Mysore
18
scattered clouds

Social Media

ಶನಿವಾರ, 17 ಜನವರಿ 2026
Light
Dark

ಎರಡು ವರ್ಷಗಳಿಂದಲೂ ನಿದ್ದೆಗೆ ಜಾರಿದ ರಂಗಾಯಣದ ವೆಬ್‌ಸೈಟ್!

ಬಹುರೂಪಿ ಬೆಳ್ಳಿಹಬ್ಬದ ಮಾಹಿತಿ ಸಾರ್ವಜನಿಕರಿಗೆ ತಲುಪಿಸಲು ವಿಫಲ

ಮೈಸೂರು : ನಗರದ ರಂಗಾಯಣದ ಬಹುರೂಪಿಗೆ ಈ ಬಾರಿ ಬೆಳ್ಳಿಹಬ್ಬದ ಸಂಭ್ರಮ. ಅದನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ‘ಬಹುರೂಪಿ ಬಾಬಾಸಾಹೇಬ್’ ರಾಷ್ಟ್ರೀಯ ನಾಟಕೋತ್ಸವವನ್ನು ಹಮ್ಮಿಕೊಂಡಿದ್ದು, ಅಲ್ಲಿನ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗಿವೆ. ಸಾಮಾನ್ಯವಾಗಿ ಇಂತಹ ನಾಟಕೋತ್ಸವದ ಮಾಹಿತಿಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ಯಾವುದೇ ಗೊಂದಲಗಳಿಲ್ಲದೆ ತಲುಪಿಸಲು ಅಧಿಕೃತವಾಗಿ ವೆಬ್‌ಸೈಟ್ ಇದೆ. ಆದರೆ, ಈ ವೆಬ್‌ಸೈಟ್ ಸುಮಾರು ಎರಡು ವರ್ಷಗಳಿಂದ ನಿದ್ದೆಗೆ ಜಾರಿದೆ.

ಹೌದು. ಮೈಸೂರು ರಂಗಾಯಣದ ಅಧಿಕೃತ ವೆಬ್‌ಸೈಟ್ rangayanamysore.karnataka.gov.in ಸದ್ಯಕ್ಕೆ ತಾಂತ್ರಿಕವಾಗಿ ಲೈವ್ ಆಗಿದ್ದರೂ, ಅದರಲ್ಲಿ ಹೊಸ ಮಾಹಿತಿಗಳ ಕೊರತೆ ಗಮನಾರ್ಹವಾಗಿ ಕಾಡುತ್ತಿದೆ. ವೈಬ್‌ಸೈಟ್ ತೆರೆದಾಗ ಕಾಣುವುದು 2024ರ ಚಿಣ್ಣರಮೇಳ, ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ, ಮಾತಿನ ಮನೆ ಕಾರ್ಯಕ್ರಮ, ಮೈಸೂರು ಸಂಕ್ರಾಂತಿ ರಂಗಹಬ್ಬ ಮುಂತಾದ ಹಳೆಯ ಈವೆಂಟ್‌ಗಳ ವಿವರಗಳು ಮಾತ್ರ. ಹೊಸ ನಾಟಕಗಳ ದಿನಾಂಕ, ಟಿಕೆಟ್ ಬುಕಿಂಗ್, ಅಥವಾ ಇತ್ತೀಚಿನ ಕಾರ್ಯಕ್ರಮಗಳ ಬಗ್ಗೆ ಯಾವುದೇ ಹೊಸ ಅಪ್‌ಡೇಟ್ ಇಲ್ಲ. ಕೆಲವು ವಿಭಾಗಗಳಲ್ಲಿ ” “No news to display” ಎಂದು ತೋರಿಸುತ್ತಿದೆ. ಕರಪತ್ರ, ಬ್ಯಾನರ್‌, ಆಹ್ವಾನ ಪತ್ರಿಕೆ ಇವುಗಳನ್ನು ಮುದ್ರಿಸಿ ಪ್ರಕಟಿಸಿದ್ದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹುಡುಕುವವರಿಗೆ ರಂಗಾಯಣದ ವೆಬ್‌ಸೈಟ್‌ ನಿಷ್ಕ್ರೀಯವಾಗಿರುವುದು ಬೇಸರ ತರಿಸಿದೆ.

