Mysore
23
clear sky

Social Media

ಬುಧವಾರ, 21 ಜನವರಿ 2026
Light
Dark

ಗುರಿ ಇಟ್ಟುಕೊಂಡು ನಿರಂತರ ಓದಿ : ಪಿಯುಸಿ ವಿದ್ಯಾರ್ಥಿಗಳಿಗೆ ನಿಶಾಂತ್‌ ಸಲಹೆ

ಹನೂರು : ಪ್ರತಿಯೊಬ್ಬ ವಿದ್ಯಾರ್ಥಿಗೂ ದ್ವಿತೀಯ ಪಿಯುಸಿ ಒಂದು ಪ್ರಮುಖ ಘಟವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಒಂದು ಗುರಿ ಇಟ್ಟುಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಬಿಜೆಪಿ ಯುವ ಮುಖಂಡ ನಿಶಾಂತ್ ತಿಳಿಸಿದರು.

ಹನೂರು ಪಟ್ಟಣದ ಕ್ರಿಸ್ತರಾಜ ವಿದ್ಯಾ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಶ್ರದ್ದೆಯಿಂದ ಹಗಲು ರಾತ್ರಿ ಓದಿದರೆ ಮಾತ್ರ ಉತ್ತಮ ಸಾಧನೆ ಮಾಡಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯು ಸಾಮಾಜಿಕ ಜಾಲತಾಣದಿಂದ ದೂರವಿದ್ದು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರೆ, ನಿಮ್ಮ ಗುರಿಯನ್ನು ನೀವು ತಲುಪಬಹುದು ಎಂದರು.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಡಿಗ್ರಿಯನ್ನು ಪಡೆದುಕೊಂಡರೆ ಹೆಚ್ಚಿನ ಅನುಕೂಲವಾಗಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಕಾಲೇಜು ದಿನಗಳನ್ನು ವ್ಯರ್ಥ ಮಾಡಿಕೊಳ್ಳದೆ ನೀಟ್ ಸಿಇಟಿ ಪರೀಕ್ಷೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಪ್ರಸ್ತುತ ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ವೈದ್ಯರಾಗಿ, ವಕೀಲರಾಗಿ, ಉನ್ನತ ಅಧಿಕಾರಿಗಳಾಗಿ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕು. ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆರೋಗ್ಯ ಸೇವೆ ಸಮರ್ಪಕವಾಗಿ ಇಲ್ಲದೆ ಇರುವುದರಿಂದ ಹನೂರು ಭಾಗದ ವಿದ್ಯಾರ್ಥಿಗಳು ವೈದ್ಯರಾಗಿ ನಗರ ಪ್ರದೇಶಗಳಲ್ಲಿ ಆಸ್ಪತ್ರೆ ಪ್ರಾರಂಭ ಮಾಡುವ ಬದಲು ಹನೂರು ಪಟ್ಟಣದಲ್ಲಿ ಆಸ್ಪತ್ರೆ ತೆರೆದು ಸ್ಥಳೀಯರಿಗೆ ಹೆಚ್ಚಿನ ಸೇವೆ ಒದಗಿಸಿ ಕೊಟ್ಟರೆ ಜೀವನ ಸಾರ್ಥಕವಾಗುತ್ತದೆ ಎಂದು ಸಲಹೆ ನೀಡಿದರು.

ಹನೂರು ಪಟ್ಟಣದಲ್ಲಿರುವ ಕ್ರಿಸ್ತರಾಜ ವಿದ್ಯಾಸಂಸ್ಥೆಯು ಕಳೆದ 40 ವರ್ಷಗಳಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಸಂತಸದ ವಿಚಾರ ಶಾಲೆಯು ಶೈಕ್ಷಣಿಕವಾಗಿಯೂ ಅಲ್ಲದೆ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದರಿಂದ ಈ ಶಾಲೆಯ ವಿದ್ಯಾರ್ಥಿಗಳು ವಿವಿಧ ಆಟೋಗಳಲ್ಲಿ ಜಿಲ್ಲಾ, ರಾಜ್ಯ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ತಂದಿರುವುದು ಸಂತಸದ ವಿಚಾರ. ಪ್ರಸಕ್ತ ಸಾಲಿನಲ್ಲಿಯೂ ಕ್ರಿಸ್ತ ರಾಜ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವುದರ ಮೂಲಕ ತಾಲೂಕಿಗೆ ಕೀರ್ತಿ ತರುವಂತಾಗಬೇಕು ಎಂದು ತಿಳಿಸಿದರು.

ಕ್ರಿಸ್ತ ರಾಜ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೋಷನ್ ಮಾತನಾಡಿ ಕೃಷ್ಣರಾಜ ವಿದ್ಯಾ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಕೆಲವೊಮ್ಮೆ ಕಡು ಬಡವರಿಗೆ ಯಾವುದೇ ಶುಲ್ಕ ಪಡೆಯದೆ ಉಚಿತ ಶಿಕ್ಷಣವನ್ನು ಸಹ ನೀಡಿರುವ ನಿರ್ದರ್ಶನವಿದೆ. ನಮ್ಮ ಶಾಲೆಯ ವಿದ್ಯಾರ್ಥಿಗಳು ಪೀಡೆಯಲ್ಲಿಯೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ನಾವೆಲ್ಲರೂ ಹೆಮ್ಮೆಪಡುವ ವಿಚಾರ, ಅದೇ ರೀತಿ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯುವ ಮುಖಂಡರು, ಸಮಾಜ ಸೇವಕರಾದ ನಿಶಾಂತ್ ರವರು ಕ್ಷೇತ್ರದ ಯುವಕರ ಆಶಾಕಿರಣವಾಗಿ ಕಳೆದ ಹಲವಾರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಯಾವುದೇ ಅಧಿಕಾರವಿಲ್ಲದಿದ್ದರೂ ಬಡ ಜನರಿಗೆ ತಮ್ಮ ಕೈಲಾದ ಮಟ್ಟಿಗೆ ಸೇವೆ ಮಾಡುತ್ತಿದ್ದಾರೆ ಇವರಿಗೆ ಮುಂದಿನ ದಿನಗಳಲ್ಲಿ ಒಳಿತಾಗಲಿ ಎಂದು ಶುಭ ಹಾರೈಸಿದರು.

ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು, ರಾಜ್ಯಮಟ್ಟದಲ್ಲಿ ಕಾಲೇಜು ಹಾಗೂ ಜಿಲ್ಲೆಯನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳನ್ನು ಯುವ ಮುಖಂಡ ನಿಶಾಂತ್, ಶಾಲಾ ವ್ಯವಸ್ಥಾಪಕ ರೋಷನ್ ಸೇರಿದಂತೆ ಅತಿಥಿಗಳು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಮಹಾದೇಶ್,ಪ್ರಾಂಶುಪಾಲರಾದ ಸಿಸ್ಟರ್ ಜಾನ್ ಶಾಂತಿ, ಶಿಕ್ಷಕರಾದ ಮಹದೇವ ಪ್ರಸಾದ್, ಚಂದ್ರಶೇಖರ್, ಸಂತೋಷ್, ಪುಷ್ಪ, ಸಿಸ್ಟರ್ ಜೆಸಿಂತಾ ಗಲ್ಬಾವೋ , ಉಪನ್ಯಾಸಕರಾದ ವಿನೋದ್, ಪ್ರಕಾಶ್, ಸೋಮಣ್ಣ, ಜೈನ್ ಮುತ್ತು, ಪವಿತ್ರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:
error: Content is protected !!