ಮಡಿಕೇರಿ: ಮನರೇಗಾ ಹೆಸರು ಬದಲಾವಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆ ಖಂಡನೀಯ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಡಿಕೇರಿಯ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮನರೇಗಾ ಹೆಸರು ಬದಲಾವಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆ ಖಂಡನೀಯ. ಯಾವುದೇ ಸಂಘ ಸಂಸ್ಥೆಗಳು ಹಾಗೂ ರಾಜ್ಯ ಸರ್ಕಾರಗಳ ಜೊತೆ ಚರ್ಚೆಯನ್ನೇ ಮಾಡಿಲ್ಲ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬಿಲ್ ಅನ್ನು ಎರಡೂ ಸದನಗಳಲ್ಲಿ ಪಾಸ್ ಮಾಡಿದ್ದಾರೆ. ಯೋಜನೆಯಲ್ಲಿ ತಂದಿರುವ ಬದಲಾವಣೆ ಸರಿಯಲ್ಲ ಎಂಬುದು ರಾಜ್ಯ ಸರ್ಕಾರದ ವಾದ. ಬದಲಾವಣೆಯಂತೆ ಯೋಜನೆಯಲ್ಲಿ ಪಂಚಾಯಿತಿಗಳ ಹಕ್ಕನ್ನು ಕಸಿದುಕೊಂಡಿದ್ದಾರೆ. ಯುಪಿಎ ಅವಧಿಯಲ್ಲಿನ ಯೋಜನೆ ಪ್ರಾರಂಭದ ಉದ್ದೇಶವನ್ನೇ ಈಗ ಕೇಂದ್ರ ಸರ್ಕಾರ ತಿರುಚಿದೆ. ಕಾಯ್ದೆಯಲ್ಲಿ ಅದಾನಿ ಅಂಬಾನಿಯವರಿಗೆ ಉಪಯೋಗ ಆಗುವಂತೆ ಕೇಂದ್ರ ಮಾಡಿದೆ. ಯೋಜನೆ ತಿದ್ದುಪಡಿಯಿಂದ ಎಲ್ಲಾ ರಾಜ್ಯಗಳಿಗೆ ಆರ್ಥಿಕ ಹೊರೆ ಆಗುತ್ತೆ ಆಗುತ್ತದೆ. ಯೋಜನೆಯ ಮೂಲ ಉದ್ದೇಶ ಹಳ್ಳ ಹಿಡಿಯಲಿ ಅಂತಾನೇ ಕೇಂದ್ರ ಹೀಗೆ ಮಾಡಿದೆ. ಬಡವರಿಗೆ ವಿರೋಧವಾಗಿರುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇನ್ನು ಭ್ರಷ್ಟಾಚಾರ ಆಗಿದೆ, ನಕಲಿ ಜಾಬ್ ಕಾರ್ಡ್ ಆಗಿದೆ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲಾ ಸರ್ಕಾರದಲ್ಲೂ ಭ್ರಷ್ಟಾಚಾರ ಆಗಿದೆ, ಆಗುತ್ತಿದೆ, ಯೋಜನೆ ಬದಲಾವಣೆಯಿಂದ ಅದು ಸರಿ ಆಗಲ್ಲ. ಭ್ರಷ್ಟಾಚಾರವೇ ನಡೆದಿಲ್ಲ ಅಂತ ನಾವು ಹೇಳಿಲ್ಲ ಎಂದು ಪರೋಕ್ಷವಾಗಿ ಮನರೇಗಾದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಒಪ್ಪಿಕೊಂಡರು.
ಇನ್ನು ಭ್ರಷ್ಟಾಚಾರವೇ ಆಗದಿರುವ ಒಂದೇ ಒಂದು ಯೋಜನೆ ಇದ್ದರೆ ತೋರಿಸಲಿ ನೋಡೋಣ. ಬೇರೆ ಎಲ್ಲಾ ರಾಜ್ಯಗಳು ಕೂಡ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನೀವೇ 100% ಭರಿಸಬೇಕು ಅಂತ ಚಂದ್ರಬಾಬು ನಾಯ್ಡು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಚಂದ್ರಬಾಬು ನಾಯ್ಡು ಏನಾದರೂ ಬೆಂಬಲ ವಾಪಸ್ ಪಡೆದರೆ ಕೇಂದ್ರ ಸರ್ಕಾರವೇ ಹೋಗುತ್ತದೆ. ಬೇರೆ ರಾಜ್ಯ ಸರ್ಕಾರಗಳ ಜೊತೆಗೆ ಯೋಜನೆಯ ತೊಂದರೆ ಬಗ್ಗೆ ಮಾತಾಡಿದೀವಿ. ಯೋಜನೆಗೆ ನಮ್ಮ ವಿರೋಧವಿದೆ ಎಂದು ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ಕಳುಹಿಸಲಾಗಿದೆ. ಇವತ್ತಲ್ಲಾ ನಾಳೆ ಈ ಯೋಜನೆಯನ್ನು ಕೇಂದ್ರ ವಾಪಸ್ ಪಡೆಯಲೇಬೇಕು, ಪಡೆದೇ ಪಡೆಯುತ್ತೆ ಎಂದು ಹೇಳಿದರು.





