ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಆಭರಣ ಮಳಿಗೆಯೊಂದರಲ್ಲಿ ಡಿಸೆಂಬರ್.28ರಂದು ನಡೆದ 10 ಕೋಟಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಿಹಾರ ರಾಜ್ಯದ ಬಾಗಲ್ಪುರ್ ಜಿಲ್ಲೆಯ ಪಂಕಜ್ ಕುಮಾರ್, ದರ್ಬಾಂಗ್ ಜಿಲ್ಲೆಯ ಹೃಷಿಕೇಶ್ ಸಿಂಗ್ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. ಕರ್ನಾಟಕ ಪೊಲೀಸರು ಬಿಹಾರದ ಎಸ್‌ಟಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ ಚಿನ್ನಾಭರಣ ಮಳಿಗೆಯಲ್ಲಿ ಕಳವು ಮಾಡಿದ್ದ ಉಂಗುರ, ಚಿನ್ನದ ಸರ, ಒಂದು ಲಕ್ಷ ರೂಪಾಯಿ ನಗದು, ಬೈಕ್‌ನ್ನು ವಶಕ್ಕೆ ಪಡೆಯಲಾಗಿದೆ.
ಪಂಕಜ್ ಕುಮಾರ್ ವಿರುದ್ಧ ಕರ್ನಾಟಕ, ಬಿಹಾರ, ಜಾರ್ಖಂಡ್, ರಾಜಸ್ಥಾನ ರಾಜ್ಯಗಳಲ್ಲಿ ಕೊಲೆ ಕಳ್ಳತನ ಸೇರಿದಂತೆ ಹಲವು ಪ್ರಕರಣ ದಾಖಲಾಗಿದೆ. ಹೃಷಿಕೇಶ್ ವಿರುದ್ಧ ಬಿಹಾರದಲ್ಲಿ ನಾಲ್ಕು ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಈ ದರೋಡೆಕೋರರನ್ನು ಪತ್ತೆ ಹಚ್ಚಲು ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿದ್ದರು. ದರೋಡೆ ನಡೆದ ಸಂದರ್ಭದಲ್ಲಿ ಆರೋಪಿಗಳ ಚಲನವಲನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದವು, ಇದು ತನಿಖೆಗೆ ಪ್ರಮುಖ ಸುಳಿವು ನೀಡಿತು.
ಈ ಘಟನೆ ವೇಳೆ ಖದೀಮರು ಹಗಲು ಹೊತ್ತಿನಲ್ಲೇ ಚಿನ್ನದಂಗಡಿಗೆ ನುಗ್ಗಿ, ಸುಮಾರು 10 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಘಟನೆಯು ಹುಣಸೂರು ನಗರದಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 150 ನೆಕ್ಲೆಸ್, 70 ಉಂಗುರ, 64 ಬಳೆ, 65 ಚಿನ್ನದ ಸರ, 19 ಕರಿಮಣಿ ಸರ, 13 ವಜ್ರದ ಉಂಗುರ, 17 ಕಿವಿಯೋಲೆ, 12 ಲಾಕೆಟ್, 12 ಕಾಲುಚೈನು, 8 ಬ್ರೇಸ್‌ಲೈಟ್ ಕಳುವಾಗಿದೆ ಎಂದು ಅಂಗಡಿ ಮಾಲೀಕ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಬಿಹಾರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.





