ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ನಿತಿನ್ ನಬಿನ್ ಅವರು ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರ ಹರ್ಷೋದ್ಘಾರದ ನಡುವೆ ಇಂದು ವಿದ್ಯುಕ್ತವಾಗಿ ಅಧಿಕಾರ ಸ್ವೀಕರಿಸಿದರು.
ಬಿಜೆಪಿ ಇತಿಹಾಸದಲ್ಲೇ ಅತಿ ಚಿಕ್ಕ ವಯಸ್ಸಿನಲ್ಲೇ ಪಕ್ಷದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಾಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಕೀರ್ತಿಗೆ ಪಾತ್ರರಾಗಿದ್ದಾರೆ. ಜೊತೆಗೆ ಕೇಂದ್ರದ ಹಾಲಿ ಸಚಿವ ನಿತಿನ್ ಗಡ್ಕರಿ ಅವರ ಹೆಸರಿನಲ್ಲಿ ಇದ್ದ ದಾಖಲೆಯನ್ನು ಮುರಿದಿದ್ದಾರೆ.
ನವದೆಹಲಿಯಲ್ಲಿರುವ ದೀನ್ ದಯಾಳ್ ಉಪಾಧ್ಯಾಯ್ ಮಾರ್ಗದಲ್ಲಿರುವ ಪಕ್ಷದ ಮುಖ್ಯ ಕಚೇರಿಯಲ್ಲಿ ನಿರ್ಗಮಿತ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಷಾ ಸೇರಿದಂತೆ ಹಲವರ ಸಮುಖದಲ್ಲಿ ನಬಿನ್ ಕುರ್ಚಿ ಅಲಂಕರಿಸುವ ಮೂಲಕ ಅಧಿಕಾರ ವಹಿಸಿಕೊಂಡರು.
ನಿರ್ಗಮಿತ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿದ್ದ ಪ್ರಮುಖರು ಹಾಗೂ ಕಚೇರಿ ಹೊರಭಾಗದಲ್ಲಿದ್ದ ಕಾರ್ಯಕರ್ತರು ಜೈಕಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪಕ್ಷದೊಳಗೆ ಅವರ ಉನ್ನತ ಸ್ಥಾನಮಾನವನ್ನು ಗುರುತಿಸಲು ಪ್ರಧಾನಿ ನರೇಂದ್ರ ಮೋದಿ, ನಿತಿನ್ ನಬಿನ್ ಅವರನ್ನು ಸನಾನಿಸಿದರು.
ಬಿಜೆಪಿ ನೂತನ ಅಧ್ಯಕ್ಷರ ಔಪಚಾರಿಕ ಘೋಷಣೆಯಿಂದ ವಾರಗಳ ಕಾಲ ನಡೆದ ಆಂತರಿಕ ಚರ್ಚೆಗಳಿಗೆ ತೆರೆಬಿದ್ದಿದೆ. ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದಂತಹ ನಿರ್ಣಾಯಕ ರಾಜ್ಯಗಳು ಈ ವರ್ಷದ ಕೊನೆಯಲ್ಲಿ ಹೊಸ ಸರ್ಕಾರಕ್ಕೆ ಮತ ಚಲಾಯಿಸಲು ಸಜ್ಜಾಗಿರುವುದರಿಂದ ಪಕ್ಷವು ನೂತನ ಅಧ್ಯಕ್ಷರನ್ನು ಮುನ್ನೆಲೆಗೆ ತಂದು ಚುನಾವಣಾ ಅಖಾಡಕ್ಕಿಳಿಯಲು ಮುಂದಾಗಿದೆ.