25ನೇ ಬಹುರೂಪಿ ಬೆಳ್ಳಿ ಹಬ್ಬವು `ಬಹುರೂಪಿ ಬಾಬಾ ಸಾಹೇಬ್-ಸಮಾನತೆಯ ನಡಿಗೆ’ ಥೀಮ್‌ನೊಂದಿಗೆ ಜನವರಿ 11ರಿಂದ ಆರಂಭವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು, ಸಾಮಾಜಿಕ ನ್ಯಾಯ, ಸಮಾನತೆಯನ್ನು ರಂಗದ ಮೇಲೆ ತಂದು ರಂಗಾಸಕ್ತರನ್ನು ಆಕರ್ಷಿಸುತ್ತಿದೆ. ರಾಷ್ಟ್ರೀಯ ಮಟ್ಟದ ನಾಟಕಗಳು, ಮಕ್ಕಳ ಬಹುರೂಪಿ, ಚಲನಚಿತ್ರೋತ್ಸವ, ಜನಪದ ಕಲೆಗಳು, ಪುಸ್ತಕ ಮೇಳ, ಕರಕುಶಲ ಪ್ರದರ್ಶನ, ದೇಸಿ ಆಹಾರೋತ್ಸವ, ಚಿತ್ರಕಲೆ ಪ್ರದರ್ಶನ, ರಸ್ತೆ ನಾಟಕಗಳು ಹೀಗೆ ಎಲ್ಲವೂ ಒಟ್ಟಿಗೆ ರಂಗಾಯಣವನ್ನು ಒಂದು ಸಾಂಸ್ಕೃತಿಕ ಹಬ್ಬವನ್ನಾಗಿ ಮಾಡಿದೆ. ಆದರೆ ಇಷ್ಟೆಲ್ಲಾ ಇದ್ದರೂ ಅಧಿಕೃತ ವೆಬ್‌ಸೈಟ್‌ನಲ್ಲಿ ಒಂದೇ ಒಂದು ಅಪ್‌ಡೇಟ್ ಇಲ್ಲದಿರುವುದು ರಂಗಾಯಣಕ್ಕೆ ಡಿಜಿಟಲ್ ಸ್ಪರ್ಶದ ಕೊರತೆಯಿದೆ ಎಂದು ತೋರಿಸುತ್ತದೆ.

ನಿರ್ದೇಶಕ ಸತೀಶ್ ತಿಪಟೂರು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಬೆಳ್ಳಿಹಬ್ಬ ಆಚರಣೆಗೆ ಪೂರ್ವಭಾವಿಯಾಗಿ 2025ರ ನವೆಂಬರ್‌ನಿಂದ ವಾರಾಂತ್ಯ ನಾಟಕೋತ್ಸವಗಳು ನಡೆದವು. ರಾಜ್ಯದ ಎಲ್ಲ ರಂಗಾಯಣ ಕಲಾವಿದರು ಮೈಸೂರಿನಲ್ಲಿ ಪ್ರದರ್ಶನ ನೀಡಿದರು. ಜನವರಿ 10ರಂದು ನಗರದಾದ್ಯಂತ ಬೀದಿ ನಾಟಕಗಳ ಮೂಲಕ ಪ್ರಚಾರ ಮಾಡಲಾಯಿತು. ಆದರೆ ಈ ಎಲ್ಲ ಭರ್ಜರಿ ಕಾರ್ಯಕ್ರಮಗಳ ಮಾಹಿತಿ ವೆಬ್‌ಸೈಟ್‌ನಲ್ಲಿ ಇನ್ನೂ ಅಪ್‌ಲೋಡ್ ಆಗಿಲ್ಲ!. ಈ ಎಲ್ಲಾ ಮಾಹಿತಿಗಳು ರಂಗಾಯಣದ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದ್ದರೆ ಇನ್ನೂ ಹೆಚ್ಚಿನ ರಂಗಾಸಕ್ತರನ್ನು ರಂಗಾಯಣ ತನ್ನೆಡೆಗೆ ಸೆಳೆಯಬಹುದಿತ್ತು.

ಹೀಗಾಲಾದರೂ ಒಂದು ವಾರಗಳ ಕಾಲ ನಡೆದ ಬಹುರೂಪಿಯ ವಿವಿಧ ನಾಟಕಗಳು, ಚಲನಚಿತ್ರೋತ್ಸವ, ಜಾನಪದ ಉತ್ಸವ, ಮಕ್ಕಳ ರಂಗ ಉತ್ಸವ ಇವುಗಳ ವಿವಿಧ ತುಣುಕುಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುವ ಮೂಲಕ ಬಹುರೂಪಿ ಉತ್ಸವವನ್ನು ಬಹು ಜನರಿಗೆ ರಂಗಾಯಣ ತಲುಪಿಸಬೇಕಾಗಿದೆ.

Tags:
error: Content is protected !!