಇಬ್ಬರು ಸಾವು

ಉಡುಪಿ: ಇಲ್ಲಿನ ಮಲ್ಪೆ ಕೋಡಿಬೆಂಗ್ರೆ ಬೀಷಚ್‌ ಸಮೀಪ ಪ್ರವಾಸಿ ದೋಣಿ ಮುಗುಚಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದ ಮೈಸೂರಿನ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಮೈಸೂರಿನ ಸರಸ್ವತಿಪುರಂ ನಿವಾಸಿಗಳಾದ ಶಂಕರಪ್ಪ ಹಾಗೂ ಸಿಂಧು ಎಂದು ಗುರುತಿಸಲಾಗಿದೆ. ಇಬ್ಬರೂ ಮೈಸೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿಗಳಾಗಿದ್ದರು.

ಮೈಸೂರಿನ ಸರಸ್ವತಿಪುರಂನಿಂದ ಸುಮಾರು 28 ಜನರಿದ್ದ ಬಿಪಿಒ ಉದ್ಯೋಗಿಗಳ ತಂಡ ಪ್ರವಾಸಕ್ಕಾಗಿ ಉಡುಪಿಗೆ ತೆರಳಿತ್ತು. ಅಲ್ಲಿ ಎರಡು ಖಾಸಗಿ ಪ್ರವಾಸಿ ದೋಣಿಗಳನ್ನು ಬಾಡಿಗೆಗೆ ಪಡೆದು ಪ್ರತಿ ಬೋಟ್‌ನಲ್ಲಿ ತಲಾ 14 ಜನರಂತೆ ಹಂಚಿಕೊಂಡು ಸಮುದ್ರ ವಿಹಾರಕ್ಕೆ ತೆರಳಿದ್ದರು.

ಕೋಡಿಬೆಂಗ್ರೆ ಅಳಿವೆ ಬಾಗಿಲು ಬಳಿ ಅಲೆಗಳ ಅಬ್ಬರ ಹೆಚ್ಚಾದ ಪರಿಣಾಮ ಅನಿರೀಕ್ಷಿತವಾಗಿ ಬಂದ ಭಾರೀ ಗಾತ್ರದ ಅಲೆಯೊಂದು ಬೋಟ್‌ಗೆ ಅಪ್ಪಳಿಸಿದೆ. ಪರಿಣಾಮ ಬೋಟ್‌ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಬೋಟ್‌ನಲ್ಲಿದ್ದ 14 ಮಂದಿಯೂ ಸಮುದ್ರದ ಪಾಲಾಗಿದ್ದಾರೆ.

ಈ ವೇಳೆ ಸ್ಥಳೀಯ ಮೀನುಗಾರರು ಹಾಗೂ ಈಜುಗಾರರು ಸ್ಥಳಕ್ಕೆ ಧಾವಿಸಿ ಮುಳುಗುತ್ತಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಆದರೆ ಶಂಕರಪ್ಪ ಹಾಗೂ ಸಿಂಧು ಮೃತಪಟ್ಟಿದ್ದಾರೆ.

ಅದರಲ್ಲಿ ಧರ್ಮರಾಜ್‌ ಹಾಗೂ ದಿಶಾ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತನಿಖೆಯ ಪ್ರಕಾರ ಈ ದುರಂತಕ್ಕೆ ಸುರಕ್ಷತಾ ನಿಯಮಗಳ ಉಲ್ಲಂಘನೆಯೇ ಕಾರಣ ಎಂದು ಹೇಳಲಾಗಿದೆ.

ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೋಟ್‌ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Tags:
error: Content is protected !!