ಹನೂರು : ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಾನುವಾರ ಮೌನಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ, ಉತ್ಸವಾದಿಗಳು ಜರುಗಿದವು.
ಅಮಾವಾಸ್ಯೆ ಪ್ರಯುಕ್ತ ಭಾನುವಾರ ಮುಂಜಾನೆಯಿಂದಲೇ ಮಲೆ ಮಹದೇಶ್ವರಸ್ವಾಮಿ ಮೂರ್ತಿಗೆ ಎಳನೀರಿನ ಅಭಿಷೇಕ, ಹಾಲು, ಪಂಚಾಮೃತ ಅಭಿಷೇಕ ಪೂಜೆ ನೆರವೇರಿತು. ನೈವೇದ್ಯ ಅರ್ಪಿಸಿದ ಬಳಿಕ ಮಹಾ ಮಂಗಳಾರತಿ ಮಾಡಲಾಯಿತು.
ಅಮಾವಾಸ್ಯೆ ಪ್ರಯುಕ್ತ ಕ್ಷೇತ್ರಕ್ಕೆ ವಿವಿಧೆಡೆಯಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸಿ ಮಹದೇಶ್ವರನ ದರ್ಶನ ಪಡೆದರು. ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ, ಬಸವ ವಾಹನ, ಹುಲಿ ವಾಹನ ರುದ್ರಾಕ್ಷಿ ಮಂಟಪ ಸೇವೆಗಳನ್ನು ಮಾಡುವ ಮೂಲಕ ತಮ್ಮ ಹರಕೆಯನ್ನು ಸಲ್ಲಿಸಿದರು.
ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಜನರಿಗೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಽಕಾರದ ವತಿಯಿಂದ ಕುಡಿಯುವ ನೀರು, ದಾಸೋಹ, ನೆರಳಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಮಾವಾಸ್ಯೆ ಪ್ರಯುಕ್ತ ಗರ್ಭಗುಡಿ ಹಾಗೂ ದೇಗುಲದ ಒಳಾಂಗಣವನ್ನು ಒಳಾಂಗಣವನ್ನು ವಿವಿಧ ಪುಷ್ಪಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು.
1.20 ಲಕ್ಷ ಲಾಡು ಮಾರಾಟ:
ಮ.ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದ್ದುದ್ದರಿಂದ 1.5 ಲಕ್ಷ ಲಾಡುಗಳನ್ನು ಸಂಗ್ರಹಿಸಲಾಗಿತ್ತು. ಒಂದು ಲಕ್ಷಕ್ಕೂ ಹೆಚ್ಚು ಲಾಡುಗಳು ಮಾರಾಟವಾಗಿವೆ ಎಂದು ತಿಳಿದುಬಂದಿದೆ. ಭಾನುವಾರ ಒಂದೇ ದಿನ ಸುಮಾರು 1.50 ಲಕ್ಷ ಹೆಚ್ಚು ಜನರು ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಕೆಟ್ಟುನಿಂತ ಬಸ್‌ಗಳು
ಸಮರ್ಪಕ ನಿರ್ವಹಣೆಯಿಲ್ಲದ 3 ಬಸ್‌ಗಳು ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗಿನ ಮಾರ್ಗದಲ್ಲಿ ಕೆಟ್ಟುನಿಂತಿದ್ದವು. ಇದರಿಂದ ಪ್ರಯಾಣಿಕರು ಪರದಾಡಿದರು. ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಆನೆ ತಲೆದಿಂಬದಿಂದಲೇ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಹಾಗೂ ಭಕ್ತಾದಿಗಳು ಎರಡು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆಯಲ್ಲಿ ಕುಳಿತು ಕಾಲ ಕಳೆಯುವಂತಾಯಿತು.
ವಿಶೇಷ ಪ್ರವೇಶ ದ್ವಾರ ಬಂದ್
ಮಲೆ ಮಹದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ವಿಐಪಿಗಳು ಹಾಗೂ ಶಿಫಾರಸು ಪತ್ರದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿಂದ ನೂಕು ನೂಗ್ಗಲು ಉಂಟಾಗಿ ವಿಶೇಷ ಪ್ರವೇಶ ದ್ವಾರ ಗೇಟ್ ನಂಬರ್ ನಾಲ್ಕನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.
500 ರೂ.ಟಿಕೆಟ್‌ಗೂ ಹೆಚ್ಚಿನ ಕ್ಯೂ
ಭಾನುವಾರ ಅಮಾವಾಸ್ಯೆ ಇದ್ದಿದ್ದರಿಂದ ರಾಜ್ಯದ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಹೀಗಾಗಿ ಭಕ್ತಾದಿಗಳು 500 ಟಿಕೆಟ್ ಪಡೆದು ದರ್ಶನ ಪಡೆಯಲು ಮುಂದಾಗಿದ್ದರು. ಆದರೆ ಈ ಟಿಕೆಟ್ ಪಡೆಯಲು ಕೂಡ ಉದ್ದನೆಯ ಸಾಲಿನಲ್ಲಿ ನಿಲ್ಲಬೇಕಾಗಿತ್ತು.





