ಬೆಂಗಳೂರು: ವೇತನ ಹಿಂಬಾಕಿಗೆ ಒತ್ತಾಯಿಸಿ ಜನವರಿ 29ರಂದು ಸಾರಿಗೆ ನೌಕರರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೂ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು, ಈಗಾಗಲೇ ಬೆಂಗಳೂರು ಚಲೋ ಚಳವಳಿ ಕುರಿತಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಜಂಟಿ ಕ್ರಿಯಾ ಸಮಿತಿ ಪತ್ರ ಬರೆದಿದೆ.
ಕಳೆದ 38 ತಿಂಗಳಿನಿಂದ ವೇತನ ಹಿಂಬಾಕಿ ಬಂದಿಲ್ಲ. ಈ ಬಗ್ಗೆ ಹಲವು ಬಾರಿ ನಾವು ಮನವಿ ಮಾಡಿದರೂ ಅದಕ್ಕೆ ಸ್ಪಂದಿಸುತ್ತಿಲ್ಲ. ಹೀಗಾಗಿ ನಾವು ಹೋರಾಟದ ಹಾದಿ ಹಿಡಿಯಬೇಕಿದೆ ಎಂದು ಕ್ರಿಯಾಸಮಿತಿ ಅಧ್ಯಕ್ಷ ಅನಂತಸುಬ್ಬರಾವ್ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈಗಾಗಲೇ ಇನ್ನು ಆರು ತಿಂಗಳ ಕಾಲ ಯಾವುದೇ ಪ್ರತಿಭಟನೆ ಮಾಡುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಲಾಗಿದ್ದು, ಈ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಪ್ರಸ್ತುತ ಸಾರಿಗೆ ನೌಕರರು ಪ್ರತಿಭಟನೆ ಸಂಬಂಧ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಈಗ ಕುತೂಹಲ ಮೂಡಿಸಿದೆ.




