ನಂಜನಗೂಡು: ಮೈಸೂರು ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಉಪಟಳ ಮುಂದುವರಿದಿದ್ದು, ನಂಜನಗೂಡು ಭಾಗದ ಪ್ರದೇಶಕ್ಕೆ ಚಿರತೆ ಪ್ರವೇಶಿಸಿ ಭೀತಿಯನ್ನುಂಟು ಮಾಡಿದೆ.
ನಂಜನಗೂಡು ತಾಲ್ಲೂಕಿನ ದೇವಿರಮ್ಮನಹಳ್ಳಿ ಹುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮನೆ ಮುಂಭಾಗದಲ್ಲಿ ಕಟ್ಟಿ ಹಾಕಿದ್ದ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಈ ಘಟನೆ ನಗರಸಭೆಯ ಇಂಜಿನಿಯರ್ ಪ್ರತಿಮಾ ಎಂಬುವವರ ಮನೆಯ ಮುಂದೆ ನಡೆದಿದೆ.
ಈ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಚಿರತೆ ಓಡಾಟ ಕಂಡುಬರುತ್ತಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಚಿರತೆ ಮನೆ ಸಮೀಪ ಬಂದು ಸಾಕು ನಾಯಿಯನ್ನು ಎಳೆದುಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಾಹಿತಿ ಪಡೆದ ನಂಜನಗೂಡು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯನ್ನು ಶೀಘ್ರದಲ್ಲೇ ಸೆರೆಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.





