ನವದೆಹಲಿ: ನಾಯಕತ್ವ ಬದಲಾವಣೆ ವಿಚಾರ ಗರಿಗೆದರಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಭೇಟಿ ನೀಡಿದ್ದಾರೆ.
ದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನ ಎಂಬುದು ಬಹಿರಂಗವಾಗಿ ಚರ್ಚಿಸುವ ವಿಷಯವಲ್ಲ ಎಂದು ಹೇಳಿದರು.
ದೆಹಲಿ ಪ್ರವಾಸದ ವೇಳೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಾನು ಪಕ್ಷದ ನಾಯಕರನ್ನು ಭೇಟಿ ಮಾಡುವ ಉದ್ದೇಶದಿಂದಲೇ ದೆಹಲಿಗೆ ಬಂದಿದ್ದೇನೆ ನೋಡೋಣ ಎಂದು ಹೇಳಿದರು.
ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಕಾನೂನಾತ್ಮಕ ವಿಚಾರಗಳನ್ನು ಚರ್ಚೆ ಮಾಡಬೇಕಾಗಿದ್ದು, ಹೀಗಾಗಿ ಕಾನೂನು ತಜ್ಞರು ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದೇನೆ ಎಂದು ಹೇಳಿದರು.





