Mysore
29
scattered clouds

Social Media

ಶನಿವಾರ, 24 ಜನವರಿ 2026
Light
Dark

ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌ : 5 ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ!

ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ಐದು ವರ್ಷದ ತೀರ್ಮಾನವನ್ನು ಸಚಿವ ಸಂಪುಟ ತೆಗೆದುಕೊಂಡಿದೆ.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ವಯೋಮಿತಿ ಸಡಿಲಿಕೆ ಮಾಡಿರುವ ಪರಿಣಾಮ ಉದ್ಯೋಗ ನಿರೀಕ್ಷೆಯಲ್ಲಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ. ಈವರೆಗೂ ಸಾಮಾನ್ಯ ವರ್ಗಕ್ಕೆ 35 ವರ್ಷ ವಯೋಮಿತಿ ಇದ್ದರೆ, SC, ST ಅಭ್ಯರ್ಥಿಗಳಿಗೆ 38 ವರ್ಷ ನಿಗದಿಪಡಿಸಲಾಗಿತ್ತು. ಆದರೀಗ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಆಗಲಿದ್ದು, ಡಿ.31 2027 ವರೆಗೆ ಹೊರಡಿಸಲಾಗಿರುವ ಎಲ್ಲ ಅಧಿಸೂಚನೆಗಳಿಗೆ ಇದು ಅನ್ವಯ ಆಗಲಿದೆ.

ರಾಜ್ಯದಲ್ಲಿ ಒಳಮಿಸಲಾತಿ ಮತ್ತಿತರ ಕಾರಣಗಳಿಂದ ಎರಡು ವರ್ಷಗಳಿಂದ ನೇಮಕಾತಿ ವಿಳಂಬವಾಗಿದೆ. ಹೀಗಾಗಿ ಉದ್ಯೋಗಾಕಾಂಕ್ಷಿಗಳು ಹೋರಾಟ ನಡೆಸಿ ವಯೋಮಿತಿಯನ್ನು ಐದು ವರ್ಷ ಸಡಿಲಿಕೆ ಮಾಡುವಂತೆ ಒತ್ತಾಯಿಸಿದ್ದರು. ಸೆಪ್ಟೆಂಬರ್ 6ರಂದು ಎರಡು ವರ್ಷ ಒಳ ಮೀಸಲಾತಿ ಸಡಿಲಿಕೆ ಮಾಡಿ ಸರ್ಕಾರ ಆದೇಶಿಸಿದ್ದು, ಇದಕ್ಕೂ ವಿರೋಧ ಮುಂದುವರೆದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 7 ರಂದು 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿತ್ತು.

ಒಳ ಮೀಸಲಾತಿ ಪ್ರಕರಣ ನ್ಯಾಯಾಲಯದಲ್ಲಿದ್ದು, ಒಟ್ಟಾರೆ ಮೀಸಲಾತಿ ಪ್ರಮಾಣ ಶೇಕಡ 50ಕ್ಕೆ ಸೀಮಿತಗೊಳಿಸಬೇಕೆ ಅಥವಾ ಶೇಕಡ 56 ಕ್ಕೆ ಮೀಸಲಾತಿ ನೀಡಬಹುದೇ ಎಂಬುದು ಇನ್ನೂ ಇತ್ಯರ್ಥವಾಗಿಲ್ಲ. ಈ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುತ್ತಿದ್ದು, ಈ ಕಾರಣಕ್ಕಾಗಿ ಸಾವಿರಾರು ಮಂದಿ ವಯೋಮಿತಿ ಕಾರಣಕ್ಕಾಗಿ ಉದ್ಯೋಗ ಅರ್ಹತೆ ಕಳೆದುಕೊಳ್ಳುತ್ತಿದ್ದಾರೆ.

ಹೀಗಾಗಿ ಸಿವಿಲ್ ಸೇವೆಗಳಿಗೆ ನೇರ ನೇಮಕಾತಿ ಹಾಗೂ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಗೆ ಅನ್ವಯವಾಗುವಂತೆ ಐದು ವರ್ಷ ಸಡಿಲಿಕೆ ಮಾಡಲು ಸಚಿವ ಸಂಪುಟ
ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಮನೆ ನಿರ್ಮಾಣಕ್ಕೆ ಸಹಾಯ ಹಸ್ತ
ಅಲೆಮಾರಿ/ ಅರೆ ಅಲೆಮಾರಿ ಸಮುದಾಯಕ್ಕೆ ಸಿಹಿ ಸುದ್ದಿ ನೀಡಿರುವ ರಾಜ್ಯ ಸಕರಕಾರ ಮನೆ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಲು ನಿರ್ಧರಿಸಿದೆ. 100 ಕೋಟಿ ಮೊತ್ತದಲ್ಲಿ, 1200 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ 600 ಚದರ ಅಡಿಗಳ ವಿಸ್ತೀರ್ಣದ ಮನೆಗಳ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ದಲಿತ, ಹಿಂದುಳಿದ ಮಠಗಳಿಗೆ ಜಮೀನು ಮಂಜೂರು
ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಯಲ್ಲಿ 22 ದಲಿತ ಹಾಗೂ ಹಿಂದುಳಿದ ವರ್ಗಗಳ ಮಠಗಳಿಗೆ ಜಮೀನು ನೀಡುವ ತೀರ್ಮಾನವನ್ನು ಸಂಪುಟ ಸಭೆ ತೆಗೆದುಕೊಂಡಿದೆ.
ಆ ಪ್ರಕಾರ ರಾವುತ್ತನಹಳ್ಳಿ ಗ್ರಾಮದ ಸರ್ವೆ ನಂ. 57 ಮತ್ತು 58ರಲ್ಲಿರುವ ಸರ್ಕಾರಿ ಜಮೀನು ಮಠಗಳಿಗೆ ಸಿಗಲಿದೆ.

ಗೋ ಬ್ಯಾಕ್ ಗೌರ್ವನರ್
ಜಂಟಿ ಅಧಿವೇಶನದಲ್ಲಿ ಸರ್ಕಾರ ಭಾಷಣ ಓದದೇ ತೆರಳಿದ ರಾಜ್ಯಪಾಲರ ನಡೆಗೆ ಸಚಿವ ಸಂಪುಟ ಸಭೆಯಲ್ಲಿ ಅಸಮಾಧಾನ ಹೊರಹಾಕಲಾಗಿದೆ. ಗೋ ಬ್ಯಾಕ್ ಗವರ್ನರ್ ನಿರ್ಣಯ ಮಾಡಲು ಚರ್ಚೆ ನಡೆಸಲಾಗಿದೆ. ರಾಜ್ಯಪಾಲರನ್ನ ವಾಪಸ್ ಕರೆಸಿಕೊಳ್ಳುವಂತೆ ನಿರ್ಣಯ ತೆಗೆದುಕೊಳ್ಳುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ.

ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆಯುವ ಸಂಬಂಧ ಚರ್ಚೆ ನಡೆಸಲಾಗಿದೆ. ಗವರ್ನರ್ ಗೋ ಬ್ಯಾಕ್ ಅಭಿಯಾನ ನಡೆಸುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಲಾಗಿದೆ. ಇಂದಿನ ಘಟನೆಯನ್ನ ರಾಜ್ಯ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ.

Tags:
error: Content is protected !!