Mysore
20
clear sky

Social Media

ಶುಕ್ರವಾರ, 16 ಜನವರಿ 2026
Light
Dark

ವಿಜ್ಞಾನಕ್ಕೆ ಕಲೆ,ಸಂಸ್ಕೃತಿ ಸಮ್ಮಿಳಿತವಾಗಬೇಕು : ನಾದಾನಂದನಾಥ ಸ್ವಾಮೀಜಿ

ಮೈಸೂರು : ಎಲ್ಲವನ್ನೂ ಸಾಧ್ಯವಾಗಿಸಿದ ವಿಜ್ಞಾನಕ್ಕೆ ಕಲೆ, ಸಂಸ್ಕೃತಿ ಕೂಡದಿದ್ದರೆ ಮೃಗೀಯ ವರ್ತನೆ ಬರುತ್ತದೆ. ಅಧುನೀಕರಣ ನಮ್ಮ ಮೂಲ ಪರಂಪರೆಯನ್ನು ನಾಶ ಮಾಡುವಂತಿರಬಾರದು ಎಂದು ಯಾಚೇನಹಳ್ಳಿ ಶ್ರೀರಾಮಕೃಷ್ಣ ಸೇವಾ ಕೇಂದ್ರದ ಅಧ್ಯಕ್ಷ ನಾದಾನಂದನಾಥ ಸ್ವಾಮೀಜಿ ಹೇಳಿದರು.

ನೇರಲಕೆರೆಯ ಲೋಕೇಶ್ ಅವರ ಹೇಮಚಂದ್ರ ನಿಲಯದಲ್ಲಿ ಆಯೋಜಿಸಿದ್ದ ದಿ. ಪಟೇಲ್ ಎನ್.ಎನ್. ಪುಟ್ಟಸ್ವಾಮಿಗೌಡ ಪ್ರತಿಷ್ಠಾನ ಮತ್ತು ಮಂಡ್ಯದ ಎಂಆರ್‌ಎಂ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಸಂಕ್ರಾಂತಿ ಕವಿಗೋಷ್ಠಿ, ಕೊತ್ತತ್ತಿ ರಾಜು ಅವರ ಒಗೆವ ಕಲ್ಲು ಶಿವಲಿಂಗ ಕೃತಿ ವಿಮರ್ಶೆ, ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಂಕ್ರಾಂತಿ ರೈತ ಸಂಸ್ಕೃತಿ ಹಬ್ಬ. ನಮ್ಮ ಪೂರ್ವಿಕರು ಸುಗ್ಗಿ ಹಬ್ಬ ಮಾಡಿ ಸಂಭ್ರಮಿಸುತ್ತಿದ್ದರು. ನಮ್ಮ ನೆಲಮೂಲದ ಆಚರಣೆಗಳು ಸಡಿಲವಾಗುತ್ತಿವೆ. ನಗರ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡವರು ಹಬ್ಬಗಳಲ್ಲಿ ತವರು ನೆಲ ಸ್ಪರ್ಶ ಮಾಡಬೇಕು. ಹಬ್ಬಗಳು ಭಾವನಾತ್ಮಕ ಸಂಬಂಧ ಬೆಸೆಯುತ್ತವೆ. ಮನಸ್ಸು ಭಾವನಾತ್ಮಕವಾಗಿ ಅರಳದಿದ್ದರೆ ಶ್ರೇಯಸ್ಸಿಗೆ ಸಹಾಯವಾಗದು ಎಂದು ತಿಳಿಸಿದರು.

