ಮಹಾದೇಶ್ ಎಂ ಗೌಡ
ಹನೂರು: ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಸಂಜೆ 6 ಗಂಟೆಯಿಂದ ಬೆಳಗಿನ ಜಾವ 6 ಗಂಟೆವರೆಗೆ ಪಾದಯಾತ್ರೆಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಿಷೇಧಿಸಿದ್ದು, ಭಕ್ತಾದಿಗಳು ಸಹಕರಿಸುವಂತೆ ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ ಈ ರಘು ಮನವಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಹದೇಶ್ವರ ಬೆಟ್ಟಕ್ಕೆ ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಪಾದಯಾತ್ರೆಯ ಮೂಲಕ ಮಹದೇಶ್ವರ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ.
ಜನವರಿ 21ರ ಬೆಳಗಿನ ಜಾವ ಮಂಡ್ಯ ಮೂಲದ ಪಾದಯಾತ್ರಿಕನ ಮೇಲೆ ಚಿರತೆ ದಾಳಿ ನಡೆಸಿ ಮೃತಪಟ್ಟಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿಗಳು ಸಂಜೆ 6:00 ಯಿಂದ ಬೆಳಗಿನ ಜಾವ 6:00 ವರೆಗೆ ಪಾದಯಾತ್ರೆಯ ಮೂಲಕ ತೆರಳುವುದಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವ ಪಾದಯಾತ್ರಿಕರು ಜಿಲ್ಲಾಡಳಿತ ಹಾಗೂ ಪ್ರಾಧಿಕಾರಕ್ಕೆ ಸಹಕಾರ ನೀಡಬೇಕು. ಪಾದಯಾತ್ರೆಯ ಮೂಲಕ ಶ್ರೀ ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳು ಗುಂಪು ಗುಂಪಾಗಿ ಆಗಮಿಸಬೇಕು. ತಾಳುಬೆಟ್ಟದಿಂದ ಮಲೆ ಮಾದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಆನೆಯು ಆಗಾಗ ಕಾಣಿಸಿಕೊಳ್ಳುತ್ತಿದೆ. ಕಳೆದ ವರ್ಷವೂ ಸಹ ಪಾದಯಾತ್ರೆಯ ಮೂಲಕ ಆಗಮಿಸುತ್ತಿದ್ದ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಭಕ್ತಾದಿಗಳು ಸಹ ಮುಂಜಾಗ್ರತ ಕ್ರಮವಹಿಸಿ ಪಾದಯಾತ್ರೆಯ ಮೂಲಕ ತೆರಳಿ ದೇವರ ದರ್ಶನ ಪಡೆಯುವಂತೆ ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ ಈ ರಘು ಮನವಿ ಮಾಡಿದ್ದಾರೆ.





