Mysore
21
clear sky

Social Media

ಸೋಮವಾರ, 19 ಜನವರಿ 2026
Light
Dark

ಸಿಎಂ ಸೇರಿ 140 ಶಾಸಕರೂ ನನ್ನ ಬೆಂಬಲಕ್ಕಿದ್ದಾರೆ : ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ಮುಖ್ಯಮಂತ್ರಿ ಸೇರಿ ಕಾಂಗ್ರೆಸ್ ಪಕ್ಷದ 140 ಶಾಸಕರೂ ನನ್ನ ಬೆಂಬಲಕ್ಕೆ ಇದ್ದಾರೆ. ನಮ್ಮ ನಡುವೆ ಏನು ಚರ್ಚೆಯಾಗಿದೆ ಎಂದು ನಮಗೆ ಗೊತ್ತು. ಇದನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು. ನಿಮ್ಮ ಬೆಂಬಲಿಗರು ಹೈಕಮಾಂಡ್ ತೀರ್ಮಾನದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ಕೇಳಿದಾಗ, ಯಾರು ಹೇಳಿದರು? 140 ಶಾಸಕರು ಕೂಡ ನನ್ನ ಬೆಂಬಲಿಗರೇ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ನನಗೆ ಬೆಂಬಲವಾಗಿದ್ದಾರೆ. ನಾನು ಹಾಗೂ ಸಿಎಂ ಅವರು ಏನು ಮಾತನಾಡಿದ್ದೇವೆ ಎಂದು ನಿಮಗೆ ಗೊತ್ತಿದೆಯಾ? ರಾಹುಲ್ ಗಾಂಧಿ ಸಮ್ಮುಖದಲ್ಲಿ ನಾವು ಏನು ಮಾತನಾಡಿಕೊಂಡಿದ್ದೇವೆ, ಹೈಕಮಾಂಡ್ ಸಮ್ಮುಖದಲ್ಲಿ ಏನು ಮಾತನಾಡಿದ್ದೇವೆ, ಎಲ್ಲ ಕೂತು ಏನು ತೀರ್ಮಾನ ಮಾಡಿದ್ದೇವೆ ಎಂದು ನಮಗೆ ಗೊತ್ತಿದೆ. ಈ ವಿಚಾರವನ್ನು ನಿಮ್ಮ ಮುಂದೆ ಬಹಿರಂಗವಾಗಿ ಚರ್ಚೆ ಮಾಡಲು ಸಾಧ್ಯವೇ? ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದರು.

ಹೊಸದಿಲ್ಲಿ ಭೇಟಿ ಬಗ್ಗೆ ಕೇಳಿದಾಗ, ನಾವು ದಿಲ್ಲಿಗೆ ಹೋಗುವುದೇ ರಾಜಕೀಯ, ಪಕ್ಷ ಹಾಗೂ ಸರ್ಕಾರದ ಕೆಲಸಗಳಿಗೆ. ಮಾಧ್ಯಮಗಳು ರಾಹುಲ್ ಗಾಂಧಿ ಭೇಟಿಯಾಗಿಲ್ಲ ಎಂದು ಬರೆದಿದ್ದೀರಿ. ಒಂದು ದಿನ ನಾವು ಜೊತೆಯಲ್ಲಿ ಕೂತು ಚರ್ಚೆ ಮಾಡಿರುವ ಫೋಟೋ ವರದಿ ಮಾಡಿದ್ದೀರಿ, ಮರುದಿನ ಭೇಟಿಯೇ ಆಗಿಲ್ಲ ಎಂದು ಹೇಳುತ್ತಿದ್ದೀರಿ. ಈ ವಿಚಾರದಲ್ಲಿ ಕಾಲವೇ ಉತ್ತರ ನೀಡಲಿದೆ ಎಂದು ತಿಳಿಸಿದರು.

ಹೈಕಮಾಂಡ್ ಒಳ್ಳೆಯ ಸುದ್ದಿ ನೀಡಲಿದೆ ಎಂದು ನಿಮ್ಮ ಸಹೋದರ ಹೇಳಿದ್ದಾರೆ ಎಂದು ಕೇಳಿದಾಗ, ನನ್ನ ತಮ್ಮ, ನಮ್ಮ ಕಾರ್ಯಕರ್ತರು, ಮಾಧ್ಯಮಗಳು ಕೂಡ ಹೇಳುತ್ತಿವೆ ಎಂದರು.

ಡಿಜಿಪಿ ರಾಮಚಂದ್ರ ಅವರು ಮಹಿಳೆಯರ ಜೊತೆ ಕಚೇರಿಯಲ್ಲಿ ಅಶ್ಲೀಲವಾಗಿ ವರ್ತಿಸಿರುವ ಅನೇಕ ವಿಡಿಯೋ ವೈರಲ್ ಆಗಿವೆ ಎಂದು ಕೇಳಿದಾಗ, ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಕೇಳಿ ಎಂದರು.

 

Tags:
error: Content is protected !!