ಲೋಕೇಶ್ ಅವರು ತಮ್ಮ ಮನೆಯಂಗಳದಲ್ಲಿ ೨ನೇ ವರ್ಷ ಸಂಕ್ರಾಂತಿ ಕವಿಗೋಷ್ಠಿ ಆಯೋಜಿಸಿ ಹೊಸದೊಂದು ಸಾಹಿತ್ಯಕ, ಸಾಂಸ್ಕೃತಿಕ ಹೆಜ್ಜೆ ಇಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊತ್ತತ್ತಿ ರಾಜು ಅವರ ಒಗೆವ ಕಲ್ಲು ಶಿವಲಿಂಗ ಕೃತಿ ಕುರಿತು ಮಾತನಾಡಿದ ಕವಿ ಟಿ.ಸತೀಶ್ ಜವರೇಗೌಡ, ಸಾಹಿತ್ಯದಲ್ಲಿ ಎಡಪಂಥ,ಬಲಪಂಥ ಇದೆ. ಆದರೆ, ಜೀವಪಂಥ ಮುಖ್ಯ. ಕೊತ್ತತ್ತಿ ರಾಜು ಅವರ ಕವಿತೆಗಳು ಜೀವಪರ ಮತ್ತು ಸತ್ಯದ ಪರವಾಗಿದ್ದು, ಅವರು ಜೀವಪಂಥದ ಕವಿ ಎಂದು ಹೇಳಿದರು.

೧೨ನೇ ಶತಮಾನದಲ್ಲಿ ತಳ ಸಮುದಾಯಗಳ ಜನರಿಗೆ ಕಾಯಕ ನಿಜವಾದ ದೇವರು. ಆ ಕಾಲದಲ್ಲಿ ದೂರ ಇರಿಸಿದ್ದ ಕಾಯಕ ಜೀವಿಗಳನ್ನು ಕರೆದುಕೊಂಡವರು ಬಸವಣ್ಣ. ರಾಷ್ಟ್ರಕವಿ ಕುವೆಂಪು ನೇಗಿಲಿನಲ್ಲಿ ಕರ್ಮ-ಧರ್ಮ ಕಂಡಿದ್ದಾರೆ. ಕೊತ್ತತ್ತಿ ರಾಜು ಅವರು ಒಗೆವ ಕಲ್ಲಿನಲ್ಲಿ ಶಿವಲಿಂಗ ಕಂಡಿದ್ದಾರೆ. ಇದು ಕನ್ನಡ ಸಾಹಿತ್ಯದಲ್ಲಿ ಅನನ್ಯವಾದ ಪರಂಪರೆ ಎಂದರು.

ಅಭಿನಂದನೆ
ಮಾಂಡವ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಸುಮಾರಾಣಿ ಶಂಭು, ಸಾವಯವ ಕೃಷಿಕ ಎಚ್. ಸೋಮಶೇಖರ್, ರಂಗಭೂಮಿ ಕಲಾವಿದ ಎನ್.ಎಂ. ಕುಮಾರಸ್ವಾಮಿ ಅವರನ್ನು ಅಭಿನಂದಿಸಲಾಯಿತು.

ವಕೀಲ ರಮೇಶ್ ನೇರಲಕೆರೆ ಅಧ್ಯಕ್ಷತೆ ವಹಿಸಿದ್ದರು. ಎಂಆರ್‌ಎಂ ಪ್ರಕಾಶನದ ಮಂಜು ಮುತ್ತೇಗೆರೆ, ಜಾನಪದ ವಿವಿ ಸಿಂಡಿಕೇಟ್ ಸದಸ್ಯ ಗೊರವಾಲ ಚಂದ್ರಶೇಖರ್, ತಾಪಂ ಮಾಜಿ ಅಧ್ಯಕ್ಷ ಎ.ಸತೀಶ್, ನಿವೃತ್ತ ಕನ್ನಡ ಪ್ರಾಧ್ಯಾಪಕ ನಾಗರಾಜು ಕೊತ್ತತ್ತಿ, ಎನ್.ಸಿ. ರಮೇಶ್ ನೇರಲಕೆರೆ, ಗಾಮನಹಳ್ಳಿ ಗಾಪಂ ಮಾಜಿ ಅಧ್ಯಕ್ಷ ಎನ್.ಎಸ್.ಮಹೇಶ್ ಮುಂತಾದವರಿದ್ದರು.

Tags:
error: Content is protected !!