ಹನೂರು: ಜಮೀನಿನಲ್ಲಿ ಬೆಳೆದಿರುವ ತರಕಾರಿ ಬೆಳೆಗಳನ್ನು ಕಾಡಾನೆಗಳ ಹಿಂಡು ಕಳೆದ ಮೂರು ದಿನಗಳಿಂದ ರಾತ್ರಿ ವೇಳೆ ದಾಳಿ ನಡೆಸಿ ಬೆಳೆ ನಾಶ ಮಾಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ರಾತ್ರಿ ಮತ್ತೆ ಆನೆ ದಾಳಿ ನಡೆಸಿದರೆ ಕುಟುಂಬಸ್ಥರೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತ ಬಂಗಾರು ಎಚ್ಚರಿಕೆ ನೀಡಿದ್ದಾರೆ.
ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಪಿ ಜಿ ಪಾಳ್ಯ ವಲಯ ಹಾಗೂ ಬಿ ಆರ್ ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿನ ಕಾಮಶೆಟ್ಟಿ ಎಂಬುವವರ ಜಮೀನಿನಲ್ಲಿ ತೆಂಗು, ಜೋಳ, ತರಕಾರಿ ಬೆಳೆಗಳಾದ ಅವರೆ, ತೊಗರಿ, ಮೆಣಸಿನಕಾಯಿ, ಬೀಟ್‌ರೋಟ್ ಬೆಳೆದಿದ್ದಾರೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಕಾಡಾನೆಗಳ ಹಿಂಡು ದಾಳಿ ನಡೆಸಿ ತರಕಾರಿ ಬೆಳೆ ಹಾಗೂ ಜೋಳದ ಬೆಳೆಯನ್ನು ನಾಶಪಡಿಸಿದೆ. ತೆಂಗಿನ ಮರದಲ್ಲಿ ಬೆಳೆದಿರುವ ಎಳನೀರನ್ನು ಸಂಪೂರ್ಣವಾಗಿ ಕುಡಿದು ನಾಶ ಮಾಡಿದೆ.
ಜಮೀನಿನಲ್ಲಿ ಬೆಳೆಗಳಿಗೆ ನೀರು ಹಾಯಿಸಲು ಸಾಲ ಮಾಡಿ ಕೃಷಿ ಪರಿಕರಗಳನ್ನು ಖರೀದಿಸಿ ಅಳವಡಿಸಲಾಗಿದೆ. ಕಾಡಾನೆ ನಿರಂತರವಾಗಿ ದಾಳಿ ಮಾಡಿ ಕೃಷಿ ಪರಿಕರಗಳನ್ನು ನಾಶ ಮಾಡಿದೆ. ಈಗಾಗಲೇ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದೇನೆ. ಇದೀಗ ಬೆಳೆದಿರುವ ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಆನೆ ದಾಳಿ ನಿಯಂತ್ರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಮೂರು ದಿನಗಳಿಂದ ಕುಟುಂಬಸ್ಥರೆಲ್ಲರೂ ನಿದ್ದೆ ಮಾಡದೆ ಬೆಳೆ ಕಾಯುತ್ತಿದ್ದೇವೆ. ಆದರೂ ಯಾವುದೇ ಶಬ್ದಗಳಿಗೂ ಜಗ್ಗದೆ ಕಾಡಾನೆಗಳು ಬೆಳೆಗಳನ್ನು ನಾಶ ಮಾಡುತ್ತಿದೆ.
ಈ ನಿಟ್ಟಿನಲ್ಲಿ ಒಂದು ತೀರ್ಮಾನಕ್ಕೆ ಬಂದಿದ್ದು, ಆನೆ ದಾಳಿ ಮುಂದುವರೆದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿ ಹರಿಬಿಟ್ಟು ಆಕ್ರೋಶ ಹೊರಹಾಕಿದ್ದಾರೆ.





